ಆನೇಕಲ್,ಜು.31- ಪುರಸಭೆ ಸದಸ್ಯ ಸ್ಕ್ರಾಪ್ ರವಿ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಆತ ಹಲ್ಲೆಗೆ ಮುಂದಾದಾಗ ಇನ್ಸ್ ಪೆಕ್ಟರ್ ಹಾರಿಸಿದ ಗುಂಡು ಆತನ ಕಾಲಿಗೆ ತಗುಲಿ ಸಿಕ್ಕಿಬಿದ್ದಿದ್ದಾನೆ. ಆರೋಪಿ ಜೆ.ಕೆ.ಕಾರ್ತಿಕ್‌ನನ್ನು ಮೈಸೂರಮನ ದೊಡ್ಡಿಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯ ಸಮಯದಲ್ಲಿ ಬಂಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಇದೇ 24 ರಂದು ಪುರಸಭಾ ಸದಸ್ಯ ಸ್ಕ್ರಾಪ್ ರವಿಯನ್ನು ಮಾರಕಾಸಗಳಿಂದ ಚುಚ್ಚಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆೆ ಆರೋಪಿಗಳಾದ ಹರೀಶ್ ಅಲಿಯಾಸ್ ಹಂದಿ ಹರೀಶ್, ವಿನಯ್ ಅಲಿಯಾಸ್ ವಿನಿ ಎಂಬುವರು ಸ್ವಯಂ ಆಗಿ ನ್ಯಾಯಾಲಯಕ್ಕೆ ಶರಣಾಗಿದ್ದರು. ಆದರೆ ಪ್ರಮುಖ ಆರೋಪಿ ಕಾರ್ತಿಕ್ ತಲೆ ಮರೆಸಿಕೊಂಡಿದ್ದನು.
ಈತನ ಪತ್ತೆಗಾಗಿ ಪೋಲಿಸರು ಒಂದು ವಾರದಿಂದ ಹುಡುಕಾಟ ನಡೆಸುತ್ತಿದ್ದರು. ಇಂದು ಬೆಳಗಿನ ಜಾವ ಆರೋಪಿ ಕಾರ್ತಿಕ್ ಮೈಸೂರಮನ ದೊಡ್ಡಿಯಲ್ಲಿ ಅವಿತು ಕುಳಿತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಆರೋಪಿ ಬಂಧನಕ್ಕೆ ಪೊಲೀಸರು ತೆರಳಿದ್ದಾರೆ.
ಸ್ಥಳಕ್ಕೆ ಹೋಗುತ್ತಿದ್ದಂತೆ ಪೊಲೀಸರನ್ನು ಗಮನಿಸಿದ ಆರೋಪಿ ಸಿಬ್ಬಂದಿ ಸುರೇಶ್ ಮೇಲೆ ಮಾರಕಾಸ್ತಗಳಿಂದ ಹಲ್ಲೆಗೆ ಯತ್ತಿಸಿದಾಗ ಇನ್‌್ಸಪೆಕ್ಟರ್ ತಿಪ್ಪೇಸ್ವಾಮಿಯವರು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ.ಪೊಲೀಸರ ಮಾತನ್ನು ಲೆಕ್ಕಿಸದೆ ಮತ್ತೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಇನ್‌್ಸಪೆಕ್ಟರ್ ತಿಪ್ಪೇಸ್ವಾಮಿ ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ.
ಆರೋಪಿಯನ್ನು ಸುತ್ತುವರಿದು ವಶಕ್ಕೆ ಪಡೆದ ಪೊಲೀಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಸಿಬ್ಬಂದಿ ಸುರೇಶ್ ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ.ಸ್ಥಳಕ್ಕೆ ಎಸ್ಪಿ ಸಿ.ಕೆ. ಬಾಬಾ, ಡಿವೈಎಸ್ಪಿ ಮೋಹನ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.