ಬೆಂಗಳೂರು,ಜು.31- ಉತ್ತರ ಕನ್ನಡ ಜಿಲ್ಲೆಯ ಶಿರೂರು ಹಾಗೂ ಕೇರಳದಲ್ಲಿ ಆಗಿರುವ ಬೆಟ್ಟ ಕುಸಿತ ಹಾಗೂ ಇತರ ಮಳೆ ಅನಾಹುತಗಳ ಬೆನ್ನಲ್ಲೇ ರಾಜ್ಯಸರ್ಕಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಮುಂದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಸಂಜೆ ಗೃಹಕಚೇರಿ ಕೃಷ್ಣಾದಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಜೊತೆಗೆ ಪ್ರಾದೇಶಿಕ ಆಯುಕ್ತರು ,ಲೋಕೋಪಯೋಗಿ, ಗೃಹ, ಇಂಧನ, ಆರ್ಥಿಕ ಇಲಾಖೆ, ಕೃಷಿ, ಕಂದಾಯ, ರೇಷೆ, ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.
ಪ್ರತಿಯೊಂದು ಜಿಲ್ಲೆಯಲ್ಲೂ ಮಳೆ ಅನಾಹುತಗಳ ಕುರಿತು ಮುನ್ನೆಚ್ಚರಿಕೆ ವಹಿಸಬೇಕು. ಅದರಲ್ಲೂ ನೀರು ಹರಿಯುವ ಕಾಲುವೆಗಳು ಹಾಗೂ ಇತರ ಇಳಿಜಾರಿನ ಪ್ರದೇಶಗಳು, ಬೆಟ್ಟಗಳ ಸಾಲಿನ ವಿಚಾರವಾಗಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲು ತಯಾರಿ ನಡೆಸಿಕೊಂಡಿದ್ದಾರೆ.
ಹೈಕಮಾಂಡ್‌ನ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿಯವರು ಇಂದು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ. ಕೇರಳದ ಬೆಟ್ಟ ಕುಸಿತದಲ್ಲಿ ಸುಮಾರು 100 ಕ್ಕೂ ಹೆಚ್ಚು ಜೀವಹಾನಿಯಾಗಿರುವುದು ತೀವ್ರ ಆತಂಕ ಮೂಡಿಸಿದೆ. ಕೆಲ ದಿನಗಳ ಹಿಂದೆ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲೂ ಬೆಟ್ಟ ಕುಸಿತವಾಗಿ ಸಾಕಷ್ಟು ಜೀವಹಾನಿಯಾಗಿತ್ತು.
ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳು ಹಾಗೂ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಲಿರುವ ಮುಖ್ಯಮಂತ್ರಿಗಳು ಅಪಾಯಕಾರಿ ಸ್ಥಿತಿಯಲ್ಲಿರುವ ಬೆಟ್ಟ-ಗುಡ್ಡಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ತಗ್ಗು ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಸೂಚನೆ ನೀಡಿದ್ದಾರೆ.