Monday, November 25, 2024
Homeರಾಜ್ಯನೆರೆ ಪರಿಹಾರ ಪಡೆಯಲು ನಿರಾಕರಿಸಿದ್ದ ರೈತರ ಮನವೊಲಿಸಿದ ಸಚಿವ ಗುಂಡೂರಾವ್‌

ನೆರೆ ಪರಿಹಾರ ಪಡೆಯಲು ನಿರಾಕರಿಸಿದ್ದ ರೈತರ ಮನವೊಲಿಸಿದ ಸಚಿವ ಗುಂಡೂರಾವ್‌

ಬೆಂಗಳೂರು, ಆ.2-ಭಾರೀ ಮಳೆ ಹಾಗೂ ಪ್ರವಾಹದಿಂದ ತೋಟ, ಗದ್ದೆಗಳು ಮುಳುಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಅದ್ಯಪಾಡಿ ಸುತ್ತಮುತ್ತಲ ಗ್ರಾಮಗಳ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರವ್‌ ಸೂಚನೆ ನೀಡಿದ್ದಾರೆ.

ಅದ್ಯಪಾಡಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದ ಸಂದರ್ಭದಲ್ಲಿ ಅಕ್ಕ ಪಕ್ಕದ ಗ್ರಾಮಗಳು ಜಲಾವೃತವಾಗಿರುವುದನ್ನು ಸ್ಥಳೀಯ ನಿವಾಸಿಗಳು ಸಚಿವರ ಗಮನಕ್ಕೆ ತಂದರು. ಪ್ರತಿ ವರ್ಷ ಅದ್ಯಪಾಡಿಯಲ್ಲಿ ಫಾಲ್ಗುಣಿ ನದಿಯ ನೆರೆ ಪ್ರವಾಹದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಅದ್ಯಪಾಡಿಯ ಅಕ್ಕ ಪಕ್ಕದ ಹಳ್ಳಿಗಳಿಗೆ ಫಾಲ್ಗುಣಿ ನದಿ ನೆರೆ ಹಾವಳಿ ತಡೆಯಲು, ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞರಿಂದ ವರದಿ ಪಡೆದು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.

ಇದೇ ವೇಳೆ ನೆರೆ ಪರಿಹಾರ ಪಡೆಯಲು ನಿರಾಕರಿಸಿದ ಅದ್ಯಪಾಡಿ ರೈತರ ಮನವೊಲಿಸಿದ ಸಚಿವರು, ನೆರೆ ಪರಿಹಾರಕ್ಕೂ ಶಾಶ್ವತ ಪರಿಹಾರಕ್ಕೂ ಸಂಬಂಧವಿಲ್ಲ. ನೆರೆ ಪರಿಹಾರ ಪಡೆದರೆ ಶಾಶ್ವತ ಪರಿಹಾರ ಆಗಲ್ಲ ಎಂಬ ಭಾವನೆ ಬೇಡ.

ಒಂದಕ್ಕೂಂದು ಸಂಬಂಧ ಕಲ್ಪಿಸುವ ಅಗತ್ಯವಿಲ್ಲ. ಭತ್ತದ ಗದ್ದೆ, ತೋಟ ಮುಳುಗಡೆಯಿಂದ ನಷ್ಟ ಅನುಭವಿಸಿರುವುದಕ್ಕೆ ಸರ್ಕಾರದಿಂದ ಸಿಗುವ ನೆರೆ ಪರಿಹಾರ ಪಡೆಯಿರಿ. ಫಾಲ್ಗುಣಿ ನದಿಯಿಂದಾಗುವ ನೆರೆ ಹಾವಳಿ ತಡೆಯುವ ಶಾಶ್ವತ ಪರಿಹಾರ ಒದಸುವ ಜವಾಬ್ದಾರಿ ನಮಗೆ ಬಿಡಿ ಎಂದು ರೈತರಲ್ಲಿ ಮನವಿ ಮಾಡಿದರು.

ಸಚಿವರ ಮನವಿಗೆ ಒಪ್ಪಿಗೆ ಸೂಚಿಸಿ ಪರಿಹಾರ ಪಡೆಯುವುದಾಗಿ ಸ್ಥಳೀಯ ನಿವಾಸಿಗಳು ಸಚಿವರಿಗೆ ತಿಳಿಸಿದರು. ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಕಳೆದ 11 ವರ್ಷದಿಂದ ನೆರೆ ಪರಿಹಾರವನ್ನು ಅದ್ಯಪಾಡಿ ನಿವಾಸಿಗಳು ತಿರಸ್ಕರಿಸುತ್ತಾ ಬಂದಿದ್ದರು.

RELATED ARTICLES

Latest News