ವಯನಾಡ್ (ಕೇರಳ),ಆ.1- ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತರ ಸಂಖ್ಯೆ ಕನಿಷ್ಠ 243ಕ್ಕೆ ಏರಿಕೆಯಾಗಿದೆ. ಇನ್ನೂ 249 ಮಂದಿ ಕಾಣೆಯಾಗಿದ್ದಾರೆ.ಇವರೆಗೆ ಮೃತರಲ್ಲಿ 77 ಪುರುಷರು, 67 ಮಹಿಳೆಯರು ಮತ್ತು 22 ಮಕ್ಕಳು ಸೇರಿದಂತೆ 96 ಸಂತ್ರಸ್ತರನ್ನು ಗುರುತಿಸಲಾಗಿದೆ.
166 ದೇಹಗಳು ಮತ್ತು 49 ದೇಹದ ಭಾಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಒಟ್ಟು 75 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಜೊತೆಗೆ 200ಕ್ಕೂ ಹೆಚ್ಚು ಜನರು ಸಹ ಗಾಯಗೊಂಡಿದ್ದಾರೆ. ವಿವಿಧ ಆಸ್ಪತ್ರೆಗಳನ್ನು ಗಾಯಾಳುಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದುವರೆಗೆ 3,000ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೂ ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರಕ್ಕಾಗಿ ರಕ್ಷಣಾ ಕಾರ್ಯಾಚರಣೆಗಳು ತೀವ್ರಗೊಳಿಸಲಾಗುತ್ತಿದೆ. ಭೂಕುಸಿತ ಪೀಡಿತ ಚೂರಲಲಾ ಹಾಗೂ ಮುಂಡಕ್ಕೈ ನಡುವಿನ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿದೆ.
ದುರಂತ ಪೀಡಿತ ಚುರಲಲದಲ್ಲಿ ಸೇನೆ ನಿರ್ಮಿಸುತ್ತಿರುವ ತಾತ್ಕಾಲಿಕ ಬೈಲಿ ಸೇತುವೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದು ಪೂರ್ಣಗೊಂಡ ಬಳಿಕ ಕಾರ್ಯಾಚರಣೆಗೆ ಇನ್ನಷ್ಟು ವೇಗ ದೊರೆಯಲಿದೆ. ಚೂರಲಲಾದಲ್ಲಿ ಭಾರತೀಯ ಸೇನೆಯು ತಾತ್ಕಾಲಿಕ ಬೈಲಿ ಸೇತುವೆ ನಿರ್ಮಿಸುವ ಕೆಲಸ ಆರಂಭಿಸಿದೆ. ಸೇನೆಯ ಎಂಜಿನಿಯರಿಂಗ್ ಘಟಕವಾದ ಮದ್ರಾಸ್ ಇಂಜಿನಿಯರ್ ಗ್ರೂಪ್ (ಎಂಇಜಿ) ಸೇತುವೆ ನಿರ್ಮಾಣ ಮಾಡುತ್ತಿದ್ದು, ಇದು ಪೂರ್ಣಗೊಳ್ಳುವತ್ತ ಸಾಗಿದೆ.
ವಯನಾಡ್ನಲ್ಲಿ ಸೋಮವಾರ-ಮಂಗಳವಾರದ ಮಧ್ಯರಾತ್ರಿಯಲ್ಲಿ ಎರಡು ಭಾರಿ ವಿನಾಶಕಾರಿ ಭೂಕುಸಿತಗಳು ಉಂಟಾಗಿವೆ. ನಾಲ್ಕು ಗ್ರಾಮಗಳ ಸಂಪೂರ್ಣವಾಗಿ ನೀರು ಹಾಗೂ ಮಣ್ಣು ಪಾಲಾಗಿವೆ. ನೂರಾರು ಮನೆಗಳು, ಸಂಪರ್ಕ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ.
ಭಾರತೀಯ ಸೇನೆಯು ತನ್ನ ಇಂಜಿನಿಯರ್ ಘಟಕದ ನೆರವಿನೊಂದಿಗೆ ತಾತ್ಕಾಲಿಕ ಬೈಲಿ ಸೇತುವೆ ನಿರ್ಮಾಣದಲ್ಲಿ ತೊಡಗಿದೆ. ಈ ಬಗ್ಗೆ ಪುಣೆಯ ದಕ್ಷಿಣ ಕಮಾಂಡ್ ಕಚೇರಿಯು ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಮಾಹಿತಿ ಹಂಚಿಕೊಂಡಿದೆ. ಪ್ರತಿಕೂಲ ಹವಾಮಾನ, ಹೆಚ್ಚುತ್ತಿರುವ ನೀರಿನ ಮಟ್ಟಗಳು ಮತ್ತು ರಾತ್ರಿಯಿಡೀ ಕೆಲಸ ಮಾಡುವ ಸವಾಲುಗಳ ಹೊರತಾಗಿಯೂ ಮದ್ರಾಸ್ ಇಂಜಿನಿಯರ್ಸ್ ತಂಡವು ಚೂರಲಲಾದಲ್ಲಿ ಕಠಿಣ ಪರಿಶ್ರಮ ಮತ್ತು ಪಟ್ಟುಬಿಡದೆ ಸೇತುವೆ ನಿರ್ಮಾಣ ಪೂರ್ಣಗೊಳಿಸುವತ್ತ ಸಾಗುತ್ತಿದೆ ಎಂದು ಪೋಸ್ಟ್ ಮಾಡಿದೆ.
ಅವಶೇಷಗಳಡಿ ಬದುಕುಳಿದವರ ಹುಡುಕಾಟ :
ಸೇನೆ ಮತ್ತು ರಕ್ಷಣಾ ತಂಡವು ಈ ಸೇತುವೆ ನಿರ್ಮಾಣ ಪೂರ್ಣಗೊಳಿಸಿದ ನಂತರವೇ ರಕ್ಷಣಾ ವಾಹನಗಳು, ಆಹಾರ ಮತ್ತು ನೀರು ಮುಂಡಕ್ಕೈಗೆ ಸಾಗಿಸಲು ಸಾಧ್ಯವಾಗುತ್ತದೆ ಎಂದು ವರದಿಗಳು ಹೇಳುತ್ತಿವೆ. ಇದೇ ವೇಳೆ, ಹಲವಾರು ರಕ್ಷಣಾ ತಂಡಗಳು ನಿರಂತರವಾಗಿ ಸಂತ್ರಸ್ತರ ಪತ್ತೆ ಕಾರ್ಯದಲ್ಲಿ ತೊಡಗಿವೆ. ಭೀಕರ ಭೂಕುಸಿತದಲ್ಲಿ ಬದುಕುಳಿದವರು ಹಾಗೂ ಅವರ ಕುರುಹಗಳನ್ನು ಪತ್ತೆಹಚ್ಚಲು ಮನೆಗಳು ಮತ್ತು ಕಟ್ಟಡಗಳ ಅವಶೇಷಗಳ ನಡುವೆ ದಣಿವರಿಯದೇ ಹುಡುಕಾಟ ನಡೆಸಲಾಗುತ್ತಿದೆ.
ಸೇನಾ ಸಿಬ್ಬಂದಿ ಜತೆಗೆ ಎನ್ಡಿಆರ್ಎ್, ಎಸ್ಡಿಆರ್ಎ್ ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಸ್ಥಳೀಯರು ಕಾರ್ಯಾಚರಣೆಗೆ ಕೈ ಜೋಡಿಸಿದ್ದು, ಅವಶೇಷಗಳಡಿ ಸಿಲುಕಿರುವ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ. ಜತೆಗೆ ಕಲ್ಲು, ಮಣ್ಣು, ಕೆಸರಿನಡಿ ಹುಡುಗಿರುವ ಶವಗಳನ್ನು ನಿರಂತರ ಕಾರ್ಯಾಚರಣೆ ಮೂಲಕ ಹೊರತೆಗೆಯುತ್ತಿದ್ದಾರೆ.
ಸೇತುವೆ ನಿರ್ಮಾಣಕ್ಕೆ ಆಹೋರಾತ್ರಿ ಕಾರ್ಯಾಚರಣೆ :
ಪ್ರವಾಹದ ತೀವ್ರತೆಗೆ ಚುರಲಲದಲ್ಲಿನ ಸೇತುವೆ ಕೊಚ್ಚಿ ಹೋಗಿದ್ದು, ಅತೀ ಹೆಚ್ಚು ದುರಂತಕ್ಕೊಳಗಾದ ಮುಂಡಕೈ ಭಾಗದೊಂಡಿಗೆ ಸಂಪರ್ಕ ಕಡಿತಗೊಂಡಿದೆ. ಇದು ಕೂಡ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ.
ಹೀಗಾಗಿ ಸೇನಾ ಪಡೆ ಎರಡೂ ಗ್ರಾಮಗಳನ್ನು ಸಂಪರ್ಕಿಸಲು ತಾತ್ಕಾಲಿಕ ಬೈಲಿ ಸೇತುವೆ ನಿರ್ಮಿಸುತ್ತಿದೆ. ಸೇತುವೆಗೆ ಅಗತ್ಯವಾದ ಸಾಮಗ್ರಿಗಳನ್ನು ನಿನ್ನೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ತಂದು ಅಲ್ಲಿಂದ 18 ಲಾರಿಗಳ ಮೂಲಕ ಸ್ಥಳಕ್ಕೆ ತಲುಪಿಸಲಾಗಿತ್ತು. ಸೇತುವೆ ನಿರ್ಮಾಣಕ್ಕೆ ಸೇನಾ ಸಿಬ್ಬಂದಿ ನಿನ್ನೆಯಿಂದ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ರಾತ್ರಿ ಇಡೀ ಇದರ ಕಾರ್ಯಾಚರಣೆ ನಡೆದಿದ್ದು, ಇದೀಗ ಅಂತಿಮ ಹಂತಕ್ಕೆ ತಲುಪಿದೆ.
ಮುಂಡಕೈ ಗ್ರಾಮದ ಬೃಹತ್ ಸಿಮೆಂಟ್, ಗೋಡೆ, ಮಣ್ಣಿನ ರಾಶಿ, ಕಲ್ಲಿನ ಬಂಡೆಗಳ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇದನ್ನು ಸರಿಸಲು ಮನುಷ್ಯರಿಂದ ಸಾಧ್ಯವಿಲ್ಲ. ಇದಕ್ಕೆ ಬೃಹತ್ ಯಂತ್ರಗಳ ಸಹಾಯ ಬೇಕೇ ಬೇಕು. ಈ ಬೈಲಿ ಸೇತುವೆ ಮೂಲಕ ಜೆಸಿಬಿಯಂತಹ ಯಂತ್ರಗಳನ್ನು ಮುಂಡಕೈಗೆ ಸಾಗಿಸಬಹುದು. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಇನ್ನಷ್ಟು ವೇಗ ಸಿಗಲಿದೆ.
ಭಾರಿ ತೂಕದ ಕಬ್ಬಿಣದ ಬೀಮ್ ಬಳಸಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ನದಿಯಲ್ಲಿ ಪ್ಲಾಟಫಾರ್ಮ್ ನಿರ್ಮಿಸಿ ಸೇತುವೆಯನ್ನು ಇನ್ನಷ್ಟು ದೃಢವಾಗಿಸಲು ಸೇನೆ ಶ್ರಮಿಸುತ್ತಿದೆ. ಮಧ್ಯಾಹ್ನದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸಾಮಾನ್ಯವಾಗಿ 5-6 ಗಂಟೆಗಳಲ್ಲಿ ಈ ರೀತಿಯ ಸೇತುವೆ ಸಿದ್ಧವಾಗುತ್ತದೆ. ಇದರೆ ಇಲ್ಲಿನ ಪ್ರತಿಕೂಲ ಹವಾಮಾನ, ಸಡಿಲ ಮಣ್ಣಿನ ಕಾರಣ ಕಾಮಗಾರಿ ಇಷ್ಟೊಂದು ದೀರ್ಘವಾಗುತ್ತಿದೆ ಎಂದು ಸೇನೆ ತಿಳಿಸಿದೆ. ಇದರ ಜತೆಗೆ ಈ ಸೇತುವೆ ಕೆಳ ಭಾಗದಲ್ಲಿ ನಡೆದು ಹೋಗಲು ಅನುಕೂಲವಾಗುವಂತೆ ಟ್ ಬ್ರಿಡ್ಜ್ ನಿರ್ಮಿಸಲೂ ಸೇನೆ ಮುಂದಾಗಿದೆ.