Saturday, April 5, 2025
Homeರಾಜ್ಯಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ, ಕಾಂಗ್ರೆಸ್ ತಪ್ಪು ಪ್ರಚಾರ ಮಾಡುತ್ತಿದೆ : ನಿರ್ಮಲಾ

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ, ಕಾಂಗ್ರೆಸ್ ತಪ್ಪು ಪ್ರಚಾರ ಮಾಡುತ್ತಿದೆ : ನಿರ್ಮಲಾ

ಬೆಂಗಳೂರು,ಜು.28- ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ ಎಂದು ಪುನರುಚ್ಚರಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ರಾಜ್ಯಸರ್ಕಾರ ಆಧಾರ ರಹಿತ ಅಂಕಿಅಂಶಗಳನ್ನು ನೀಡಿ ತಪ್ಪು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ತಮ ಪತ್ರಿಕಾಗೋಷ್ಠಿಯುದ್ದಕ್ಕೂ ಹಿಂದಿನ ಯುಪಿಎ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಾಜ್ಯಕ್ಕೆ ನೀಡಿರುವ ಅಂಕಿ ಅಂಶಗಳನ್ನು ದಾಖಲೆಗಳ ಸಮೇತ ವಿವರ ನೀಡಿದ ನಿರ್ಮಲಾ ಸೀತಾರಾಮನ್‌, ರಾಜ್ಯಸರ್ಕಾರ ಅರೆಬೆಂದ ದಾಖಲೆಗಳನ್ನು ಮುಂದಿಟ್ಟುಕೊಂಡು ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರದ ಬಜೆಟ್‌ನಲ್ಲಿ ಕರ್ನಾಟಕ ಮಾತ್ರವಲ್ಲದೆ ಯಾವುದೇ ರಾಜ್ಯಕ್ಕೂ ನಾವು ಅನ್ಯಾಯ ಮಾಡಿಲ್ಲ. ಆಯಾ ರಾಜ್ಯಗಳಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಅನುದಾನವನ್ನು ನೀಡಿದ್ದೇವೆ. ಯಾವುದೇ ರೀತಿಯ ತಾರತಮ್ಯವೆಸಗಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದಿನ ಯುಪಿಎ ಸರ್ಕಾರ ಕರ್ನಾಟಕಕ್ಕೆ ಎರಡು ಅವಧಿಯಲ್ಲಿ 81,790 ಸಾವಿರ ಕೋಟಿ ಅನುದಾನವನ್ನು ರಾಜ್ಯಕ್ಕೆ ನೀಡಿತ್ತು. ಎನ್‌ಡಿಎ ಸರ್ಕಾರ ಎರಡು ಅವಧಿಯಲ್ಲಿ ರಾಜ್ಯಕ್ಕೆ 2,95,817 ಕೋಟಿ ಅನುದಾನವನ್ನು ಹಂಚಿಕೆ ಮಾಡಿದೆ. ಯುಪಿಎ, ಎನ್‌ಡಿಎ ಗೆ ಹೋಲಿಕೆ ಮಾಡಿದರೆ ನಾವು ನೀಡಿರುವುದು ಮೂರು ಪಟ್ಟು ಹೆಚ್ಚಳವಾಗುತ್ತದೆ ಎಂದು ಸಮರ್ಥನೆ ಮಾಡಿಕೊಂಡರು.

ಯುಪಿಎ ಅವಧಿಯಲ್ಲಿ ವಿವಿಧ ಇಲಾಖೆಗಳಲ್ಲಿ 66 ಸಾವಿರ ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿತ್ತು. 2024ರ ಒಂದೇ ವರ್ಷದಲ್ಲಿ ಎನ್‌ಡಿಎ ಸರ್ಕಾರ 45,485 ಕೋಟಿ ತೆರಿಗೆ ಹಂಚಿಕೆ ಮಾಡಿದೆ. ಇದೇ ವೇಳೆ ಯುಪಿಎ 60,799 ಕೋಟಿ ನೀಡಿದರೆ, ಎನ್‌ಡಿಎ ಸರ್ಕಾರ ಕರ್ನಾಟಕಕ್ಕೆ ಒಟ್ಟು 2,36,955 ಕೋಟಿ ತೆರಿಗೆ ಹಂಚಿಕೆ ಮಾಡಿದೆ. ಇದು ದಾಖಲೆಗಳಲ್ಲಿರುವ ಅಂಕಿ ಅಂಶಗಳು. ಹಾಗಾದರೆ ಕರ್ನಾಟಕಕ್ಕೆ ಅನ್ಯಾಯವಾಗುವ ಮಾತು ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ರೈಲ್ವೆ ಯೋಜನೆಯಡಿ ಕರ್ನಾಟಕಕ್ಕೆ ಯುಪಿಎ ಕೊಟ್ಟಿದ್ದು ಕೇವಲ 834 ಕೋಟಿ ರೂ. ಅನುದಾನ. ಈ ಅವಧಿಯಲ್ಲೇ ನಾವು ರಾಜ್ಯಕ್ಕೆ ವಿವಿಧ ರೈಲ್ವೆ ಯೋಜನೆಗಳಿಗೆ ಒಟ್ಟು 7,559 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದೇವೆ. 640 ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ, 2 ವಂದೇ ಭಾರತ್‌ ರೈಲುಗಳ ಚಾಲನೆ, ತುಮಕೂರಿನಲ್ಲಿ ಮೊದಲ ಕಾರಿಡಾರ್‌ಗೆ ಪ್ರಧಾನಿ ಚಾಲನೆ, ರಾಜ್ಯದ 7 ನಗರಗಳನ್ನು ಸಾರ್ಟ್‌ ಸಿಟಿ ಯೋಜನೆಯಡಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 1 ಲಕ್ಷ ಕೋಟಿಗೂ ಹೆಚ್ಚು ಹಣ ಕರ್ನಾಟಕಕ್ಕೆ ಬಂದಿದೆ. ಉಡಾನ್‌ ಯೋಜನೆಯಡಿ 7 ವಿಮಾನನಿಲ್ದಾಣಗಳು ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿವೆ. ಅನುಸಂಧಾನ್‌ ರಾಷ್ಟ್ರೀಯ ಸಂಶೋಧನೆ ಯೋಜನೆಯಡಿ ಬೆಂಗಳೂರಿಗೆ ಅನುಕೂಲವಾಗಲಿದೆ. ಇದೇ ರೀತಿ ಕೃಷಿ ವಲಯದ ವಿಸ್ತರಣೆಗೆ ಬೆಂಗಳೂರಿನ ಕೊಡುಗೆ ಅಪಾರ. ಬಾಹ್ಯಾಕಾಶ ವಲಯದಲ್ಲಿ ಅನುದಾನ ಕೊಟ್ಟಿದ್ದು, ಇದರಿಂದ ಈ ಸಂಸ್ಥೆಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಬೆಂಗಳೂರು ಸೇರಿ 14 ನಗರಗಳಿಗೆ ಅಭಿವೃದ್ಧಿ ವಿಶೇಷ ಯೋಜನೆ, ಉದ್ದೇಶಿತ ನಗರ ಯೋಜನೆಯಿಂದ ಬೆಂಗಳೂರಿಗೆ ಲಾಭವಾಗಲಿದೆ. ಇದರಡಿ 100 ಕೋಟಿ ಮಹಿಳಾ ಉದ್ಯೋಗಿಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೆರವು ಸಿಗಲಿದೆ.ಬೆಂಗಳೂರು ಕೃಷಿ ವಿ.ವಿ., ರಾಯಚೂರು ಕೃಷಿ ವಿ.ವಿ.ಗಳಲ್ಲಿ ಹವಾಮಾನ ಸಂಶೋಧನಾ ಘಟಕ, ಬೆಂಗಳೂರು ಸಾರ್ಟ್‌ ಸ್ಟಾರ್ಟ್‌ಅಪ್‌ಗಳಿಗೆ ಬಜೆಟ್‌ನಲ್ಲಿ ಉತ್ತೇಜನ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.

ವಿಶೇಷವಾಗಿ ಯುವಕರಿಗೆ 3 ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದರಲ್ಲಿ ಮುಖ್ಯವಾಗಿ ತರಬೇತಿ, ಇಂಟರ್ನ್‌ಶಿಪ್‌ ಯೋಜನೆ, ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆ, ಎನ್‌ಎಚ್‌ಎನ್‌ಇ ಅಭಿವೃದ್ಧಿಗೂ ಅನುದಾನ ಕೊಡಲಾಗಿದೆ.ಬೆಂಗಳೂರಿನ ಪೀಣ್ಯದಲ್ಲಿ ರಫ್ತು ಮಾಡುವ ಸಣ್ಣ ಕೈಗಾರಿಕೆಗಳು ಇರುವುದರಿಂದ ಎನ್‌ಎಚ್‌ಎನ್‌ಇ ಗಳಿಗೆ ಸ್ವಲ್ಪಮಟ್ಟಿನ ತೊಂದರೆಯಾಗುತ್ತಿತ್ತು. ಬಜೆಟ್‌ನಲ್ಲಿ ಅದಕ್ಕೂ ಉತ್ತರ ನೀಡಿದ್ದೇವೆ ಎಂದರು.

ಪ್ರಧಾನಮಂತ್ರಿ ವಿಪ್ರ ಕೈಗಾರಿಕಾ ಪಾರ್ಕ್‌ ಕಲಬುರಗಿಯಲ್ಲಿ ಸ್ಥಾಪನೆಯಾಗಲಿದೆ. ಹೀಗೆ ಎಲ್ಲಾ ವಲಯಕ್ಕೂ ಕೇಂದ್ರ ಸರ್ಕಾರ ಅನುದಾನ ಕೊಟ್ಟಿದೆ ಎಂದು ಅವರು ಸಮರ್ಥನೆ ಮಾಡಿದರು.ಇತ್ತೀಚೆಗೆ 1 ಲಕ್ಷ ಕೋಟಿ ರೂ. ಅನುದಾನವನ್ನು ರಾಜ್ಯದ ರಾಷ್ಟ್ರೀಯ ಹೆದ್ದಾರಿ ಸಂಬಂಧಿತ ಕಾಮಗಾರಿಗಳಲ್ಲಿ ವೆಚ್ಚ ಮಾಡಲಾಗಿದೆ. ರಾಷ್ಟ್ರಮಟ್ಟದಲ್ಲಿ ಸರಾಸರಿ ಹಂಚಿಕೆಯಡಿ ಕರ್ನಾಟಕಕ್ಕೆ ಹೆಚ್ಚಿನ ಪಾಲು ಸಿಕ್ಕಿದೆ. ಸರಾಸರಿ ರಾಷ್ಟ್ರೀಯ ಅನುದಾನ ಹಂಚಿಕೆ ಪ್ರಮಾಣ 5.4 ಇದೆ. ಅದರಲ್ಲಿ ಕರ್ನಾಟಕಕ್ಕೆ 6.58 ಪಾಲು ಸಿಗಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News