Friday, September 20, 2024
Homeರಾಜ್ಯಶೇ.91ರಷ್ಟು ಭರ್ತಿಯಾದ ಲಿಂಗನಮಕ್ಕಿ ಜಲಾಶಯ

ಶೇ.91ರಷ್ಟು ಭರ್ತಿಯಾದ ಲಿಂಗನಮಕ್ಕಿ ಜಲಾಶಯ

ಬೆಂಗಳೂರು, ಆ.2-ರಾಜ್ಯದಲ್ಲಿ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಜಲ ವಿದ್ಯುತ್‌ ಉತ್ಪಾದಿಸುವ ಪ್ರಮುಖ ಜಲಾಶಯವಾದ ಲಿಂಗನಮಕ್ಕಿಯಲ್ಲಿ ಶೇ.91ರಷ್ಟು ನೀರು ಸಂಗ್ರಹವಾಗಿದ್ದು, ಶೀಘ್ರದಲ್ಲೇ ಗರಿಷ್ಠ ಪ್ರಮಾಣದಲ್ಲಿ ಭರ್ತಿಯಾಗುವ ಸಾಧ್ಯತೆಗಳಿವೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ 151.75 ಟಿಎಂಸಿ ಅಡಿ ಗರಿಷ್ಠ ಸಾಮರ್ಥ್ಯದ ಈ ಜಲಾಶಯದಲ್ಲಿ ಇಂದು 138.42 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಭರ್ತಿಯಾಗಲು ಇನ್ನು 11 ಟಿಎಂಸಿ ನೀರು ಬೇಕಾಗಿದೆ. ಜಲಾಶಯದ ಒಳ ಹರಿವು 51,961 ಕ್ಯುಸೆಕ್ಸ್ ಇದ್ದು, ಹೊರ ಹರಿವು 3570 ಕ್ಯುಸೆಕ್ಸ್ ಇದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 69.77 ಟಿಎಂಸಿ ಮಾತ್ರ ನೀರಿತ್ತು. ರಾಜ್ಯದಲ್ಲೇ ಅತಿ ಹೆಚ್ಚು ನೀರು ಸಂಗ್ರಹ ಸಾಮರ್ಥ್ಯವಿರುವ ಜಲಾಶಯವಿದು. ಸೂಪಾ ಜಲಾಶಯದಲ್ಲೂ ಶೇ.77ರಷ್ಟು ನೀರು ಸಂಗ್ರಹವಾಗಿದೆ. 44613 ಕ್ಯುಸೆಕ್ಸ್ ಒಳಹರಿವಿದೆ. ಗರಿಷ್ಠ 145.33 ಟಿಎಂಸಿ ಸಾಮರ್ಥ್ಯದ ಈ ಜಲಾಶಯದಲ್ಲಿ 111.61 ಟಿಎಂಸಿ ನೀರಿದೆ.

ಹಾಗೆಯೇ ವಾರಾಹಿ ಜಲಾಶಯದ ಗರಿಷ್ಠ ಸಾಮರ್ಥ್ಯ 31.10 ಟಿಎಂಸಿ ಆಗಿದ್ದು, 18.83 ಟಿಎಂಸಿಯಷ್ಟು ನೀರಿದೆ. ಒಳ ಹರಿವು 5202 ಕ್ಯುಸೆಕ್ಸ್ ನಷ್ಟಿದೆ. ಈ ಎರಡು ಜಲಾಶಯಗಳಿಗೆ ಸಾಕಷ್ಟು ಒಳಹರಿವು ಇಲ್ಲದಿರುವುದರಿಂದ ಸದ್ಯಕ್ಕೆ ಭರ್ತಿಯಾಗುವ ಸಾಧ್ಯತೆ ವಿರಳ. ಈ ಮೂರು ಜಲಾಶಯಗಳಲ್ಲಿ ಶೇ.82ರಷ್ಟು ನೀರು ಸಂಗ್ರಹವಾಗಿದೆ. ಸಾಕಷ್ಟು ಒಳಹರಿವು ಇದ್ದು, ಜಲಾನಯನ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಈ ಬಾರಿ ಜಲ ವಿದ್ಯುತ್‌ ಉತ್ಪಾದನೆಗೆ ಅನುಕೂಲವಾಗಲಿದೆ. ಅಂದರೆ, ಕಳೆದ ವರ್ಷಕ್ಕಿಂತ ಈ ಬಾರಿ ದುಪ್ಪಟ್ಟು ನೀರು ಈ ಜಲಾಶಯಗಳಲ್ಲಿದೆ.

ಸಂಘರ್ಷಕ್ಕೆ ತೆರೆ:
ಕಾವೇರಿ ಕೊಳ್ಳದ ಜಲಾನಯನ ಭಾಗದ ಹಾರಂಗಿ, ಹೇಮಾವತಿ ಹಾಗೂ ಕಬಿನಿ ಜಲಾಶಯಗಳು ಭರ್ತಿಯಾಗಿದ್ದು, ಈ ನಾಲ್ಕು ಜಲಾಶಯಗಳಿಗೆ 1,55,696 ಕ್ಯುಸೆಕ್ಸ್ ಒಳಹರಿವು ಇದೆ. 1,51,110 ಕ್ಯುಸೆಕ್ಸ್ ಹೊರ ಹರಿವು ಇದೆ. ಕಾವೇರಿ ಜಲಾನಯನ ಭಾಗದಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಒಳ ಹರಿವು ಸಹ ಇಳಿಕೆಯಾಗುತ್ತಿದೆ.

ಈಗಾಗಲೇ 100ಕ್ಕೂ ಹೆಚ್ಚು ಟಿಎಂಸಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಮೆಟ್ಟೂರು ಜಲಾಶಯವೂ ಭರ್ತಿಯಾಗಿದೆ. ಹೀಗಾಗಿ ಈ ಬಾರಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ನೀರು ಹಂಚಿಕೆ ಸಂಘರ್ಷಕ್ಕೆ ತೆರೆ ಬಿದ್ದಂತಾಗಿದೆ.

ಕೃಷ್ಣಾ ಕೊಳ್ಳದ ಮಲಪ್ರಭಾ ಜಲಾಶಯದಲ್ಲಿ ಶೇ.87ರಷ್ಟು ನೀರು ಸಂಗ್ರಹವಾಗಿದೆ. 19 ಸಾವಿರ ಕ್ಯುಸೆಕ್ಸ್ ಅಧಿಕ ಪ್ರಮಾಣದ ಒಳಹರಿವಿದೆ. ಈ ಜಲಾಶಯ ಹೊರತುಪಡಿಸಿ ಉಳಿದೆಲ್ಲಾ ಜಲಾಶಯಗಳು ಭರ್ತಿಯಾಗಿವೆ. ಕೃಷ್ಣಾ ಕೊಳ್ಳದ ಜಲಾಶಯಗಳಿಗೆ ಅಂದರೆ, ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ, ನಾರಾಯಣಪುರ ಜಲಾಶಯಗಳಿಗೆ ಒಟ್ಟಾರೆ 5,24,181 ಕ್ಯುಸೆಕ್ಸ್ ನಷ್ಟು ಒಳಹರಿವಿದೆ. ಈ ಜಲಾಶಯಗಳಿಂದ 5,11,128 ಕ್ಯುಸೆಕ್ಸ್ ನಷ್ಟು ಹೊರ ಹರಿವಿದೆ.

ರಾಜ್ಯದ14 ಪ್ರಮುಖ ಜಲಾಶಯಗಳಲ್ಲಿ 895.62 ಟಿಎಂಸಿಯಷ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯವಿದೆ. ಪ್ರಸ್ತುತ 731.64 ಟಿಎಂಸಿನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 599.77 ಟಿಎಂಸಿಯಷ್ಟು ಸಂಗ್ರಹವಾಗಿತ್ತು. ರಾಜ್ಯದಲ್ಲಿ ಅತಿವೃಷ್ಟಿ ಪ್ರವಾಹ ಉಂಟಾಗುತ್ತಿದ್ದರೂ ವಾಣಿವಿಲಾಸ ಸಾಗರ ಜಲಾಶಯಕ್ಕೆ ಸಾಕಷ್ಟು ನೀರು ಬರುತ್ತಿಲ್ಲ. 728 ಕ್ಯುಸೆಕ್ಸ್ ಮಾತ್ರ ಒಳಹರಿವು ಇದೆ. 30.42 ಟಿಎಂಸಿ ಗರಿಷ್ಠ ಸಾಮರ್ಥ್ಯದ ಈ ಜಲಾಶಯದಲ್ಲಿ 18.57 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 24.70 ಟಿಎಂಸಿ ನೀರು ಸಂಗ್ರಹವಾಗಿತ್ತು.

RELATED ARTICLES

Latest News