Friday, September 20, 2024
Homeರಾಜಕೀಯ | Politicsಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರಿನಿಂದ ಮೈಸೂರುವರೆಗೆ ಬಿಜೆಪಿ-ಜೆಡಿಎಸ್‌‍ ಪಾದಯಾತ್ರೆ ಆರಂಭ

ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರಿನಿಂದ ಮೈಸೂರುವರೆಗೆ ಬಿಜೆಪಿ-ಜೆಡಿಎಸ್‌‍ ಪಾದಯಾತ್ರೆ ಆರಂಭ

ಬೆಂಗಳೂರು,ಆ.3– ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಇಂದು ಅದೇ ಅಸ್ತ್ರವನ್ನು ಬಳಸಿ ರಾಜಧಾನಿ ಬೆಂಗಳೂರಿನಿಂದ ಮೈಸೂರುವರೆಗೆ ಬಿಜೆಪಿ-ಜೆಡಿಎಸ್‌‍ ದೋಸ್ತಿ ಪಕ್ಷಗಳ ಜಂಟಿ ಪಾದಯಾತ್ರೆಗೆ ಚಾಲನೆ ಸಿಕ್ಕಿದೆ.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(ಮುಡಾ)ದಲ್ಲಿ ಕಾನೂನು ಬಾಹಿರ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಒಂದು ವಾರ ಕಾಲ ನಡೆಯಲಿರುವ ಪಾದಯಾತ್ರೆಗೆ ಕಾರ್ಯಕರ್ತರ ಹರ್ಷೋದ್ಘಾರ, ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳ ನಡುವೆಯೇ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ಡಾ. ರಾಧಾ ಮೋಹನ್‌ದಾಸ್‌‍ ಅಗರ್ವಾಲ್‌, ಕೇಂದ್ರ ಸಚಿವರಾದ ಶೊಭಾ ಕರಂದ್ಲಾಜೆ, ವಿ.ಸೋಮಣ್ಣ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆಯ ಜೆಡಿಎಸ್‌‍ ನಾಯಕ ಸಿ.ಬಿ. ಸುರೇಶ್‌ ಬಾಬು, ಮಾಜಿ ಸಚಿವ ಜಿ.ಟಿ. ದೇವೇಗೌಡ, ಕೇಂದ್ರ ಸಚಿವರು, ಕೋರ್‌ ಕಮಿಟಿ ಸದಸ್ಯರು, ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರು ನಗಾರಿ ಬಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ಕೊಟ್ಟರು. ಪಾದಯಾತ್ರೆಗಾಗಿ ಕಾಂಗ್ರೆಸ್‌‍ ವಿರುದ್ಧ ರಚಿಸಿದ ಗೀತೆಯನ್ನು ಇದೇ ವೇಳೆ ಉಭಯ ಪಕ್ಷಗಳ ನಾಯಕರು ಬಿಡುಗಡೆ ಮಾಡಿದರು. ಕೆಂಗೇರಿಯ ಕೆಂಪಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಮೀಪದ ಜೆ.ಕೆ.ಗ್ರ್ಯಾಂಡ್‌ ಅರೇನ ಸೆಂಟರ್‌ನಲ್ಲಿ ಕಾರ್ಯಕರ್ತರ ಬೃಹತ್‌ ಕಾರ್ಯಕ್ರಮ ಜರುಗಿತು.

ನಂತರ 10 ಗಂಟೆಗೆ ಪಾದಯಾತ್ರೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಬಹುತೇಕ ಎಲ್ಲಾ ಪ್ರಮುಖರು ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

ಅದರಲ್ಲೂ ಮುಡಾ ನಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದವರೇ ಶಾಮೀಲಾಗಿರುವುದರಿಂದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ವಿಶೇಷವಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಅವರನ್ನು ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸಿದ ಮೈತ್ರಿ ಪಕ್ಷಗಳ ನಾಯಕರು ರಾಜ್ಯದಲ್ಲಿ ಸರ್ಕಾರ ಹೆಚ್ಚು ದಿನ ಉಳಿಯುವ ಲಕ್ಷಣಗಳಿಲ್ಲ ಎಂದು ಭವಿಷ್ಯ ನುಡಿದರು.

ಇಂದಿನಿಂದ ಆರಂಭವಾಗಿರುವ ಪಾದಯಾತ್ರೆ ಆ.10(ಶನಿವಾರ)ರವರೆಗೆ ಮೈಸೂರಿನಲ್ಲಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಳ್ಳಲಿದೆ. ಒಟ್ಟು 140 ಕಿ.ಮೀ ಪಾದಯಾತ್ರೆ ಜರುಗಲಿದ್ದು, ಪ್ರತಿದಿನ 15ರಿಂದ 20 ಕಿ.ಮೀ ವರೆಗೂ ಶ್ರಮಿಸಲಿವೆ.

ಬಿಜೆಪಿ ರಾಜ್ಯ ಪದಾಧಿಕಾರಿಗಳು ಆಂತರಿಕ ಸಭೆ ನಡೆಸಿದ್ದು, ಮತ್ತೊಂದು ತಂಡ ಪಾದಯಾತ್ರೆ ಮಾರ್ಗಪಥದ ಸಮೀಕ್ಷೆ, ವಸತಿ, ಉಟೋಪಚಾರ ಸ್ಥಳ, ಜೊತೆಗೆ ಬಹಿರಂಗ ಸಭೆಗಳಿಗೆ ಅಗತ್ಯ ಮೈದಾನ ಗುರುತಿಸಿ ಅಂತಿಮಗೊಳಸಲಾಗಿದೆ.

ನಿರ್ವಹಣೆಗೆ ವಿವಿಧ ಮೋರ್ಚಾಗಳ ಜೊತೆಗೆ ತಂಡಗಳು ರಚನೆಯಾಗಿವೆ. ಮೊದಲ ದಿನದ ಪಾದಯಾತ್ರೆಯನ್ನು ಯುವ ಮೋರ್ಚಾ ನಿರ್ವಹಿಸಿದವು. ಕೆಂಗೇರಿಯಲ್ಲಿ ಉದ್ಘಾಟನೆ, ಮೈಸೂರಿನ ಸಮಾರೋಪ ಕಾರ್ಯಕ್ರಮ ಹೊರತುಪಡಿಸಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಬಹಿರಂಗ ಸಭೆಗಳು ನಡೆಯಲಿವೆ. ಬೆಳಗ್ಗೆ 10 ಕಿ.ಮೀ. ಮಧ್ಯಾಹ್ನ ಊಟದ ನಂತರ 10 ಕೀ.ಮೀನಂತೆ ಪ್ರತಿದಿನ 20 ಕಿ.ಮೀ. ಕ್ರಮಿಸಲು ಯೋಜಿಸಲಾಗಿದೆ.

ವಿಧಾನಸಭೆ ಕ್ಷೇತ್ರವಾರು 200 ಜನರು ಸೇರಿ ಪ್ರತಿದಿನ ಐದಾರು ಸಾವಿರ ಜನರು ಭಾಗಹಿಸಲಿದ್ದಾರೆ. ವಿಧಾನಸಭೆ, ವಿಧಾನ ಪರಿಷತ್‌ ಸದಸ್ಯರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳ ಮುಖಂಡರು, ಪದಾಧಿಕಾರಿಗಳು ಏಳು ದಿನವೂ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಯ ಯಶಸ್ಸಿಗೆ 20ರಿಂದ 22 ವಿಭಾಗಗಳನ್ನು ರಚಿಸಲಾಗಿದೆ. ಆಗಸ್ಟ್‌ 10ರಂದು ಬೆಳಗ್ಗೆ 10.30ಕ್ಕೆ ಮೈಸೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಬಿಗಿ ಭದ್ರತೆ: ಕೆಂಗೇರಿಯ ನೈಸ್‌‍ ರಸ್ತೆ ಸಮೀಪದ ಕೆಂಪಮದೇವಿ ದೇವಸ್ಥಾನ ಬಳಿ ಪಾದಯಾತ್ರೆಗೆ ಚಾಲನೆ ದೊರೆಯಲಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಏರ್ಪಡುವ ಸಾಧ್ಯತೆಯಿದೆ. ಮೈಸೂರು ರಸ್ತೆ ಮಾರ್ಗದಲ್ಲಿ ಬೆಳಗ್ಗೆ ತೆರಳುವವರು ಹಾಗೂ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ ಸಂಚಾರ ದಟ್ಟಣೆಯ ಬಿಸಿ ತಟ್ಟಲಿದೆ.

ಪಾದಯಾತ್ರೆ ಆರಂಭವಾಗುವ ಸ್ಥಳದ ಬಳಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಸಂಚಾರ ಪೊಲೀಸ್‌‍ ವಿಭಾಗದ ಮೂವರು ಇನ್‌ಸ್ಪೆಕ್ಟರ್‌ ಹಾಗೂ 50 ಸಿಬ್ಬಂದಿ ನಿಯೋಜಿಸಲಾಗಿದೆ. ಉಳಿದಂತೆ ಸ್ಥಳದಲ್ಲಿ ಕೆಎಸ್‌‍ಆರ್‌ಪಿ ತುಕಡಿ ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಇದಕ್ಕೂ ಮುನ್ನ ಬೆಳಗ್ಗೆ ಮೈಸೂರಿಗೆ ತೆರಳಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಯಶಸ್ವಿಯಾಗಲಿದೆ ಎಂದು ಪ್ರಾರ್ಥಿಸಿದರು.

RELATED ARTICLES

Latest News