Thursday, September 19, 2024
Homeರಾಜ್ಯKSFCಯಿಂದ 1100 ಕೋಟಿ ರೂ. ಸಾಲ ನೀಡುವ ಗುರಿ

KSFCಯಿಂದ 1100 ಕೋಟಿ ರೂ. ಸಾಲ ನೀಡುವ ಗುರಿ

ಬೆಂಗಳೂರು,ಜು.27- ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 2024-25ನೇ ಹಣಕಾಸು ವರ್ಷದಲ್ಲಿ 1,100 ಕೋಟಿ ರೂ.ಗಳ ಸಾಧಾರಣ ಸಾಲ ಮಂಜೂರಾತಿ ಗುರಿ ಹೊಂದಿದೆ.

ಕೆಎಸ್ಎಫ್ಸಿಯ 65ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ರೇಜು.ಎಂ.ಟಿ ಅವರು, ಸಂಸ್ಥೆಯು ಗುಣಮಟ್ಟದ ಉದ್ಯಮಗಳಿಗೆ ಹಣಕಾಸು ನೆರವು ನೀಡಿ ಆರ್ಥಿಕ ಅಭಿವೃದ್ಧಿಯ ದೂರದೃಷ್ಟಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

2024-25ರಲ್ಲಿ ಸಂಸ್ಥೆಯಲ್ಲಿ ಲಭ್ಯವಿರುವ ಎಲ್ಲಾ ಐದು ಬಡ್ಡಿ ಸಹಾಯಧನ ಸಾಲ ಯೋಜನೆಗಳಿಂದ ಉದ್ದೇಶಿತ ಸಾಲ ಮಂಜೂರಾತಿ ಹಾಗೂ ವಿತರಣೆೆಯ ಗುರಿ ಸಾಧಿಸುವ ನಿರೀಕ್ಷೆಯಿದೆ. ಅಲ್ಲದೆ ಅನುತ್ಪಾದಕ ಆಸ್ತಿಗಳನ್ನು ಮತ್ತಷ್ಟು ಕಡಿಮೆಗೊಳಿಸಲು ಸಂಸ್ಥೆಯು ಹೆಚ್ಚಿನ ಒತ್ತು ನೀಡಲಿದೆ ಎಂದು ಹೇಳಿದ್ದಾರೆ.

2023-24ರ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಸಂಸ್ಥೆಯು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ನೂತನವಾಗಿ ಶೇ.5.5ರ ಬಡ್ಡಿ ಸಹಾಯಧನ ಸಾಲ ಯೋಜನೆಗಳನ್ನು ಹಿಂದುಳಿದ ವರ್ಗಗಳ (ಪ್ರವರ್ಗ-1 ಮತ್ತು ಪ್ರವರ್ಗ-2ಎ ಜಾತಿಗಳಿಗೆ) ಉದ್ಯಮಿಗಳಿಗೆ ಅಲ್ಪ ಸಂಖ್ಯಾತ ಸಮುದಾಯಗಳ ಉದ್ಯಮಿಗಳಿಗೆ ಅನುಷ್ಠಾನಗೊಳಿಸಲಾಯಿತು ಎಂದಿದ್ದಾರೆ.

ಚಾಲ್ತಿಯಲ್ಲಿರುವ ಮಹಿಳಾ ಉದ್ಯಮಿಗಳಿಗೆ ಲಭ್ಯವಿರುವ ಶೇ.4ರ ಬಡ್ಡಿದರ ಸಹಾಯಧನ ಸಾಲ ಯೋಜನೆಯ ಗರಿಷ್ಠ ಮೊತ್ತವನ್ನು 2 ಕೋಟಿ ರೂ.ಗಳಿಂದ 5 ಕೋಟಿ ರೂ.ಗಳಿಗೆ ಹೆಚ್ಚಿಸಲಾಯಿತು. ಚಾಲ್ತಿಯಲ್ಲಿರುವ ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಉತ್ಪಾದನಾ ಘಟಕಗಳಿಗೆ ಶೇ.5.5ರ ಬಡ್ಡಿ ಸಹಾಯಧನ ಸಾಲ ಯೋಜನೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಶೇ.4ರ ಬಡ್ಡಿ ಸಹಾಯಧನ ಸಾಲ ಯೋಜನೆಗಳಡಿ ಯಶಸ್ವಿಯಾಗಿ ಹಣಕಾಸಿನ ನೆರವನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

143.28 ಕೋಟಿ ತೆರಿಗೆಪೂರ್ವ ದಾಖಲೆ ಲಾಭ:
2023-24ನೇ ಸಾಲಿನ ಆರ್ಥಿಕ ಸ್ಥಿತಿಯನ್ನು ಕ್ರೋಡೀಕರಿಸಲಾಗಿದ್ದು, 143.28 ಕೋಟಿ ರೂ. ತೆರಿಗೆ ಪೂರ್ವ ದಾಖಲೆ ಲಾಭವನ್ನು ಹಾಗೂ 115.58 ಕೋಟಿ ರೂ. ತೆರಿಗೆ ನಂತರದ ಲಾಭವನ್ನು ಸಂಸ್ಥೆಯು ಗಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಸಂಸ್ಥೆಯು 2023-24ರ ಹಣಕಾಸು ವರ್ಷದಲ್ಲಿ ವಿವಿಧ ಸಾಲ ಯೋಜನೆಗಳ ಮೂಲಕ 827.13 ಕೋಟಿ ರೂ. ಸಾಲ ಮಂಜೂರಾತಿ ಮಾಡಿದ್ದು, ಇದರಲ್ಲಿ 775.76 ಕೋಟಿ ಮೊತ್ತದ ಮಂಜೂರಾತಿಯು 610 ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಕೈಗಾರಿಕಾ ಉದ್ಯಮಗಳಿಗೆ ನೀಡಲಾಗಿದೆೆ. 2024ರ ಮಾರ್ಚ್ ಅಂತ್ಯದವರೆಗೆ ಸಂಚಿತ ಸಾಲ ಮಂಜೂರಾತಿಯ ಮೊತ್ತವು 20,507.86 ಕೋಟಿ ರೂ.ಗಳನ್ನು 1,76,486 ಉದ್ಯಮಗಳಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಹಣಕಾಸು ವರ್ಷದಲ್ಲಿ 613.04 ಕೋಟಿ ರೂ. ಸಾಲ ವಿತರಿಸಿದ್ದು, 2023-24ರ ಮಾರ್ಚ್ ಅಂತ್ಯದವರೆಗೆ ಸಂಚಿತ ವಿತರಣೆಯ ಮೊತ್ತ 15,835.14 ಕೋಟಿ ರೂ.ಗಳಷ್ಟಾಗಿದೆ. ಹಣಕಾಸು ವರ್ಷ 2023-24ರಲ್ಲಿ 820.85 ಕೋಟಿ ರೂ. ಸಾಲ ವಸೂಲಾತಿ ಮಾಡಲಾಗಿದೆ ಮತ್ತು 257.08 ಕೋಟಿ ರೂ. ಬಡ್ಡಿ ಮೊತ್ತವು ವಸೂಲಾತಿಯಾಗಿದೆ. 2024ರ ಮಾರ್ಚ್ ಅಂತ್ಯದವರೆಗೆ ಸಂಚಿತ ವಸೂಲಾತಿಯ ಮೊತ್ತವು ರೂ.20,844.49 ಕೋಟಿಗಳಷ್ಟಾಗಿರುತ್ತದೆ. ಹಾಗೆಯೇ 2022-23ರಲ್ಲಿ ಶೇ.3.51ರಷ್ಟಿದ್ದ ನಿವ್ವಳ ಅನುತ್ಪಾದಕ ಆಸ್ತಿಯು ಪ್ರಸಕ್ತ ಹಣಕಾಸು ವರ್ಷ 2023-24ರಲ್ಲಿ ಶೇ.3.43ಕ್ಕೆ ಇಳಿಕೆಯಾಗಿದೆ ಎಂದು ಅಂಕಿ-ಅಂಶಗಳ ವಿವರ ನೀಡಿದ್ದಾರೆ.

ಸಾಲ ಮಂಜೂರಾತಿಯ ವಿವರಗಳು:
ಸಂಸ್ಥೆಯ ಸ್ಥಾಪಿತ ದಿನದಿಂದ 2024ರ ಮಾರ್ಚ್ 31 ಅಂತ್ಯದವರೆಗೆ 31,706ಕ್ಕೂ ಹೆಚ್ಚಿನ ಮಹಿಳಾ ಉದ್ಯಮಿಗಳಿಗೆ 5,174.09 ಕೋಟಿ ರೂ.ಗಳ ಸಾಲ ಮಂಜೂರಾತಿ ಮಾಡಲಾಗಿದೆ. ಮುಂದುವರೆದು 22,636 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ 3,082.67 ಕೋಟಿ ರೂ.ಗಳಿಗೂ ಅಧಿಕ ಸಾಲ ಮಂಜೂರಾತಿ ನೆರವನ್ನು ನೀಡಿರುತ್ತದೆ ಹಾಗೂ 41,321 ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತ ಉದ್ಯಮಿಗಳಿಗೂ ಸುಮಾರು ರೂ.1,993.50 ಕೋಟಿಗಳ ಸಾಲ ಮಂಜೂರಾತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆಕರ್ಷಕ ಸಹಾಯಧನ ಸಾಲ ಯೋಜನೆಯಡಿ ನೆರವು:
2023-24ರಲ್ಲಿ ಸಂಸ್ಥೆಯು ರಾಜ್ಯ ಸರ್ಕಾರದ ಬೆಂಬಲದೊಂದಿಗೆ ರೂಪಿತವಾದ ವಿವಿಧ ಬಡ್ಡಿ ಸಹಾಯಧನ ಸಾಲ ಯೋಜನೆಗಳಲ್ಲಿ ಮಹಿಳಾ ಉದ್ಯಮಿಗಳಿಗೆ ಲಭ್ಯವಿರುವ ಶೇ.4ರ ಬಡ್ಡಿದರ ಸಹಾಯಧನ ಸಾಲ ಯೋಜನೆಯಡಿ 103 ಮಹಿಳಾ ಉದ್ಯಮಿಗಳಿಗೆ 165.91 ಕೋಟಿ ರೂ. ಸಾಲ ಮಂಜೂರಾತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯಡಿ 2024ರ ಮಾರ್ಚ್ 31ರ ಅಂತ್ಯದವರೆಗೆ ಒಟ್ಟು 1,214.39 ಕೋಟಿ ರೂ. ಸಂಚಿತ ನೆರವನ್ನು 1,460 ಮಹಿಳಾ ಉದ್ಯಮಿಗಳಿಂದ ಸ್ಥಾಪಿಸಲ್ಪಟ್ಟ ಉದ್ಯಮಗಳಿಗೆ ನೀಡಲಾಗಿದೆ. ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಉತ್ಪಾದನಾ ಘಟಕಗಳಿಗೆ ಲಭ್ಯವಿರುವ ಶೇ.5.5ರ ಬಡ್ಡಿ ಸಹಾಯಧನ ಸಾಲ ಯೋಜನೆಯಡಿ 240 ಘಟಕಗಳಿಗೆ 295.85 ಕೋಟಿ ರೂ.ಸಾಲ ಮಂಜೂರಾತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಹಣಕಾಸು ವರ್ಷದ ಅಂತ್ಯದವರೆಗೆ, 1,439 ಉದ್ಯಮಗಳಿಗೆೆ 1,658.03 ಕೋಟಿ ರೂ. ಸಂಚಿತ ನೆರವು ನೀಡಲಾಗಿದೆ. ಹಾಗೆಯೇ ಸದರಿ ವರ್ಷದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಲಭ್ಯವಿರುವ ಶೇ.4ರ ಬಡ್ಡಿ ಸಹಾಯಧನ ಸಾಲ ಯೋಜನೆಯಡಿ 269 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ 315.67 ಕೋಟಿ ರೂ. ಸಾಲ ಮಂಜೂರಾತಿ ಮಾಡಲಾಗಿದೆ. ಈ ಯೋಜನೆಯಡಿ ಸದರಿ ಹಣಕಾಸು ವರ್ಷದ ಅಂತ್ಯದವರೆಗೆ 2,544.51 ಕೋಟಿ ರೂ. ಸಂಚಿತ ನೆರವನ್ನು 3,993 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಂದ ಸ್ಥಾಪಿಸಲ್ಪಟ್ಟ ಉದ್ಯಮಗಳಿಗೆ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ರಾಜ್ಯ ಸರ್ಕಾರದ ನೆರವು :
2023-24ರ ಹಣಕಾಸು ವರ್ಷದಲ್ಲಿ ಕರ್ನಾಟಕ ಸರ್ಕಾರವು ಸಂಸ್ಥೆಗೆ 159.67 ಕೋಟಿ ರೂ. ಬಡ್ಡಿ ಸಹಾಯಧನ ಸಾಲ ಯೋಜನೆಗಳಿಗೆ ಪೂರಕ ನೆರವನ್ನು ಒದಗಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯಮಿಗಳು ಸ್ಥಾಪಿಸುವ ಜವಳಿ ಮತ್ತು ಕೈಮಗ್ಗ ಉದ್ಯಮಗಳಿಗೆೆ ವಿಶೇಷ ಅನುದಾನ ಯೋಜನೆಯಡಿ ಕರ್ನಾಟಕ ಸರ್ಕಾರವು ರೂ.12.75 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಅವರು ವಿವರಣೆ ನೀಡಿದ್ದಾರೆ.

RELATED ARTICLES

Latest News