ಮೈಸೂರು, ಜ.7- ಮುಖ್ಯಮಂತ್ರಿಯಾಗಿ ಅಧಿಕಾರಾವಧಿ ಪೂರ್ಣಗೊಳಿಸುವು ದಾಗಿ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಅದರ ಮೇಲೂ ಅನುಮಾನ ಪಡುವ ಅಗತ್ಯ ಇಲ್ಲ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಅವಕಾಶ ನೀಡುವುದು ಪ್ರಮುಖ ಆಶ್ರಯವಾಗಿದೆ ಎಂದರು.ಅಧಿಕಾರವಧಿ ಪೂರ್ಣಗೊಳಿಸುವುದು, ಬಜೆಟ್ ಮಂಡನೆ ಸೇರಿದಂತೆ ಎಲ್ಲ ವಿಚಾರವಾಗಿಯೂ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಅದರ ಮೇಲೆ ನಾವು ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.
ಸಿದ್ದರಾಮಯ್ಯ ಅವರು ಗಟ್ಟಿಯಾಗಿದ್ದರೆ ಮಾತ್ರ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಲು ಸಾಧ್ಯ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿರುವುದಕ್ಕೆ ತಾವು ಪ್ರತಿಕ್ರಿಯೆ ನೀಡಿರುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ ನಮಲ್ಲಿ ಜಾತಿ ಆಧಾರಿತವಾದ ರಾಜಕಾರಣಕ್ಕೆ ಆಧ್ಯತೆ ಇಲ್ಲ. ಸಮುದಾಯದ ಆಶಯಕ್ಕೆ ಅನುಗುಣವಾಗಿ ಸಮಾನ ಅವಕಾಶಗಳನ್ನು ಕಲ್ಪಿಸಲಾಗುತ್ತದೆ ಎಂದರು.
ನಾಯಕತ್ವ ಹಾಗೂ ಪ್ರಗತಿ ನಿಂತ ನೀರಲ್ಲ. ಹಿಂದೆ ದೇವರಾಜ್ ಅರಸ್ ಅವರು ಮುಖ್ಯಮಂತ್ರಿಯಾಗಿದ್ದರು. ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ ನಲ್ಲಿ ಜವಾಹರ್ಲಾಲ್ ನೆಹರು, ಮಹಾತಗಾಂಧಿಜೀಯವರು ಪ್ರಭಾವಿ ನಾಯಕರಾಗಿದ್ದರು. ಈಗ ಅದೇ ತತ್ವ ಸಿದ್ಧಾಂತದ ಮೇಲೆ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ತಾಪುರದಲ್ಲಿ ನಾನೇ ಸಾಯುವವರೆಗೂ ಶಾಸಕನಾಗಿ ಇರಲು ಸಾಧ್ಯವೇ ? ಮುಂದಿನ ನಾಯಕತ್ವ ಬೆಳೆಸುವ ಜವಾಬ್ದಾರಿಯು ನಮ ಮೇಲಿದೆ ಎಂದರು.
ನಮಿಂದಲೇ ಪಕ್ಷ ಎಂದು ಯಾರಾದರೂ ಭಾವಿಸಿಕೊಂಡಿದ್ದರೆ ಅದು ಭ್ರಮೆ ಮಾತ್ರ.ಕಾಂಗ್ರೆಸ್ ಪಕ್ಷ ಯಾವುದೇ ವ್ಯಕ್ತಿಯ ಆಧಾರಿತವಾಗಿ ನಿಂತಿಲ್ಲ. ವ್ಯಕ್ತಿಗಾಗಿ ಅಥವಾ ವ್ಯಕ್ತಿಯಿಂದ ಕಾಂಗ್ರೆಸ್ ಇಲ್ಲ. ಕಾರ್ಯಕರ್ತರಿಗಾಗಿ ಕಾಂಗ್ರೆಸ್ ಪಕ್ಷವಿದೆ ಎಂದರು.
ಕೆಲವರು ಕಾಂಗ್ರೆಸ್ ವಿರುದ್ಧವಾಗಿ ಪದೇಪದೇ ಹೇಳಿಕೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಬಿ-ಫಾರಂ ಬೇಕು. ಚುನಾವಣೆಯಲ್ಲಿ ಪ್ರಚಾರಕ್ಕೆ ಕಾಂಗ್ರೆಸ್ ನಾಯಕತ್ವ ಬೇಕು, ಕಾಂಗ್ರೆಸ್ಸಿನ ತತ್ವ ಸಿದ್ಧಾಂತಗಳು ಬೇಕು. ಗೆದ್ದ ಮೇಲೆ, ಅಧಿಕಾರ ಅನುಭವಿಸುವಾಗ ಕಾಂಗ್ರೆಸ್ ಪಕ್ಷ ಯಾವುದು ಎಂದು ಪ್ರಶ್ನೆ ಮಾಡುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಪಕ್ಷಕ್ಕೆ 140 ವರ್ಷಗಳ ಇತಿಹಾಸ ಇದೆ. ಮುಂದೆ ಕೂಡ ಪಕ್ಷ ಸಂಘಟನೆ ಹಿಗೆಯೇ ಇರುತ್ತದೆ. ಯಾರೋ ಒಬ್ಬರಿಂದ ಪಕ್ಷ ನಿಂತಿಲ್ಲ ಎಂದರು.ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಅಧಿಕಾರ ನೀಡಲು ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಎಲ್ಲರಿಗೂ ಏಕಕಾಲಕ್ಕೆ ಅವಕಾಶ ನೀಡಲು ಕಷ್ಟ ಸಾಧ್ಯ. ಈಗಾಗಲೇ ಶೇ.85ರಷ್ಟು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಲಾಗಿದೆ.
ಬಾಕಿ ಇರುವ ಶೇ.15ರಷ್ಟು ನಿಗಮಗಳಿಗೂ ಶೀಘ್ರವಾಗಿ ನೇಮಕಾತಿ ನಡೆಯಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಹನೆ, ತಾಳೆ ಅಗತ್ಯ. ಪಕ್ಷದಲ್ಲಿನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ. ತಾಳೆ, ಸಹನೆಗೆ ರಾಜಕೀಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತಮ ಉದಾಹರಣೆ. ಯಾರು ಎಷ್ಟೆ ಟೀಕೆ ಮಾಡಲಿ, ಖರ್ಗೆ ಅವರ ಸಹನೆ, ತಾಳೆಯನ್ನು ಅನುಮಾನಿಸಲು ಸಾಧ್ಯವಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಗಾಗಿ ರಾಜಕೀಯ ಮಾಡುತ್ತಿಲ್ಲ ಜನರ ಸೇವೆಗಾಗಿ ಕೆಲಸ ಮಾಡುತ್ತಿದ್ದಾರೆ. ದಾಖಲೆಯ ಪ್ರಮಾಣದಲ್ಲಿ ಬಜೆಟ್ ಮಂಡಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ಪರವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ಜನರಿಗಾಗಿ ದುಡಿಯುತ್ತಿದ್ದಾರೆ. ಸಿದ್ದರಾಮಯ್ಯ ಅವರಿಂದ ರಾಜ್ಯಕ್ಕೆ ಅಪಾರವಾದ ಕೊಡುಗೆ ಸಿಕ್ಕಿದೆ ಎಂದರು.
