Friday, September 20, 2024
Homeರಾಜ್ಯಭವಿಷ್ಯದ ಸವಾಲು ಎದುರಿಸಲು ನ್ಯಾನೋ ತಂತ್ರಜ್ಞಾನ ಬಳಕೆಗೆ ಸಿಎಂ ಸಿದ್ದರಾಮಯ್ಯ ಕರೆ

ಭವಿಷ್ಯದ ಸವಾಲು ಎದುರಿಸಲು ನ್ಯಾನೋ ತಂತ್ರಜ್ಞಾನ ಬಳಕೆಗೆ ಸಿಎಂ ಸಿದ್ದರಾಮಯ್ಯ ಕರೆ

ಬೆಂಗಳೂರು, ಆ.2- ಆಹಾರ ಭದ್ರತೆ, ಇಂಧನ ಸುರಕ್ಷತೆ, ಶುದ್ಧ ಜಲ, ಮೂಲಸೌಕರ್ಯ, ಆರೋಗ್ಯ ಸೇವೆ, ಮೆಡಿಸಿನ್‌, ತ್ಯಾಜ್ಯವಸ್ತುಗಳ ನಿರ್ವಹಣೆ, ಪರಿಸರ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಎದುರಾಗುವ ಸವಾಲುಗಳಿಗೆ ವಿನೂತನ ನ್ಯಾನೋ ಟೆಕ್ನಾಲಜಿ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದೇಶದಲ್ಲೇ ಪ್ರತಿಷ್ಠಿತವಾಗಿರುವ ಬೆಂಗಳೂರು ಇಂಡಿಯಾ ನ್ಯಾನೋ ಸಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚುತ್ತಿರುವ ನಗರೀಕರಣ, ಜನಸಂಖ್ಯೆ ಹೆಚ್ಚಳ ಹಾಗೂ ಬದಲಾಗುತ್ತಿರುವ ಜೀವನ ಶೈಲಿಯಿಂದ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿದೆ. ಇವುಗಳಿಗೆ ನ್ಯಾನೋ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಸಂಶೋಧಿಸಲು ವಿಜ್ಞಾನಿಗಳಿಗೆ ಮತ್ತು ಇಂಜಿನಿಯರ್‌ಗಳು ಮುಂದಾಗಬೇಕು ಎಂದು ಹೇಳಿದರು.

ಹೊಸ ತಾಂತ್ರಿಕ ಕ್ಷೇತ್ರದ ಸಾಧ್ಯತೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಅಂತಾರಾಷ್ಟ್ರೀಯ ಸಂಶೋಧನಾ ಸಹಭಾಗಿತ್ವ ಅತ್ಯಗತ್ಯವಾಗಿದೆ. ಇದಕ್ಕಾಗಿ ಮಾಹಿತಿಗಳ ಹಾಗೂ ತಾಂತ್ರಿಕತೆಗಳ ಪರಸ್ಪರ ವಿನಿಮಯ, ಈ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳ ಮತ್ತು ಅವುಗಳ ಪರಿಹಾರ ಸಾಧ್ಯತೆಗಳ ವಿಚಾರ ವಿನಿಮಯ ಮತ್ತು ಅಂತಿಮವಾಗಿ ಸಮಾಜದ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಪ್ರತಿಭೆಗಳನ್ನು ಬೆಳೆಸುವ ಅಗತ್ಯವಿದೆ.

ಇಂತಹ ಅಂತಾರಾಷ್ಟ್ರೀಯ ಸಮಾವೇಶಗಳು ಪರಸ್ಪರ ಸಂಪರ್ಕ ಸಾಧಿಸಲು, ಜ್ಞಾನವನ್ನು ಹಂಚಿಕೊಳ್ಳಲು, ತಾಂತ್ರಿಕತೆಗಳ ವಿನಿಮಯಕ್ಕೆ, ಕೌಶಲ್ಯ ಅಭಿವೃದ್ಧಿಗೆ ಹಾಗೂ ಉದ್ಯಮ ಸಹಭಾಗಿತ್ವಕ್ಕೆ ಸಾಕಷ್ಟು ಅವಕಾಶವನ್ನು ಕಲ್ಪಿಸಲಿದೆ ಎಂದು ಅಭಿಪ್ರಾಯಪಟ್ಟರು.

ಯುವ ಉದ್ಯಮಿಗಳು ಈ ಕ್ಷೇತ್ರದ ತಜ್ಞರ ಮತ್ತು ದಿಗ್ಗಜರ ಸಹಕಾರ ಮತ್ತು ಸಹಭಾಗಿತ್ವದ ಸದುಪಯೋಗ ಪಡೆದುಕೊಂಡು ರಾಜ್ಯದಲ್ಲಿ ಹೊಸ ಉದ್ಯಮಗಳನ್ನು ಆರಂಭಿಸಲು ಮುಕ್ತ ಆಹ್ವಾನ ನೀಡುವುದಾಗಿ ಹೇಳಿದರು.ಕರ್ನಾಟಕದಲ್ಲಿ ಈ ವಿನೂತನ ಉದ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಿರುವ ಸಂಪೂರ್ಣ ಸಹಕಾರವನ್ನು ನಮ್ಮ ಸರ್ಕಾರ ಒದಗಿಸಲಿದೆ ಎಂದು ಭರವಸೆ ನೀಡಿದರು.

ಕರ್ನಾಟಕ ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಗಳಿಗೆ ಮಾತ್ರವಲ್ಲದೆ ಶೈಕ್ಷಣಿಕ ಮತ್ತು ಸಂಶೋಧನೆ ಚಟುವಟಿಕೆಗಳಿಗೆ ಭದ್ರ ತಳಹದಿಯನ್ನು ಕಲ್ಪಿಸುವ ಕಾರ್ಯದಲ್ಲಿ ಹೆಸರುವಾಸಿಯಾಗಿದೆ. ತಾಂತ್ರಿಕತೆ ಆಧಾರಿತ ಅನ್ವೇಷಣೆ ಕ್ಷೇತ್ರದಲ್ಲಿ ನಮ ರಾಜ್ಯ ಮುಂಚೂಣಿಯಲ್ಲಿದೆ. ಐಐಎಸ್ಸಿ, ಜೆಎನ್‌ಸಿಎಎಸ್‌‍ಆರ್‌, ಎನ್‌ಸಿಬಿಎಸ್‌‍, ಸಿಇಎನ್‌ಎಸ್‌‍ ನಂತಹ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ನೆರವಿನೊಂದಿಗೆ, ಬೆಂಗಳೂರು ರಾಷ್ಟ್ರದ ನ್ಯಾನೋ ಟೆಕ್‌ ಹಬ್‌ ಆಗಿ ರೂಪುಗೊಳ್ಳುವ ಪೂರ್ಣ ವಿಶ್ವಾಸ ತಮಗಿದೆ. ಮುಂಬರುವ ವರ್ಷಗಳಲ್ಲಿ ಬೆಂಗಳೂರು ಆಧುನಿಕ ತಾಂತ್ರಿಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಲಿದೆ ಎಂದು ವಿಶ್ವಾಸವ್ಯಕ್ತ ಪಡಿಸಿದರು.

ದೇಶ, ವಿದೇಶಗಳ ಖ್ಯಾತ ವಿಜ್ಞಾನಿಗಳು, ತಂತ್ರಜ್ಞಾನಿಗಳು, ತಾಂತ್ರಿಕ ಚಿಂತಕರು, ಉದ್ಯಮಗಳ ಖ್ಯಾತನಾಮರು ಈ ಪ್ರತಿಷ್ಠಿತ ನ್ಯಾನೋ ತಂತ್ರಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ್ದರು. ಬೆಂಗಳೂರು ಇಂಡಿಯಾ ನ್ಯಾನೋ ಸೈನ್ಸ್ ಪ್ರಶಸ್ತಿಗೆ ಭಾಜನರಾಗಿರುವ ಪ್ರೊ.ಅರಿಂದಮ್‌ ಘೋಷ್‌ ಅವರನ್ನು ಅಭಿನಂದಿಸಿದರು.

ನ್ಯಾನೋ ಸಮಾವೇಶವನ್ನು 2007ರಿಂದ ನಿರಂತರವಾಗಿ ಆಯೋಜಿಸಿಕೊಂಡು ಬರಲು ಮಾರ್ಗದರ್ಶನ ನೀಡುತ್ತಿರುವ ಭಾರತ ರತ್ನ ಪ್ರೊ.ಸಿ.ಎನ್‌.ಆರ್‌. ರಾವ್‌ ಅವರನ್ನು ಅಭಿನಂದಿಸುವುದಾಗಿ ಹೇಳಿದ ಮುಖ್ಯಮಂತ್ರಿಯವರು, 13 ನೇ ಬೆಂಗಳೂರು ಇಂಡಿಯಾ ನ್ಯಾನೋ ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದರು.

ಭಾರತರತ್ನ ಪ್ರೊ.ಸಿ.ಎನ್‌.ಆರ್‌. ರಾವ್‌, ಸಚಿವರಾದ ಪ್ರಿಯಾಂಕ್‌ ಖರ್ಗೆ, ಎನ್‌.ಎಸ್‌‍.ಬೋಸರಾಜ್‌, ಶಾಸಕರಾದ ರಿಜ್ವಾನ್‌ ಅರ್ಹದ್, ಅಜಯ್‌ಸಿಂಗ್‌, ಕಿರಣ್‌ ಮಜೂಂದಾರ್‌ ಶಾ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತಿತರಿದ್ದರು.

RELATED ARTICLES

Latest News