Sunday, November 24, 2024
Homeರಾಜ್ಯಮುಜರಾಯಿ ದೇವಾಲಯಗಳಲ್ಲಿ ಆನ್‌ಲೈನ್‌ ಸೇವೆಗೆ ಅರ್ಚಕರಿಂದ ವಿರೋಧ

ಮುಜರಾಯಿ ದೇವಾಲಯಗಳಲ್ಲಿ ಆನ್‌ಲೈನ್‌ ಸೇವೆಗೆ ಅರ್ಚಕರಿಂದ ವಿರೋಧ

ಬೆಂಗಳೂರು,ಜು.30- ಮುಜರಾಯಿ ದೇವಾಲಯಗಳಲ್ಲಿ ಆನ್‌ಲೈನ್‌ ಸೇವೆಗೆ ಅರ್ಚಕರಿಂದ ವಿರೋಧ ವ್ಯಕ್ತವಾಗಿದೆ. ಆನ್‌ಲೈನ್‌ನಲ್ಲಿ ಕೆಲ ಭಕ್ತರು ಸಂಜೆ ಹಾಗೂ ರಾತ್ರಿ ಸೇವೆಗೆ ಬುಕ್‌ ಮಾಡಿರುತ್ತಾರೆ. ಹೆಚ್ಚು ಜನ ಪ್ರಸಾದಕ್ಕಾಗಿ ಬುಕ್‌ ಮಾಡಿಕೊಂಡಿರುತ್ತಾರೆ. ಇದರಿಂದ ಮರುದಿನ ಬೆಳಗ್ಗೆಯೇ ಬುಕ್‌ ಮಾಡಿದ ಭಕ್ತಾಧಿಗಳ ಸೇವೆ ಮಾಡಲು ಕಷ್ಟವಾಗುತ್ತದೆ ಎಂದು ಅರ್ಚಕರು ದೂರಿದ್ದಾರೆ.

ಅಲ್ಲದೆ ಭಕ್ತಾಧಿಗಳು ತಕ್ಷಣ ಮಾಡಿದ ಬುಕ್ಕಿಂಗ್‌ ಮಾಹಿತಿ ಅರ್ಚಕರಿಗೆ ಇರುವುದಿಲ್ಲ. ಪ್ರಸಾದವನ್ನು ತಕ್ಷಣಕ್ಕೆ ತಯಾರಿಸಲು ಆಗುವುದಿಲ್ಲ. ಪೂಜೆಗೆ ರಾತ್ರಿ ಬುಕ್‌ ಮಾಡಿದರೆ ಬೆಳಿಗ್ಗೆನೇ ಮಾಡಿ ಬಿಡಲು ಆಗುವುದಿಲ್ಲ. ಅದಕ್ಕಾಗಿ ನಾವು ಕೂಡ ತಯಾರಿ ಮಾಡಿಕೊಳ್ಳಬೇಕು. ತಕ್ಷಣಕ್ಕೆ ಬುಕ್ಕಿಂಗ್‌ ಮಾಡುವುದರಿಂದ ಪೂಜೆ ಮಾಡಿ ಹಾಗೂ ಪ್ರಸಾದ ನೀಡಲು ಸಾಧ್ಯವಾಗುತ್ತಿಲ್ಲ. ಪ್ರಸಾದ ತಯಾರಿಸಲು ಸಮಯ ಬೇಕಾಗುತ್ತದೆ.

ರಾತ್ರಿ ಬುಕ್‌ ಮಾಡಿ ಬೆಳಿಗ್ಗೆ ಪ್ರಸಾದ ಬೇಕು ಹಾಗೂ ಪೂಜೆ ನಡೆಯಬೇಕು ಅಂದರೆ ಅದು ಕಷ್ಟವಾಗುತ್ತಿದೆ ಎಂದು ಅರ್ಚಕ ಒಕ್ಕೂಟ ತಮ ಸಮಸ್ಯೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅರ್ಚಕರ ಒಕ್ಕೂಟ ಧಾರ್ಮಿಕ ದತ್ತಿ ಆಯುಕ್ತರಿಗೆ ಪತ್ರ ಬರೆದಿದೆ. ಮುಜರಾಯಿ ಇಲಾಖೆಗೆ ಒಳಪಡುವ ಬಹುತೇಕ ದೇವಸ್ಥಾನಗಳಲ್ಲಿ ಅಡುಗೆಯವರು ಹಾಗೂ ಅಗ್ರಾಣದ ವ್ಯವಸ್ಥೆ ಇಲ್ಲ. ಅಲ್ಲದೆ ಆನ್‌ಲೈನ್‌ನಲ್ಲಿ ಬುಕ್‌ ಮಾಡಿದ ಹಣ ಯಾವಾಗಲೋ ಅರ್ಚಕರ ಕೈ ಸೇರುತ್ತದೆ. ಇದರಿಂದ ಪೂಜಾ ಸಾಮಾಗ್ರಿ ಹಾಗೂ ಪ್ರಸಾದ ತಯಾರಿಸಲು ಬೇಕಾಗುವ ಪದಾರ್ಥಗಳನ್ನು ತರಲು ತೊಂದರೆಯಾಗುತ್ತಿದೆ. ಹೀಗಾಗಿ ಆನ್‌ಲೈನ್‌ ಸೇವೆಯನ್ನು ನಿಲ್ಲಿಸಬೇಕು ಎಂದು ಅರ್ಚಕರು ಒತ್ತಾಯಿಸಿದ್ದಾರೆ.

ಮುಜರಾಯಿ ಇಲಾಖೆಗೆ ಒಳಪಡುವ ರಾಜ್ಯದ ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಆನ್‌ಲೈನ್‌ ಸೇವೆ ಒದಗಿಸುವುದಕ್ಕೆ ತೊಂದರೆ ಇಲ್ಲ. ಯಾಕೆಂದರೆ ಕುಕ್ಕೆ ಸುಬ್ರಹಣ್ಯ, ಚಾಮುಂಡಿಬೆಟ್ಟ, ನಂಜನಗೂಡು, ಮೇಲುಕೋಟೆ ಇತರ ದೊಡ್ಡ ದೇವಸ್ಥಾನಗಳಲ್ಲಿ ಇದಕ್ಕೆಲ್ಲ ವ್ಯವಸ್ಥೆ ಇದೆ. ಅಲ್ಲಿ ಆನ್‌ಲೈನ್‌ ಸೇವೆ ಒದಗಿಸಬಹುದು. ಯಾಕೆಂದರೆ ಅಲ್ಲಿ ಕೆಲಸದವರು, ಸಿಬ್ಬಂದಿಗಳು ಹಾಗೂ ಉಗ್ರಾಣಗಳು ಹೆಚ್ಚುವರಿಯಾಗಿ ಇರುತ್ತವೆ. ಇದರಿಂದ ಅಲ್ಲಿ ತೊಂದರೆಯಾಗುವುದಿಲ್ಲ.

ಆದರೆ ಇಂತಹ ವ್ಯವಸ್ಥೆ ಇಲ್ಲದ ದೇವಸ್ಥಾನಗಳಲ್ಲಿ ಇದು ಕಷ್ವವಾಗುತ್ತಿದೆ. ಇದರಿಂದ ನಿತ್ಯ ಪೂಜೆ ಸಲ್ಲಿಸುವ ಭಕ್ತರಿಗೆ ಪೂಜೆ ಮಾಡಿಕೊಡುವುದು ಆನ್‌ಲೈನ್‌ ಮೂಲಕ ಬಂದ ಭಕ್ತರಿಗಾಗಿ ಪೂಜೆ ಸಲ್ಲಿಸುವುದು ಕಷ್ಟವಾಗುತ್ತಿದೆ. ರಾತ್ರಿ ಬುಕ್‌ ಆದ ಸೇವೆಗೆ ಬೆಳಿಗ್ಗೆ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅರ್ಚಕರು ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ ಪೂಜಾ ಸೇವೆಗಳನ್ನು ಆನ್‌ಲೈನ್‌ ಮೂಲಕ ಬುಕ್‌ ಮಾಡಲು ಮೊದಲ ಹಂತವಾಗಿ ಬೆಂಗಳೂರಿನ ಬನಶಂಕರಿ ಅಮನವರ ದೇವಾಲಯದಲ್ಲಿ ಪೋರ್ಟಲ್‌ ಹಾಗೂ ಮೊಬೈಲ್‌ ಆಪ್‌ನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆನ್‌ಲೈನ್‌ ಮೂಲಕ ಕಾಯ್ದಿರಿಸುವುದಕ್ಕೆ ಅವಕಾಶ ನೀಡಲಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಂದಾಗಿ ಈ ಆನ್‌ಲೈನ್‌ ಸೇವೆಯನ್ನು ಹಾಗೂ ಈ ಮೊಬೈಲ್‌ ಆಪ್‌ನ್ನು ರದ್ದು ಮಾಡಬೇಕೆಂದು ಅರ್ಚಕರ ಒಕ್ಕೂಟ ಒತ್ತಾಯಿಸಿದೆ.

RELATED ARTICLES

Latest News