ನವದೆಹಲಿ,ಆ.1– ಸರ್ಕಾರಿ ಉದ್ಯೋಗ ಗಳಲ್ಲಿ ಮೀಸಲಾತಿ ನೀಡಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಉಪವ ರ್ಗೀಕರಿಸುವ ಹಕ್ಕು ರಾಜ್ಯಗಳಿಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಆ ಮೂಲಕ 2004ರಲ್ಲಿ ಇ.ವಿ.ಚಿನ್ನಯ್ಯ ವರ್ಸಸ್ ಆಂಧ್ರ ಪ್ರದೇಶ ಸರ್ಕಾರ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪನ್ನು ರದ್ದುಗೊಳಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠದಲ್ಲಿ ಒಬ್ಬರನ್ನು ಹೊರತುಪಡಿಸಿ (ನ್ಯಾ. ಬೇಲಾ ತ್ರಿವೇದಿ) ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಇದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತಿತರರ ವಾದ ಆಲಿಸಿದ ಬಳಿಕ ಸುಪ್ರೀಂಕೋರ್ಟ್ ಫೆಬ್ರವರಿ 8ರಂದು ಆದೇಶವನ್ನು ಕಾಯ್ದಿರಿಸಿತ್ತು. ಇದು ಪರಿಶಿಷ್ಟ ಜಾತಿಗಳನ್ನು ಗುರುತಿಸಲು 341 ನೇ ವಿಧಿಯ ಅಡಿಯಲ್ಲಿ ರಾಷ್ಟಪತಿಗಳ ವಿಶೇಷ ಅಧಿಕಾರವನ್ನು ಉಲ್ಲಂಸುವುದಿಲ್ಲ. ಉಪ-ವರ್ಗೀಕರಿಸುವ ರಾಜ್ಯಗಳ ಅಧಿಕಾರವು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಅದು ಹೇಳಿದೆ.
ಏಳು ನ್ಯಾಯಮೂರ್ತಿಗಳೆಲ್ಲರೂ ಒಳಮೀಸಲಾತಿಯ ಬಗ್ಗೆ ತಮ ತೀರ್ಪನ್ನು ನೀಡಿದ್ದಾರೆ. ಉಳಿದ ಆರು ಮಂದಿಯ ತೀರ್ಪುಗಳು ಪರಿಶಿಷ್ಟ ಜಾತಿ, ಪಂಗಡಗಳ ಉಪವರ್ಗೀರಣಕ್ಕೆ ಹಾಗೂ ಆ ಮೂಲಕ ಒಳಮೀಸಲಾತಿಯ ಪರವಾಗಿದ್ದವು. ಹಾಗಾಗಿ, 6:1 ಅನುಪಾತದಡಿ, ಉಪವರ್ಗೀಕರಣ ಆಧಾರಿತ ಮೀಸಲಾತಿಗೆ ನ್ಯಾಯಪೀಠ ಅಸ್ತು ಹೇಳಿದಂತಾಗಿದೆ.
ಈ ತೀರ್ಪು ಅರುಂತಥಿಯಾರ್ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಲು ತಮಿಳುನಾಡು ವಿಧಾನಸಭೆಯ ಶಾಸಕಾಂಗ ಸಾಮರ್ಥ್ಯಕ್ಕೆ ಹಸಿರು ನಿಶಾನೆ ತೋರಿಸಿದೆ.2004ರಲ್ಲಿ ಐವರು ನ್ಯಾಯಮೂರ್ತಿಗಳ ಪೀಠವು ಒಳಮೀಸಲಾತಿ ಅಥವಾ ಉಪ-ವರ್ಗೀಕರಣವನ್ನು ಅನುಮತಿಸಲಾಗುವುದಿಲ್ಲ ಎಂದು ತೀರ್ಪು ನೀಡಿತ್ತು. ಏಕೆಂದರೆ ಎಸ್ಸಿ, ಎಸ್ಟಿಗಳು ಏಕರೂಪದ ಒಂದೇ ವರ್ಗ ಎಂದು ಹೇಳಿತ್ತು.
ಪರಿಶಿಷ್ಟ ಜಾತಿ ಹಾಗೂ ಪಂಗಡಗಳಲ್ಲೇ ಇದ್ದರೂ, ದಶಕಗಳಿಂದ ಮೀಸಲಾತಿಯ ಸೌಲಭ್ಯಗಳಿದ್ದರೂ ಕೆನೆಪದರದಲ್ಲಿರುವ ಜಾತಿಗಳೇ ಮೀಸಲಾತಿಯ ಸಕಲ ಸವಲತ್ತುಗಳನ್ನು ಪಡೆದು ಮುಂದುವರಿದಿದ್ದಾರೆ. ಹಾಗಾಗಿ, ಮೀಸಲಾತಿಯ ಹೊರತಾಗಿಯೂ ಇನ್ನೂ ಅಭಿವೃದ್ಧಿಯಾಗದ ಜಾತಿಗಳಿಗೆ ಈಗಿರುವ ಶೇಕಡಾವಾರು ಮೀಸಲಾತಿಯಲ್ಲೇ (ಶೇ. 15) ಮರು ಮೀಸಲಾತಿ ಕಲ್ಪಿಸಬೇಕು. ಅದಕ್ಕಾಗಿ, ಪರಿಶಿಷ್ಟ ಜಾತಿ, ಪಂಗಡಗಳ ಉಪ ವರ್ಗೀಕರಣ ಅಗತ್ಯವಾಗಿದೆ. ಹೀಗೆ ಉಪ ವರ್ಗೀಕರಣ ಮಾಡುವುದರಿಂದ ಸಂವಿಧಾನದ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಜೊತೆಗೆ, ಎಸ್ಸಿ, ಎಸ್ಟಿಗಳಲ್ಲೇ ಕೆನೆಪದರದಲ್ಲಿರುವ ಜಾತಿಗಳನ್ನು ಮೀಸಲಾತಿಯಿಂದ ಹೊರಗಿಡಬೇಕು ಎಂಬ ಅಭಿಪ್ರಾಯವನ್ನೂ ಅದು ಮಂಡಿಸಿದೆ.
ಎಸ್ಸಿ/ಎಸ್ಟಿ ಸಮುದಾಯಗಳಲ್ಲಿ ಹೆಚ್ಚು ಅನುಕೂಲವಾಗಿರುವ ಗುಂಪುಗಳ ಮಕ್ಕಳು ಮೀಸಲಾತಿಯನ್ನು ಪಡೆಯುವುದನ್ನು ಮುಂದುವರಿಸಬೇಕೇ ಎಂಬ ಪ್ರಶ್ನೆಯನ್ನು ಉನ್ನತ ನ್ಯಾಯಾಲಯವು ಪರಿಶೋಧಿಸಿತು. ನ್ಯಾಯಾಲಯವು ಈ ವರ್ಗಗಳೊಳಗಿನ ಏಕರೂಪತೆಯ ಕಲ್ಪನೆಯನ್ನು ಸಹ ಪರಿಶೀಲಿಸಿತು. ಕೇಂದ್ರ ಸರ್ಕಾರವು ಎಸ್ಸಿ ಮತ್ತು ಎಸ್ಟಿಗಳ ಉಪವರ್ಗೀಕರಣದ ಪರವಾಗಿದೆ ಎಂದು ವರದಿ ಸಲ್ಲಿಸಿತ್ತು.
ಶ್ರೀಮಂತ ಹಿಂದುಳಿದ ವರ್ಗಗಳಿಗೆ ಕೋಟಾದ ಪ್ರಯೋಜನಗಳನ್ನು ನೀಡುವುದನ್ನು ಮುಂದುವರಿಸುವುದು ಮೀಸಲಾತಿಯ ಉದ್ದೇಶವನ್ನೇ ವಿಲಗೊಳಿಸುತ್ತದೆ. ಮೀಸಲಾತಿಯ ಲಾಭದ ಮೇಲೆ ಸವಾರಿ ಮಾಡುವ ಶ್ರೀಮಂತ ಸ್ಥಾನವನ್ನು ತಲುಪಿದ ಜನರನ್ನು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ವಂಚಿತರನ್ನಾಗಿ ಪರಿಗಣಿಸಲಾಗುವುದಿಲ್ಲ. ಅವರು ಈಗಾಗಲೇ ಮೀಸಲಾತಿಯ ನಿಬಂಧನೆಗಳಿಂದ ಹೊರನಡೆಯುವ ಹಂತವನ್ನು ತಲುಪಿದ್ದಾರೆ ಮತ್ತು ಎಸ್ಸಿ, ಎಸ್ಟಿಯ ಹೆಚ್ಚು ಅರ್ಹ ವರ್ಗಗಳಿಗೆ ದಾರಿ ಮಾಡಿಕೊಡಬೇಕು ಎಂಬುದನ್ನು ಒತ್ತಿ ಹೇಳಿದರು.
ಒಳಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಒಳ ವರ್ಗೀಕರಣ ತರುವುದಕ್ಕೆ ತನ್ನ ಬೆಂಬಲ ಇದೆ ಎಂದು ಈ ಮೊದಲೇ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ಗೆ ತಿಳಿಸಿತ್ತು. ಒಳ ವರ್ಗೀಕರಣವು ಮೀಸಲಾತಿಯ ಉದ್ದೇಶದಿಂದ ಮುಂದಕ್ಕೆ ಒಯ್ಯಲು ನೆರವಾಗುತ್ತದೆ ಎಂದು ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದರು. ಇ.ವಿ.ಚಿನ್ನಯ್ಯ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ವಿರೋಧಿಸುವುದಾಗಿ ಹೇಳಿದ್ದರು.
2020 ರಲ್ಲಿ ಸ್ಟೇಟ್ ಆ್ ಪಂಜಾಬ್ ವರ್ಸಸ್ ದೇವಿಂದರ್ ಸಿಂಗ್ ಪ್ರಕರಣದಲ್ಲಿ ಪಂಚ ಸದಸ್ಯ ಪೀಠವು ಈ ವಿಚಾರವನ್ನು ಸಪ್ತ ಸದಸ್ಯ ಪೀಠಕ್ಕೆ ವರ್ಗಾಯಿಸಿತ್ತು. ಈ ವೇಳೆ 2004ರಲ್ಲಿ ಇ.ವಿ.ಚಿನ್ನಯ್ಯ ವರ್ಸಸ್ ಆಂಧ್ರಪ್ರದೇಶ ರಾಜ್ಯ ಸರ್ಕಾರದ ಪ್ರಕರಣದಲ್ಲಿ ಉಪ-ವರ್ಗೀಕರಣವನ್ನು ಅನುಮತಿಸಲಾಗುವುದಿಲ್ಲ ಎಂದು ಸಮನ್ವಯ ಪೀಠ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತ್ತು.
3 ದಿನಗಳ ಕಾಲ ನಡೆದ ಸುದೀರ್ಘ ವಿಚಾರಣೆಯಲ್ಲಿ ನ್ಯಾಯಾಲಯವು ಅಸ್ಪಶ್ಯತೆಯ ಸಾಮಾಜಿಕ ಇತಿಹಾಸ, ಸಂವಿಧಾನ ರಚನೆಕಾರರ ದೃಷ್ಟಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪರಿಕಲ್ಪನೆ, ಭಾರತದಲ್ಲಿ ಮೀಸಲಾತಿಯ ಉದ್ದೇಶ ಮತ್ತು ಅದನ್ನು ಮುಂದುವರಿಸುವಲ್ಲಿ 341ನೇ ವಿಧಿಯ ಮಹತ್ವವನ್ನು ಚರ್ಚಿಸಿತ್ತು.