ಬೆಂಗಳೂರು, ಆ.2- ಮುಂಗಾರು ಮಳೆಯ ಅಬ್ಬರಕ್ಕೆ ಪಶ್ಚಿಮ ಘಟ್ಟಗಳು ನಲುಗಿ ಹೋಗಿವೆ. ಮಳೆಯ ರೌದ್ರ ನರ್ತನಕ್ಕೆ ಹಲವೆಡೆ ಭೂಕುಸಿತ ಉಂಟಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.ಮಲೆನಾಡು, ಕರಾವಳಿ ಭಾಗದಲ್ಲಿ ಬೆಟ್ಟ- ಗುಡ್ಡಗಳು ಕುಸಿದು ಬೀಳುತ್ತಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಅತ್ತ ಕೇರಳದ ವಯನಾಡಿನಲ್ಲಿ ಭೂಕುಸಿತ ದುರಂತ ಸಂಭವಿಸಿ ನೂರಾರು ಜನ ಸಾವನ್ನಪ್ಪಿ ಮತ್ತೆ ನೂರಾರು ಜನ ನಾಪತ್ತೆಯಾಗಿ ಬಿರುಸಿನ ಕಾರ್ಯಾಚರಣೆ ನಡೆಯುತ್ತಿದೆ.ಇತ್ತ ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ನಿಲ್ಲದ ಮಳೆಯ ಅಬ್ಬರಕ್ಕೆ ಹಲವೆಡೆ ಭೂಕುಸಿತ, ಗುಡ್ಡ ಕುಸಿತ ಉಂಟಾಗಿ ಹಲವು ಅನಾಹುತಗಳು ಸಂಭವಿಸುತ್ತಿವೆ.
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಪ್ರಾಣಾಪಾಯ ಆಗದಿದ್ದರೂ ನಿರಂತರವಾಗಿ ಗುಡ್ಡ, ಭೂಮಿ ಕುಸಿಯುತ್ತಿರುವುದು ಜನರಲ್ಲಿ ಆತಂಕದ ವಾತಾವರಣ ಉಂಟು ಮಾಡಿದೆ. ಮಳೆ ಬೇಕು, ಬೇಕು ಎನ್ನುತ್ತಿದ್ದ ಜನ ಈಗ ಮಳೆ ಸಾಕಪ್ಪ ದೇವರೇ ಎಂದು ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜನರು ಪ್ರವಾಹದ ಭೀತಿಯಲ್ಲಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಕಡೆ ಸೇತುವೆಗಳು, ರಸ್ತೆಗಳು, ಮಳೆಯ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಜಲಾಶಯಗಳು ಭರ್ತಿಯಾಗಿ ಭಾರಿ ಪ್ರಮಾಣದ ನೀರನ್ನು ಹೊರ ಬಿಡುತ್ತಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.ಈ ಭಾಗದಲ್ಲಿ ಜನರು ಜೀವ ಕೈಯಲ್ಲಿ ಹಿಡಿದು ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದ್ದು, ಇನ್ನು ಯಾವ ಪ್ರಮಾಣದ ಅಪಾಯ ಎದುರಾಗಬಹುದೋ ಎಂಬ ಆತಂಕ ಉಂಟಾಗಿದೆ.
ಹಾಸನದ ಶಿರಾಡಿ ಘಾಟ್ನ ರಾಷ್ಟ್ರೀಯ ಹೆದ್ದಾರಿ 75ರ ದೊಡ್ಡ ತಪ್ಪಲೆ ಬಳಿ ಭೂಕುಸಿತ ಮುಂದುವರೆದಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಶಿರಾಡಿ ಘಾಟ್ನಲ್ಲಿ ಕೆಸರಿನ ರಾಶಿ ಹರಿದು ಬರುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.
ಕಂದಾಯ ಸಚಿವ ಕೃಷ್ಣಭೈರೇಗೌಡ, ಶಾಸಕ ಸಿಮೆಂಟ್ ಮಂಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಾಡಿ ಘಾಟ್ನಲ್ಲಿ ಸದ್ಯ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.ಪುತ್ತೂರು, ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ತೆಂಕಿಲದಲ್ಲಿ ಇಂದು ಬೆಳಗಿನ ಜಾವ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.
ಬದಲಿ ರಸ್ತೆ ಪುತ್ತೂರು ಪೇಟೆ ಬಳಸಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಾಗ್ಗೆ ಗುಡ್ಡ ಕುಸಿಯುತ್ತಲೇ ಇರುತ್ತದೆ. ಇಂದು ಭಾರೀ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದ್ದು, ನಗರ ಸಭೆ ಅಧಿಕಾರಿಗಳು, ಪೊಲೀಸರು ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಮುಂಗಾರು ಮಳೆಯ ಅಬ್ಬರ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ವ್ಯಾಪಿಸಿದೆ. ಹಲವೆಡೆ ಕಟ್ಟೆಚ್ಚರ ಘೋಷಿಸಲಾಗಿದೆ. ಮತ್ತೆ ಕೆಲವೆಡೆ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿದೆ. ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.