ಮಂಗಳೂರು,ಜು.27- ಸತತವಾಗಿ ಸುರಿಯುತ್ತಿರುವ ಮಳೆಯಿಂದ ಶಿರಾಡಿಘಾಟ್ ಪ್ರದೇಶದ ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂ ಕುಸಿತ ಸಂಭವಿಸಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಕೆಲ ರೈಲು ಸಂಚಾರಗಳನ್ನು ರದ್ದುಗೊಳಿಸಲಾಗಿದೆ.
ಇಂದು ಹೊರಡುವ ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ ಪ್ರೆಸ್ ಹಾಗೂ ಕಾರವಾರ-ಯಶವಂತಪುರ ಎಕ್ಸ್ ಪ್ರೆಸ್ ರೈಲುಗಳನ್ನು ರದ್ದುಪಡಿಸಲಾಗಿದೆ. ಸಕಲೇಶಪುರ ಬಳಿಯ ಶಿರಾಡಿಘಾಟ್ ಪ್ರದೇಶದ ಎಡಕುಮೇರಿ ಕಡಗರವಳ್ಳಿ ನಡುವೆ ರೈಲು ಹಳಿಯ ಮೇಲೆ ಗುಡ್ಡ ಕುಸಿತ ಉಂಟಾದ ಹಿನ್ನಲೆಯಲ್ಲಿ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.
ಅದೇ ರೀತಿ ಹಾಸನ-ಮಂಗಳೂರು ನಡುವೆ ಸಂಚರಿಸುವ ಹಲವು ರೈಲುಗಳಿಗೆ ಕೇರಳ-ತಮಿಳುನಾಡು ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.ರಾತ್ರಿ 8 ಗಂಟೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ಕಣ್ಣೂರು-ಬೆಂಗಳೂರು ರೈಲು ನಿನ್ನೆ ರಾತ್ರಿ 9.30 ಆದರೂ ಹೊರಟಿರಲಿಲ್ಲ.
ರೈಲು ಸಾಗುವ ಹಾದಿಯಲ್ಲಿ ಭೂಕುಸಿತವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ರೈಲು ಟಿಕೆಟ್ ಪಡೆದಿದ್ದ ಪ್ರಯಾಣಿಕರು ಕಾದು ಕಾದು ಸಂಕಷ್ಟ ಅನುಭವಿಸಬೇಕಾಯಿತು.ಕೆಲ ಪ್ರಯಾಣಿಕರು ಬಸ್‌ನಲ್ಲಿ ಬೆಂಗಳೂರಿಗೆ ತೆರಳಿದರು. 9.45ರ ಸುಮಾರಿಗೆ ಈ ರೈಲು ಮರಳಿ ಕೇರಳದತ್ತ ಸಂಚರಿಸಿ ಸೇಲಂ ಮಾರ್ಗವಾಗಿ ಬೆಂಗಳೂರು ಸಂಚರಿಸಿತು.
ಇನ್ನು ಕೆಲವು ರೈಲುಗಳ ಸಂಚಾರ ಮಾರ್ಪಾಡು ಮಾಡಲಾಗಿದೆ. ಏಳು ರೈಲುಗಳ ಸಂಚಾರವನ್ನು ಮಾರ್ಗ ಬದಲಾವಣೆ ಮಾಡಲಾಗಿದೆ. ವಿಜಯಪುರ ಎಕ್ಸ್ ಪ್ರೆಸ್ ರೈಲು ಕಾರವಾರ, ಮಡಗಾವ್, ಕ್ಯಾಲರಕ್, ಲೋಂಡಾ ಜಂಕ್ಷನ್, ಹುಬ್ಬಳ್ಳಿ ಮೂಲಕ ವಿಜಯಪುರಕ್ಕೆ ತೆರಳಿದೆ. ಸುಬ್ರಹಣ್ಯ-ಸಕಲೇಶಪುರ ನಡುವೆ ಭೂ ಕುಸಿತ ಸಂಭವಿಸಿ ರೈಲು ರದ್ದುಪಡಿಸಿದ ಕಾರಣ ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಸಮರ್ಪಕ ವ್ಯವಸ್ಥೆ ಮಾಡಿಲ್ಲ ಎಂದು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ರೈಲ್ವೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.