Friday, November 22, 2024
Homeರಾಜ್ಯಪ್ರಧಾನಿ ಭೇಟಿಯಾಗಿ ಡಿಸಿಎಂ ಡಿಕೆಶಿ ಮಾಡಿನ ಮನವಿಗಳೇನು..? ಇಲ್ಲಿದೆ ವಿವರ

ಪ್ರಧಾನಿ ಭೇಟಿಯಾಗಿ ಡಿಸಿಎಂ ಡಿಕೆಶಿ ಮಾಡಿನ ಮನವಿಗಳೇನು..? ಇಲ್ಲಿದೆ ವಿವರ

ನವದೆಹಲಿ,ಜು.31- ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನವದೆಹಲಿಯಲ್ಲಿಂದು ಭೇಟಿ ಮಾಡಿ ಬೆಂಗಳೂರು ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಾಕಿ ಇರುವ ಯೋಜನೆಗಳಿಗೆ ಮಂಜೂರಾತಿ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಪ್ರಧಾನಿಯವರಿಗೆ ನೀಡಲಾಗಿರುವ ಪತ್ರದಲ್ಲಿ ಮೂರನೇ ಬಾರಿ ಪ್ರಧಾನಿಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಲಾಗಿದೆ. ಈ ಹಿಂದೆ ಗಮನ ಸೆಳೆದಂತೆ ರಾಜ್ಯದ ಬಹುಮುಖ್ಯ ಗಂಭೀರ ವಿಚಾರಗಳು ಹಾಗೂ ಯೋಜನೆಗಳಿಗೆ ಅದರಲ್ಲೂ ನಗರಾಭಿವೃದ್ಧಿ ಮತ್ತು ಬೆಂಗಳೂರಿನ ಸುಧಾರಣೆಗೆ ನಿಮ ಮಾರ್ಗದರ್ಶನ ಹಾಗೂ ಬೆಂಬಲ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.

ನಿಮ ಅಮೂಲ್ಯವಾದ ದೃಷ್ಟಿಕೋನ ಮತ್ತು ತಜ್ಞತೆ ಕರ್ನಾಟಕದ ಪ್ರಗತಿಯಲ್ಲಿರುವ ಯೋಜನೆಗಳ ವೇಗೋತ್ಕರ್ಷಕ್ಕೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಅಗತ್ಯವಿದೆ. ಈಗಾಗಲೇ ಬೆಂಗಳೂರಿನ ಸುಧಾರಣೆ ಪ್ರಸ್ತಾವಿತ ಹಲವು ಯೋಜನೆಗಳ ಅನುಮೋದನೆಗೆ ನಿಮ ಮಧ್ಯಪ್ರವೇಶ ಅಗತ್ಯ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸುರಂಗ ರಸ್ತೆ ಹಾಗೂ ಮೇಲ್ಸೇತುವೆಗಳ ನಿರ್ಮಾಣ ಅಗತ್ಯವಿದೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 77.6 ಕಿ.ಮೀ. ನಗರದ ಒಳಗೆ ಹಾದುಹೋಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ತೀವ್ರವಾಗಿದೆ. ವಾಹನಗಳ ಸುಗಮ ಓಡಾಟಕ್ಕಾಗಿ ಮೇಲ್ಸೇತುವೆ ಹಾಗೂ ಸುರಂಗಗಳ ನಿರ್ಮಾಣ ಅಗತ್ಯವಿದೆ. ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಹೊಸೂರಿನಿಂದ ಬಳ್ಳಾರಿ ಸಂಪರ್ಕಗೊಳ್ಳುತ್ತಿದ್ದು, ಕೆ.ಆರ್‌.ಪುರಂ ರಸ್ತೆಯಿಂದ ಮೈಸೂರು ರಸ್ತೆಯವರೆಗೆ ಇದು ಸುರಂಗ ರಸ್ತೆ ನಿರ್ಮಾಣದ ಔಚಿತ್ಯದ ಅಧ್ಯಯನ ನಡೆಸಲಾಗಿದೆ. ಭೂ ಸ್ವಾದೀನದ ಖರ್ಚನ್ನು ತಗ್ಗಿಸುವ ಅಗತ್ಯವಿದೆ.

ಎರಡು ಮೇಲ್ಸೇತುವೆ ಹಾಗೂ ಸುರಂಗ ಮಾರ್ಗಗಳಿಗಾಗಿ 36,950 ಕೋಟಿ ರೂ. ವೆಚ್ಚವಾಗಲಿದ್ದು, ಅಗತ್ಯ ಅನುದಾನ ಒದಗಿಸುವಂತೆ ಮನವಿ ಮಾಡಿದ್ದಾರೆ.ಬೆಂಗಳೂರು ಮೆಟ್ರೋ ಯೋಜನೆಯ 5 ಕಾರಿಡಾರ್‌ಗಳಲ್ಲೂ ಉಪನಗರಗಳನ್ನು ಸಂಪರ್ಕಿಸುವಂತೆ ವಿಸ್ತರಣೆಯ ಅಗತ್ಯವಿದೆ. ಇದಕ್ಕೆ ಬೆಂಬಲ ನೀಡಬೇಕು ಎಂದು ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ.

ಬಿಟಿಎಂ ಲೇಔಟ್‌ನಲ್ಲಿ ರೂಪಿಸಲಾಗಿರುವ ಡಬ್ಬಲ್‌ ಡೆಕ್ಕರ್‌ ಯೋಜನೆ ಯಶಸ್ವಿಯಾಗಿದ್ದು, ಅದೇ ಮಾದರಿಯಲ್ಲಿ ಬೆಂಗಳೂರಿನಾದ್ಯಂತ ಮೆಟ್ರೊ ಮತ್ತು ಮೇಲ್ಸೇತುವೆ ರಸ್ತೆ ಸಂಯೋಜಿತ ಯೋಜನೆಗೆ ಪ್ರಧಾನಿಯವರ ಬೆಂಬಲ ಕೇಳಲಾಗಿದೆ. ಇದೊಂದು ಅನ್ವೇಷಣಾತಕ ಯೋಜನೆಯಾಗಿದೆ.

ಜನಸಂಖ್ಯೆಗನುಗುಣವಾಗಿ ಬೆಂಗಳೂರಿನ ಮೂಲಸೌಲಭ್ಯಕ್ಕಾಗಿ ಡಬ್ಬಲ್‌ ಡೆಕ್ಕರ್‌ ವ್ಯವಸ್ಥೆ ಅಗತ್ಯವಿದೆ. ಮೇಲ್ಸೇತುವೆ ಮಾರ್ಗದಲ್ಲಿ ಮೆಟ್ರೊ ಹಳಿಗಳು ಅದರ ಕೆಳಗೆ ಸಿಗ್ನಲ್‌ ಮುಕ್ತ ಮೇಲ್ಸೇತುವೆ ರಸ್ತೆ ನಿರ್ಮಾಣದಿಂದ ಭೂಸ್ವಾಧೀನದ ವೆಚ್ಚ ಕಡಿಮೆಯಾಗುವುದರ ಜೊತೆಗೆ ತಡೆರಹಿತ ಸಂಚಾರ ನಡೆಯಲಿದೆ ಎಂದಿದ್ದಾರೆ.

ಸಿಲಿಕಾನ್‌ ಸಿಟಿ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಪ್ರಧಾನಿ ಬಗ್ಗೆ ಸುದೀರ್ಘ ವಿವರಣೆ ನೀಡಿರುವ ಡಿ.ಕೆ.ಶಿವಕುಮಾರ್, 73.04 ಕಿ.ಮೀ. ಉದ್ದದ 8 ಪಥಗಳ ಹೊರವರ್ತುಲ ರಸ್ತೆ ನಿರ್ಮಾಣದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.ಬೆಂಗಳೂರು ನಗರಕ್ಕೆ ವಾಹನಗಳ ಪ್ರವೇಶವನ್ನು ತಪ್ಪಿಸಿ ಹೊರವಲಯದಿಂದಲೇ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಲು 27 ಸಾವಿರ ಕೋಟಿ ರೂ.ಗಳ ಹೊರವರ್ತುಲ ರಸ್ತೆ ನಿರ್ಮಿಸುವ ಅಗತ್ಯವಿದೆ. ರಸ್ತೆ ನಿರ್ಮಾಣದ ವೆಚ್ಚ 6 ಸಾವಿರ ಕೋಟಿ ರೂ. ಆದರೆ 21 ಸಾವಿರ ಕೋಟಿ ರೂ. ಭೂಸ್ವಾಧೀನಕ್ಕೆ ತಗುಲಲಿದೆ. ಇದಕ್ಕೆ ಬೆಂಬಲ ನೀಡುವಂತೆ ಬಜೆಟ್‌ ಪೂರ್ವಭಾವಿ ಸಭೆಯಲ್ಲೂ ಮನವಿ ಮಾಡಲಾಗಿತ್ತು ಎಂದು ವಿವರಿಸಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚು ಧಾರಣ ಮತ್ತು ಕಡಿಮೆ ಅವಧಿಯ ಮಳೆಯಾಗಲಿದೆ. ಇದರಿಂದ ನಗರದಲ್ಲಿ ಸಾಕಷ್ಟು ನೆರೆಯ ಪರಿಸ್ಥಿತಿ ಉಂಟಾಗಿ ಜನಸಾಮಾನ್ಯರು ಸಂಕಷ್ಟಕ್ಕೊಳಗಾಗಿದ್ದಾರೆ. ವಿಶ್ವ ಬ್ಯಾಂಕ್‌ ನೆರವಿನಲ್ಲಿ 3 ಸಾವಿರ ಕೋಟಿ ರೂ. ವೆಚ್ಚ ಮಾಡಿ ಮಳೆ ಹಾನಿ ತಡೆಯ ಯೋಜನೆಗಳನ್ನು ಕೈಗೊಳ್ಳಬೇಕಿದೆ. ಕೆರೆಯ ಪುನಶ್ಚೇತನ ಹಾಗೂ ಇತರ ಕಾರ್ಯಕ್ರಮಗಳು ಇದರಡಿ ಬರಲಿವೆ ಎಂದು ತಿಳಿಸಿದ್ದಾರೆ.

15ನೇ ಹಣಕಾಸು ಯೋಜನೆಯಡಿ ಬೆಂಗಳೂರಿನ ಅಂತರ್ಜಲ ವೃದ್ಧಿ, ಸಂಚಾರ ನಿರ್ವಹಣೆಗಾಗಿ 6 ಸಾವಿರ ಕೋಟಿ ರೂ. ವಿಶೇಷ ಅನುದಾನ ನೀಡಬೇಕು. ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಪ್ರತಿದಿನ 6,500 ಮೆಟ್ರಿಕ್‌ ಟನ್‌ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಈ ಯೋಜನೆಗೆ ಅಗತ್ಯ ನೆರವು ಕೊಡಿಸುವಂತೆ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ.

ಈಜಿಪುರ ಒಳ ವರ್ತುಲ ರಸ್ತೆಯ ಸರ್ಜಾಪುರ ಮುಖ್ಯರಸ್ತೆಗೆ ರಕ್ಷಣಾ ಇಲಾಖೆಯ 17.50 ಎಕರೆ, ಬಾಣಸವಾಡಿಯ ರೈಲ್ವೆ ಮೇಲ್ಸೇತುವೆಗೆ 796.85 ಚ. =ಮೀ. ಭೂಮಿ ಹಾಗೂ ಬಯ್ಯಪ್ಪನಹಳ್ಳಿ ರೈಲ್ವೆ ಮೇಲ್ಸೇತುವೆಗೆ 4,454.78 ಚ.ಮೀ. ರಕ್ಷಣಾ ಭೂಮಿಯ ಅಗತ್ಯವಿದ್ದು, ಅದನ್ನು ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಮೇಕೆದಾಟು ಯೋಜನೆಗೆ ಅಗತ್ಯ ಮಂಜೂರಾತಿಗೆ ಮನವಿ
ರಾಜ್ಯ ಸರ್ಕಾರದ ಬಹುನಿರೀಕ್ಷಿತ ಮೇಕೆದಾಟು ಯೋಜನೆಗೆ ಕೇಂದ್ರ ಜಲಶಕ್ತಿ ಇಲಾಖೆಯ ಮಂತ್ರಾಲಯದ ಜಲ ಆಯೋಗದಿಂದ ಅಗತ್ಯ ಮಂಜೂರಾತಿ ಕೊಡಿಸುವಂತೆ ಜಲಸಂಪನೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

ಕಾವೇರಿ ನ್ಯಾಯಾಧೀಕರಣ ಹಾಗೂ ಸುಪ್ರೀಂಕೋರ್ಟ್‌ನ ತೀರ್ಪಿನ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಹೆಚ್ಚುವರಿಯಾಗಿರುವ ನೀರಿನ ಪೈಕಿ 57 ಟಿಎಂಸಿಯನ್ನು ಸಂಗ್ರಹಿಸಲು ಮತ್ತು 400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗಾಗಿ ಮೇಕೆದಾಟುವಿಗಾಗಿ ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ 2019ರ ಜನವರಿ 18 ರಂದು ಕೇಂದ್ರ ಜಲಶಕ್ತಿ ಆಯೋಗಕ್ಕೆ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಲಾಗಿದೆ. ಕೇಂದ್ರ ಜಲಶಕ್ತಿ ಆಯೋಗ ಯೋಜನೆಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರವಾನಿಸಿದ್ದು, 2024ರ ಫೆಬ್ರವರಿ 1 ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ವಿಸ್ತೃತ ಯೋಜನಾ ವರದಿಯನ್ನು ಮತ್ತೆ ಕೇಂದ್ರ ಜಲಶಕ್ತಿ ಆಯೋಗಕ್ಕೆ ರವಾನಿಸಲಾಗಿದ್ದು, ತಾಂತ್ರಿಕ, ಆರ್ಥಿಕ ಅಂಶಗಳನ್ನು ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.

ಈ ಹಂತದಲ್ಲಿ ಕೇಂದ್ರ ಮಧ್ಯಪ್ರವೇಶ ಮಾಡಿ ಯೋಜನೆಗೆ ಅಗತ್ಯ ಮಂಜೂರಾತಿ ಕೊಡಿಸುವಂತೆ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ.
ಕೃಷ್ಣ ಮೇಲ್ದಂಡೆ ನದಿ ವಿವಾದದಲ್ಲಿ ಕೃಷ್ಣ ನ್ಯಾಯಾಧಿಕರಣ ನೀಡಿರುವ ತೀರ್ಪಿನ ಅನುಸಾರ ಅಧಿಸೂಚನೆಯನ್ನು ಹೊರಡಿಸಬೇಕು. ಈ ನದಿ ಉತ್ತರ ಕರ್ನಾಟಕ ಭಾಗಕ್ಕೆ ಜೀವನದಿಯಾಗಿದೆ. ಆಲಮಟ್ಟಿ ಅಣೆಕಟ್ಟಿನಿಂದ 5.94 ಲಕ್ಷ ಹೆಕ್ಟೇರ್‌ಗೆ ನೀರು ಒದಗಿಸಲಾಗಿದೆ. ನ್ಯಾಯಾಧೀಕರಣದ ತೀರ್ಪು ಅಧಿಸೂಚನೆಯಾದರೆ ಮತ್ತಷ್ಟು ಯೋಜನೆಗಳನ್ನು ಕೈಗೊಳ್ಳಲು ಸಹಾಯವಾಗಲಿದೆ ಎಂದು ವಿವರಿಸಿದ್ದಾರೆ.

ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ 367 ಸಣ್ಣ ಕೆರೆಗಳಿಗೆ ನೀರು ತುಂಬಿಸಲು ಭದ್ರಾ ಮೇಲ್ದಂಡೆಯ 29.90 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ರೂಪಿಸಲಾದ ಭದ್ರಾ ಮೇಲ್ದಂಡೆ ಯೋಜನೆ ಈವರೆಗೂ 9,665 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಬೇಕು. ಈ ಹಿಂದೆ ಬಜೆಟ್‌ನಲ್ಲಿ ಘೋಷಿಸಲಾದ 5,300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು ಎಂದು ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ.

ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಪ್ರಧಾನಿಯವರು ಭರವಸೆ ನೀಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.ಮಹದಾಯಿ ನದಿ ನೀರಿನ ವಿಚಾರವಾಗಿ ಪ್ರಧಾನಿಯವರ ಬಳಿ ಚರ್ಚೆ ನಡೆಸಿದ ಡಿ.ಕೆ.ಶಿವಕುಮಾರ್‌, ಕಳಸಾ ಬಂಡೂರಿ ಬಳಿ ಸಮತೋಲಿತ ಅಣೆಕಟ್ಟು ನಿರ್ಮಿಸಲು ಅನುಮತಿ ಕೊಡಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ.ರಾಷ್ಟ್ರೀಯ ನೀರು ಅಭಿವೃದ್ಧಿ ಸಂಸ್ಥೆ ಗೋದಾವರಿ, ಕಾವೇರಿ ನದಿ ಜೋಡಣೆ ಯೋಜನೆಯನ್ನು ಪ್ರಸ್ತಾಪಿಸಿದೆ.

ಇದರಿಂದ 146 ಟಿಎಂಸಿ ನೀರು ತಿರುವು ಪಡೆಯಲಿದೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಪಾಂಡಿಚೇರಿ ರಾಜ್ಯಗಳ ನಡುವೆ ನದಿ ನೀರು ಹಂಚಿಕೆಯಾಗಲಿದೆ. ಈ ಯೋಜನೆ ಜಾರಿಯ ವಿಚಾರವಾಗಿ ಮಧ್ಯಪ್ರವೇಶಿಸಿ ರಾಜ್ಯಕ್ಕೆ ತನ್ನ ಪಾಲಿನ ನೀರನ್ನು ಪಡೆದುಕೊಳ್ಳಲು ಅಗತ್ಯ ನೆರವು ನೀಡುವಂತೆ ಪ್ರಧಾನಿಯವರಲ್ಲಿ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ.

RELATED ARTICLES

Latest News