ನಾಂಟೆಕ್ರೆ (ಫ್ರಾನ್ಸ್ ), ಜು.28- ಪ್ಯಾರಿಸ್ ಒಲಿಂಪಿಕ್ಸ್ ನ ಬಹು ನಿರೀಕ್ಷಿತ ಸ್ಪರ್ಧೆಗಳಲ್ಲಿ ಒಂದೆನಿಸಿದ್ದ ಮಹಿಳೆಯರ 400 ಮೀಟರ್ ಫ್ರೀ ಸ್ಟೈಲ್ ಈಜು ಸ್ಪರ್ಧೆಯಲ್ಲಿ ಏರಿಯಾರ್ನೆ ಟಿಟಸ್ ಅವರು ಸ್ವರ್ಣಪದಕ ಕೊರಳಿಗೆ ಹಾಕಿಕೊಂಡಿದ್ದಾರೆ.ಲಾ ಡಿಫೆನ್ಸ್ ಅರೆನಾದಲ್ಲಿ ನಿನ್ನೆ ರಾತ್ರಿ ಪ್ರಾರಂಭಗೊಂಡ ಈಜು ಸ್ಪರ್ಧೆಗಳಲ್ಲಿ ಮೊದಲನೆಯದಾದ 400 ಮೀಟರ್ ಫ್ರೀ ಸ್ಟೈಲ್‌ನಲ್ಲಿ ಕಾಟೀ ಲೆಡ್ಕಿ ಅವರಿಗಿಂತ ಟಿಟಸ್ ಶುರುವಿನಿಂದಲೂ ಮುನ್ನಡೆ ಪಡೆದರು.
ಟರ್ಮಿನೇಟರ್ ಎಂದು ಹೆಸರಾಗಿರುವ ಆಸ್ಟ್ರೇಲಿಯಾದ ಈಜುತಾರೆ ಟಿಟಸ್ ಅಮೆರಿಕದ ಈಜುಪಟು ಲೆಡ್ಕಿ ಅವರಿಗೆ ಎರಡನೆ ಬಾರಿಗೆ ಒಲಿಂಪಿಕ್ಸ್ ನಲ್ಲಿ ನೇರ ಸೋಲುಣಿಸಿದರು.ಗೆಲುವು ಸಾಧಿಸುತ್ತಿದ್ದ ಹಾಗೆ ಡೆಕ್ ಮೇಲೆ ಟಿಟಸ್ ಅಭಿಮಾನಿಗಳೆಡೆಗೆ ಮುಗುಳ್ನಗುತ್ತ ಕೈ ಬೀಸಿದರು.ಈಜುಕೊಳದಲ್ಲಿ ತಮ ನಂತರದ ಸ್ಥಾನದಲ್ಲಿ ಬರುವ ಲೆಡ್ಕೀ ಅವರನ್ನು ಟಿಟಸ್ ಆತವಿಶ್ವಾಸದಿಂದ ಮಣಿಸಿದರು.
ವಾಸ್ತವವಾಗಿ ಟಿಟಸ್ ಕೆನಡಾದ 17 ವರ್ಷದ ಈಜುಪಟು ಫಿನೋಮ್ ಸಮರ್ ಮೆಕಿಂಟೋಷ್ ಅವರಿಂದ ಕಠಿಣ ಸವಾಲು ಎದುರಿಸಿದರು. ಆದರೆ, ಸರಾಗವಾಗಿ ಈಜಿ ಮೂರು ನಿಮಿಷ 27.49 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.ಮೆಕಿಂಟೋಷ್ 3 ನಿಮಿಷ, 58.37 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ರಜತ ಪದಕ ಪಡೆದರೆ, ಇವರ ಸನಿಹವೂ ಬಾರದ ಲೆಡ್ಕಿ 4 ನಿಮಿಷ 00.86 ಸೆಕೆಂಡ್‌ಗಳನ್ನು ತೆಗೆದುಕೊಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ರಿಲೇಯಲ್ಲೂ ಸ್ವರ್ಣ:
ಮಹಿಳೆಯರ 4*100 ಮೀಟರ್ ಫ್ರೀ ಸ್ಟೈಲ್ ಈಜು ರಿಲೇ ಸ್ಪರ್ಧೆಯಲ್ಲಿ ಮೊಲ್ಲೀ ಓ ಚಲ್ಲಾಘನ್, ಶಾನ್ಯಾಜಾಕ್, ಎಮಾಮೆಕಿಯೋನ್ ಮತ್ತು ಮೆಗ್ ಹ್ಯಾರಿಸ್ ಅವರನ್ನೊಳಗೊಂಡ ಆಸ್ಟ್ರೇಲಿಯಾ ತಂಡ 3:28:92ರಲ್ಲಿ ಗುರಿ ಕ್ರಮಿಸಿ ಒಲಂಪಿಕ್ ದಾಖಲೆ ಸ್ಥಾಪಿಸಿ ಚಿನ್ನಕ್ಕೆ ಕೊರಳೊಡ್ಡಿತು.
ಅಮೆರಿಕದ ಕೇಟ್ ಡಗ್ಲಾಸ್, ಗ್ರೆಚೆನ್ ವಾಲ್ಷ್ , ಟೋರಿ ಹಸ್ಕೆ ಮತ್ತು ಸಿಮೋನ್ ಮ್ಯಾನ್ಯುಯೆಲ್ ಅವರು 3:30:20 ನಿಮಿಷಗಳಲ್ಲಿ ಗುರಿಮುಟ್ಟಿ ರಜತ ಪದಕ ತಮದಾಗಿಸಿಕೊಂಡರು. ಚೀನಾ ತಂಡ ಕಂಚಿನ ಪದಕ ಗಳಿಸಿತು. ಟೋಕಿಯೋ ಒಲಿಂಪಿಕ್ಸ್ ಗೂ ಮುನ್ನ ಬೆಳಕಿಗೆ ಬಂದ ಉದ್ದೀಪನ ಮದ್ದು ಸೇವನೆಯ ಪ್ರಕರಣದ ಬಳಿಕ ಇದು ಚೀನಾ ಪಡೆಯುತ್ತಿರುವ ಮೊದಲ ಈಜು ಪದಕವಾಗಿದೆ.
ಪುರುಷರ ರಿಲೇ:
ಪುರುಷರ 4*100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಅಮೆರಿಕದ ಜಾಕ್ ಅಲೆಕ್ಸಿ ಮತ್ತು ಕ್ರಿಸ್ ಗಿಲಿಯಾನೋ ಉತ್ತಮ ಆರಂಭ ಒದಗಿಸಿದರು. ಬಳಿಕ ತಂಡದ ಹಂಟರ್ ಆರ್ಮ್‌ಸ್ಟ್ರಾಂಗ್ ಅವರು ಅತಿ ವೇಗವಾಗಿ ಈಜಿ ಕೊನೆಯವರಾದ ಡ್ರೆಸೆಲ್ ಅವರಿಗೆ ಗಣನೀಯ ಮುನ್ನಡೆ ತಂದುಕೊಟ್ಟರು.
ಡ್ರೆಸೆಲ್ ಅವರು ಮೊದಲಿಗರಾಗಿ ಗುರಿ ಮುಟ್ಟಿದರು. ಅಂತಿಮವಾಗಿ ಅಮೆರಿಕ ತಂಡ 3:09.28 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿತು.ಕೈರ್ ಚಾಮರ್‌ರಸ ನೇತೃತ್ವದ ಆಸ್ಟ್ರೇಲಿಯಾ ತಂಡ (3:10:35) ಬೆಳ್ಳಿ ಮತ್ತು ಇಟಲಿ (3:10:70) ತಂಡ ಕಂಚಿನ ಪದಕ ಪಡೆದವು.