Friday, September 20, 2024
Homeರಾಜಕೀಯ | Politicsಶೀಘ್ರದಲ್ಲೇ ದೇವರು ನನಗೆ ಸಿಎಂ ಆಗುವ ಅವಕಾಶ ಕೊಡಲಿದ್ದಾನೆ : ಹೆಚ್ಡಿಕೆ

ಶೀಘ್ರದಲ್ಲೇ ದೇವರು ನನಗೆ ಸಿಎಂ ಆಗುವ ಅವಕಾಶ ಕೊಡಲಿದ್ದಾನೆ : ಹೆಚ್ಡಿಕೆ

ಮೈಸೂರು,ಜು.28- ಶೀಘ್ರವಾಗಿಯೇ ತಮಗೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ದೇವರು ಕೊಡಲಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್‌‍ ನಾಯಕರು ಅವರಪ್ಪರಾಣೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿದ್ದರು. ಆದರೆ ಅದೇ ಅವಧಿಯಲ್ಲೇ ನನಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆಯಿತು ಎಂದು ಹೇಳಿದರು.

ಈಗ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿಯಾಗಿ ರಾಮನಗರದ ಹೆಸರು ಬದಲಾವಣೆ ಮಾಡುವ ಅವಕಾಶ ಹಣೆಯಲ್ಲಿ ಬರೆದಿಲ್ಲ ಎಂದು ಹೇಳಿದ್ದಾರೆ. ಅವರು ಯಾವ ರೀತಿ ಪದಗಳನ್ನು ಬಳಕೆ ಮಾಡುತ್ತಾರೋ, ಆದಷ್ಟು ಬೇಗ ಅವು ಜಾರಿಗೆ ಬರುತ್ತವೆ. ತಮಗೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಶೀಘ್ರ ಬರಲಿದೆ ಎಂದಿದ್ದಾರೆ.ತಮಗೆ ಜನರ ಮತ್ತು ದೇವರ ಆಶೀರ್ವಾದ ಸಾಕು. ಡಿ.ಕೆ.ಶಿವಕುಮಾರ್‌ ಹಾಗೂ ಇತರರ ಆಶೀರ್ವಾದ ಬೇಡ ಎಂದು ಹೇಳಿದರು.

ಅನಂತರ ಮೈಸೂರಿನ ಪ್ರೆಸ್‌‍ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸರ್ಕಾರದ ನಡವಳಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ ಕುಮಾರಸ್ವಾಮಿಯವರು ಉದ್ಯೋಗ ಅವಕಾಶ, ಕೌಶಲ್ಯಾಭಿವೃದ್ಧಿ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಇದು ಯಾವುದೋ ಒಂದು ರಾಜ್ಯಕ್ಕೆ ಸೀಮಿತವಲ್ಲ. ಕರ್ನಾಟಕಕ್ಕೂ ಲಾಭವಾಗಲಿದೆ ಎಂದರು.

ಕೌಶಲ್ಯಾಭಿವೃದ್ಧಿಗೆ 2015 ರಲ್ಲಿ 1.50 ಲಕ್ಷ ಕೋಟಿ ನೀಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 7.50 ಲಕ್ಷ ಕೋಟಿ ನೀಡಲಾಗಿದೆ. ಕಳೆದ 8 ವರ್ಷಗಳಲ್ಲಿ ಅದು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಸುಮಾರು 11,000 ಖಾಸಗಿ ಕಂಪನಿಗಳು ಉಪಯೋಗ ಮಾಡಿಕೊಂಡಿವೆ. ಆ ಕಂಪನಿಗಳ ಮೂಲಕ ಕೌಶಲ್ಯಾಭಿವೃದ್ಧಿ ತರಬೇತಿ ಕೊಡಿಸಲಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ 2 ಲಕ್ಷ ಕೋಟಿ ನೀಡಲಾಗಿದೆ. ಕೃಷಿ ಹಾಗೂ ಅದರ ಚಟುವಟಿಕೆಗಳಿಗೆ 1.50 ಲಕ್ಷ ಕೋಟಿ ಒದಗಿಸಲಾಗಿದೆ.ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದ್ದು, ಇದು ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ರಾಜ್ಯಕ್ಕೆ ಕೇಂದ್ರದಿಂದ ಆಗಬೇಕಿರುವ ಕೆಲಸಗಳ ಬಗ್ಗೆ ಕರ್ನಾಟಕ ಸರ್ಕಾರ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ದೆಹಲಿಗೆ ಬಂದು ಆಯಾ ಇಲಾಖೆಗಳ ಅಧಿಕಾರಿಗಳು, ಸಚಿವರೊಂದಿಗೆ ಸಭೆ ನಡೆಸಿ, ಚರ್ಚಿಸಿ ಒತ್ತಡ ಹೇರಿದ್ದಾರೆ.

ಆದರೆ ಕರ್ನಾಟಕ ಸರ್ಕಾರ ಕರ್ನಾಟಕ ಭವನದಲ್ಲಿ ಸಂಸದರ ಸಭೆ ಕರೆದು ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳ ಬುಕ್‌ಲೆಟ್‌ ನೀಡಿ ಇದನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಸಂಸತ್‌ನಲ್ಲಿ ಪ್ರಸ್ತಾಪಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಮುಖ್ಯಮಂತ್ರಿಯಾಗಿ ಹಾಗೂ ಕೇಂದ್ರ ಸಚಿವರಾಗಿ ನನಗೂ ಸ್ವಲ್ಪ ಅನುಭವವಿದೆ. ರಾಜ್ಯಸರ್ಕಾರದ ನಡವಳಿಕೆ ಸರಿಯಿಲ್ಲ. ಕೇಂದ್ರಸರ್ಕಾರವನ್ನು ಟೀಕೆ ಮಾಡಿ ತಿರುಗುತ್ತಿದ್ದರೆ ಯಾವುದೇ ಕೆಲಸಗಳಾಗುವುದಿಲ್ಲ ಎಂದರು.

ಭದ್ರಾ ಮೇಲ್ದಂಡೆಗೆ 5,300 ಕೋಟಿ, ಬೆಂಗಳೂರು ಹೊರವಲಯದ ಪೆರಿಫೆರಲ್‌ ರಿಂಗ್‌ ರಸ್ತೆಗೆ 3 ಸಾವಿರ ಕೋಟಿ ಬಾಕಿ ಇದೆ ಎಂದು ಕಾಂಗ್ರೆಸ್‌‍ ಹೇಳುತ್ತಿದೆ. ಪೆರಿಫೆರಲ್‌ ರಿಂಗ್‌ ರಸ್ತೆ 2008 ರಲ್ಲೇ ನಾನೇ ಪ್ರಸ್ತಾವನೆ ಮಾಡಿದ್ದೆ. ಆಗ 3 ಸಾವಿರ ಕೋಟಿ ರೂ. ಒಟ್ಟು ವೆಚ್ಚವಿತ್ತು. ಈಗ ಅದು ಹಲವು ಪಟ್ಟು ಹೆಚ್ಚಾಗಿದೆ. ಈವರೆಗೂ ರಾಜ್ಯಸರ್ಕಾರ ಇದನ್ನು ಏಕೆ ಆದ್ಯತೆ ಮೇರೆಗೆ ಪರಿಗಣಿಸಲಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಪೆರಿಫೆರಲ್‌ ರಿಂಗ್‌ ರಸ್ತೆಗೆ 3 ಸಾವಿರ ಕೋಟಿ ರೂ. ಕೊಟ್ಟರೂ ಒಟ್ಟು ಯೋಜನಾ ವೆಚ್ಚ 20 ಸಾವಿರ ಕೋಟಿ ಇದೆ. ಅದಕ್ಕೆ ಬಾಕಿ ಹಣವನ್ನು ಸರ್ಕಾರ ಎಲ್ಲಿಂದ ತರಲಿದೆ ಎಂದು ಪ್ರಶ್ನಿಸಿದರು.

ಈ ಹಿಂದೆ ಕೆರೆ ಪುನಶ್ಚೇತನಕ್ಕೆ ನೀಡಿದ್ದ ಹಣವನ್ನು ರಾಜ್ಯಸರ್ಕಾರ ದುರುಪಯೋಗಪಡಿಸಿಕೊಂಡಿರುವುದು ಸಿಎಜಿ ವರದಿಯಲ್ಲಿ ಉಲ್ಲೇಖವಿದೆ. ಮೆಗಾಟೆಕ್‌್ಸಟೈಲ್‌ ಪಾರ್ಕ್‌ಗೆ 100 ರಿಂದ 200 ಕೋಟಿ ರೂ. ಬಾಕಿ ಇದೆ. ಯಾದಗಿರಿಯಲ್ಲಿ ಪ್ರಸ್ತಾವಿತ ಯೋಜನೆ ಅನುಷ್ಠಾನಗೊಳಿಸಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿಲ್ಲ. ನಮಲ್ಲಿ ನಾವೇ ಅನ್ಯಾಯ ಮಾಡಿಕೊಳ್ಳುತ್ತಿದ್ದೇವೆ. ಯೋಜನೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಟೀಕೆ ಮಾಡುತ್ತಿರುವುದರಿಂದ ಪ್ರಯೋಜನವಾಗುವುದಿಲ್ಲ ಎಂದರು.

ಈ ಬಾರಿಯ ಬಜೆಟ್‌ನಲ್ಲಿ 45,485 ಕೋಟಿ ರೂ ತೆರಿಗೆ ಹಂಚಿಕೆ ಹಾಗೂ ಅನುದಾನದ ರೂಪದಲ್ಲಿ 15,000 ಕೋಟಿ ಸೇರಿ 60,000 ಕೋಟಿ ರೂ. ಕೇಂದ್ರದಿಂದ ರಾಜ್ಯಕ್ಕೆ ನೆರವು ದೊರೆಯುತ್ತಿದೆ ಎಂದು ಹೇಳಿದರು.

ಇದರ ಜೊತೆಗೆ ಸಾರ್ಟ್‌ಸಿಟಿಗೆ 6,400 ಕೋಟಿ ರೂ. ಅನುದಾನ ದೊರೆತಿದ್ದು, 904 ಯೋಜನೆಗಳಿಗೆ 14,480 ಕೋಟಿ ರೂ. ಬಳಕೆಯಾಗಿದೆ ಎಂದ ಅವರು ರಾಜ್ಯಸರ್ಕಾರ ಯಾವುದೇ ಯೋಜನೆಯ ಸವಿಸ್ತಾರ ನೀಲನಕ್ಷೆಯೊಂದಿಗೆ ಬಂದರೆ ನಾನೇ ಇವರಿಗೆ ಬೆಂಬಲ ಕೊಡುತ್ತೇನೆ. ಆದರೆ ಅದಕ್ಕೂ ಮೊದಲು ಇವರು ಹಾದಿಬೀದಿಯಲ್ಲಿ ಟೀಕೆ ಮಾಡುವುದನ್ನು ನಿಲ್ಲಿಸಬೇಕು. ಕುಮಾರಸ್ವಾಮಿ ರಾಜ್ಯಕ್ಕೆ ಬಂದರೆ ಸಚಿವರನ್ನು ಭೇಟಿ ಮಾಡಬಾರದು, ಅಧಿಕಾರಿಗಳ ಸಭೆ ನಡೆಸಬಾರದು ಎಂಬ ಧೋರಣೆಯನ್ನು ಬದಲಿಸಿಕೊಳ್ಳಲಿ ಎಂದರು.

ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಸಮಾಜಕಲ್ಯಾಣ ಇಲಾಖೆಯ ಕಲ್ಲೇಶ್‌ ಎಂಬುವರಿಂದ ದೂರು ಕೊಡಿಸಲಾಗಿದೆ. ಅದೇ ವ್ಯಕ್ತಿಯನ್ನು ಒಂದು ತಿಂಗಳ ಹಿಂದಷ್ಟೇ ಸರ್ಕಾರ ಅಮಾನತುಗೊಳಿಸಿತ್ತು. ಕೇಂದ್ರ ಸರ್ಕಾರ ನೀಡಿದ್ದ 40 ಕೋಟಿ ರೂ. ಅನುದಾನಕ್ಕೆ ಬಳಕೆದಾರರ ಪ್ರಮಾಣ ಪತ್ರ ನೀಡುವಂತೆ 8 ಬಾರಿ ಪತ್ರ ಬರೆದಿದ್ದರು. ಅದಕ್ಕೆ ಪ್ರತ್ಯುತ್ತರ ನೀಡದಿದ್ದರಿಂದ ಸದರಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿತ್ತು ಎಂದು ಹೇಳಿದರು.

RELATED ARTICLES

Latest News