Friday, September 20, 2024
Homeರಾಜ್ಯಮುಡಾ ಹಗರಣ : ಸಿಎಂ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡುವ ಸಾಧ್ಯತೆ

ಮುಡಾ ಹಗರಣ : ಸಿಎಂ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡುವ ಸಾಧ್ಯತೆ

ಬೆಂಗಳೂರು,ಜು.31- ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದದ ಬಿರುಗಾಳಿ ಎಬ್ಬಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಚಾರಣೆ ನಡೆಸಲು ರಾಜ್ಯಪಾಲರು ಅನುಮತಿ ನೀಡುವ ಸಾಧ್ಯತೆ ಇದೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ನೀಡಿರುವ ಖಾಸಗಿ ದೂರಿನ ಆಧಾರದ ಮೇಲೆ ಕಾನೂನು ತಜ್ಞರ ಅಭಿಪ್ರಾಯ ಪಡೆದಿರುವ ರಾಜ್ಯಪಾಲ ಥಾವರ್‌ಚಂದ್‌ ಗೆಲ್ಹೋಟ್‌, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಸಮತಿಸಿದ್ದಾರೆ ಎಂದು ತಿಳಿದುಬಂದಿದೆ.

ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ 1988ರ ಸೆಕ್ಷನ್‌ 19/1 ಹಾಗೂ ಸಿಪಿಸಿ 1973ರ ಸೆಕ್ಷನ್‌ 197ರ ಅನ್ವಯ ಕ್ರಿಮಿನಲ್‌ ಮೊಕದ್ದಮೆ ದೂರು ದಾಖಲಿಸಲು ಮತ್ತು ವಿಚಾರಣೆ ನಡೆಸಲು ರಾಜ್ಯಪಾಲರು ಕಾನೂನು ತಜ್ಞರ ಸಲಹೆ ಮೇರೆಗೆ ಸಮತಿ ನೀಡುವ ಸಾಧ್ಯತೆಗಳು ಹೆಚ್ಚಾಗಿದೆ.

ಈ ಹಿಂದೆ ಅಕ್ರಮ ಡಿನೋಟಿಫಿಕೇಶನ್‌ ಸಂಬಂಧ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅಂದಿನ ರಾಜ್ಯಪಾಲರಾದ ಹಂಸರಾಜ್‌ ಭಾರದ್ವಾಜ್‌ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು.

ವಕೀಲರಾದ ಸಿರಾಜುದ್ದೀನ್‌ ಪಾಷ ಹಾಗೂ ಬಾಲ್‌ರಾಜ್‌ ಅವರು ನೀಡಿದ ಖಾಸಗಿ ದೂರಿನ ಅನ್ವಯ ಯಡಿಯೂರಪ್ಪನವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡಿರುವ ಥಾವರ್‌ಚಂದ್‌ ಗೆಲ್ಹೋಟ್‌, ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅಸ್ತು ಎನ್ನಲಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಪ್ರಾಸಿಕ್ಯೂಷನ್‌ ನಡೆಸಲು ರಾಜ್ಯಪಾಲರು ಅನುಮತಿ ನೀಡಬಹುದೆಂದು ಸುಪ್ರೀಂಕೋರ್ಟ್‌ನ ಐದು ಮಂದಿ ಸದಸ್ಯರ ಸಾಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ನೀಡಿತ್ತು.ಕರ್ನಾಟಕದವರೇ ಆದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಹಾಗೂ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳೂ ಆಗಿದ್ದ ಸಂತೋಷ್‌ ಹೆಗ್ಡೆ ಅವರು ಸಾಂವಿಧಾನಿಕ ಪೀಠದ ಮುಖ್ಯಸ್ಥರಾಗಿದ್ದರು ಎಂಬುದು ಉಲೇಖಾರ್ಹ.

ಮಧ್ಯಪ್ರದೇಶದ ಇಂದೂರ್‌ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಾನೂನು ಬಾಹಿರವಾಗಿ ಮಂಜೂರಾತಿ ಜಮೀನನ್ನು ನೀಡಿದ ಪ್ರಕರಣ ಸಂಬಂಧ ಇಬ್ಬರ ಸಚಿವರ ವಿರುದ್ಧ ಪ್ರಾಸಿಕ್ಯೂಷನ್‌ ನಡೆಸಲು ರಾಜ್ಯಪಾಲರು ಮುಖ್ಯಮಂತ್ರಿ ಇಲ್ಲವೇ ಸಚಿವರ ವಿರುದ್ಧ ಮೊಕದ್ದಮೆ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂಬುದು ಈ ತೀರ್ಪಿನ ಸಾರಾಂಶವಾಗಿತ್ತು.

ಅಲ್ಲದೆ ಈ ಹಿಂದೆ ಅಕ್ರಮ ಆಸ್ತಿ ಸಂಪಾದನೆ ಕುರಿತು ಬಿಜೆಪಿ ರಾಜ್ಯಸಭಾ ಸದಸ್ಯರಾಗಿದ್ದ ಸುಬ್ರಹಣ್ಯ ಸ್ವಾಮಿ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧವೂ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ರಾಜ್ಯಪಾಲ ಚೆನ್ನಾರೆಡ್ಡಿ ಅನುಮೋದನೆ ನೀಡಿದ್ದರು.

ರಾಜ್ಯಪಾಲರ ಈ ಕ್ರಮವನ್ನು ಮದ್ರಾಸ್‌‍ ಹೈಕೋರ್ಟ್‌ ಮತ್ತು ಸುಪ್ರಿಂಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು. ಈ ಎಲ್ಲವನ್ನೂ ಕೂಲಂಕುಷವಾಗಿ ಅಧ್ಯಯನ ನಡೆಸಿರುವ ಥಾವರ್‌ ಚಂದ್‌ ಗೆಲ್ಹೋಟ್‌, ಮುಡಾ ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಸಂಪುಟ ನಿರ್ಣಯ ತಿರಸ್ಕಾರ:
ಈ ಹಿಂದೆ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಕೊಡಬಾರದೆಂದು ಅಂದು ಸಚಿವ ಸಂಪುಟ ಸಭೆಯಲ್ಲಿ ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಸಂಪುಟದ ತೀರ್ಮಾನವನ್ನು ರಾಜ್ಯಪಾಲರಾಗಿದ್ದ ಹಂಸರಾಜ್‌ ಭಾರದ್ವಾಜ್‌ ಸಾರಸಗಟಾಗಿ ತಿರಸ್ಕರಿಸಿ ಪ್ರಾಸಿಕ್ಯೂಷನ್‌ಗೆ ಸಮತಿಸಿದ್ದರು.ಒಂದು ವೇಳೆ ಗುರುವಾರ ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡರೆ ರಾಜ್ಯಪಾಲರ ತೀರ್ಮಾನ ಏನೆಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಸಂಪುಟದ ತೀರ್ಮಾನವನ್ನು ರಾಜ್ಯಪಾಲರು ತಮ ವಿವೇಚನೆಯಡಿ ಒಪ್ಪುವುದು ಇಲ್ಲವೇ ತಿರಸ್ಕರಿಸುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು. ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ ಎಂಬುದು ರಾಜ್ಯಪಾಲರಿಗೆ ಮನವರಿಕೆಯಾದರೆ ಸಿಬಿಐ ಸೇರಿದಂತೆ ಕೇಂದ್ರದ ಯಾವುದಾದರೂ ತನಿಖಾ ಸಂಸ್ಥೆಯೂ ತನಿಖೆ ನಡೆಸಲು ಶಿಫಾರಸ್ಸು ಮಾಡುವ ಸಂಭವವೂ ಇದೆ.

RELATED ARTICLES

Latest News