ಬೆಂಗಳೂರು,ಆ.3- ಮುಡಾ ಅಕ್ರಮ ನಿವೇಶನ ಹಂಚಿಕೆ ಸಂಬಂಧ ಆರೋಪಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ-ಜೆಡಿಎಸ್ ಹಮಿಕೊಂಡಿರುವ ಜಂಟಿ ಪಾದಯಾತ್ರೆ ಮುಗಿಯುವುದರೊಳಗೆ ತಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಿ ಜೆ.ಕೆ.ಗ್ರ್ಯಾಂಡ್ ಅರೇನ ಸೆಂಟರ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಹಗರಣದಲ್ಲಿ ಸಿದ್ದರಾಮಯ್ಯನವರ ಕುಟುಂಬವೇ ಆರೋಪಿ ಸ್ಥಾನದಲ್ಲಿರುವುದರಿಂದ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಎಚ್ಚರಿಸಿದರು.
ನನಗಿರುವ ಮಾಹಿತಿ ಪ್ರಕಾರ ನಮ ಪಾದಯಾತ್ರೆ ಮುಗಿಯುವುದರೊಳಗೆ ಸಿಎಂ ರಾಜೀನಾಮೆ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ. ಬಹುತೇಕ ಅವರು ಮಾನಸಿಕವಾಗಿಯೂ ಅಧಿಕಾರದಿಂದ ನಿರ್ಗಮಿಸಲು ಸಿದ್ಧರಾಗಿದ್ದಾರೆ. ಕುಟುಂಬದವರೇ ಶಾಮೀಲಾಗಿರುವುದರಿಂದ ಬೇರೆ ದಾರಿ ಇಲ್ಲ ಎಂದು ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ನಡೆಸುತ್ತಿದ್ದೇವೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಎಲ್ಲರೂ ಹೊಂದಿಕೊಂಡು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಂಟಿ ಹೋರಾಟ ಮಾಡುತ್ತೇವೆ. ನಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಐತಿಹಾಸಿಕ ಪಾದಯಾತ್ರೆ ಹಮಿಕೊಂಡಿದ್ದೇವೆ. ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸುತ್ತೇವೆ. ಪ್ರತಿಯೊಂದು ಕಡೆ 8 ರಿಂದ 10 ಸಾವಿರ ಜನ ಸೇರುತ್ತಾರೆಂಬ ವಿಶ್ವಾಸ ಇದೆ. ಸಿದ್ದರಾಮಯ್ಯ ಅವರಿಗೆ ಇದು ಕೊನೆ ಅವಕಾಶ. ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜೀನಾಮೆ ಅವರಾಗಿಯೇ ಕೊಟ್ಟರೆ ಅವರಿಗೆ ಅದು ಶೋಭೆ ತರುತ್ತದೆ, ಪಕ್ಷಕ್ಕೆ ಗೌರವ ಸಿಗುತ್ತದೆ. ಇಲ್ಲದಿದ್ದರೆ ಅನಿವಾರ್ಯವಾಗಿ ರಾಜ್ಯಪಾಲರೇ ಕ್ರಮ ತೆಗೆದುಕೊಳ್ಳಬಹುದು. ಇದಕ್ಕೆ ಅವಕಾಶ ಕೊಡದೇ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಸಲಹೆ ಕೊಡುತ್ತೇನೆ ಎಂದರು. ಜನರಿಗೆ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ವಾಸ್ತವ ಸ್ಥಿತಿ ತಿಳಿದಿದೆ. ಹೀಗಾಗಿ ಅವರು ಯಾವುದೇ ಆರೋಪಗಳಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ರಾಜ್ಯಪಾಲರ ಕಚೇರಿ ದುರ್ಬಳಕೆಯಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಈ ರೀತಿಯ ಆರೋಪ ಮಾಡಿ ತಮ ಮೇಲಿನ ಆರೋಪಗಳಿಂದ ಅವರು ಮುಕ್ತರಾಗಲು ಸಾಧ್ಯವೇ ಇಲ್ಲ ಎಂದರು.