Sunday, November 24, 2024
Homeರಾಜಕೀಯ | Politicsಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡ್ತಾರಾ ರಾಜ್ಯಪಾಲರು..?

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡ್ತಾರಾ ರಾಜ್ಯಪಾಲರು..?

ಬೆಂಗಳೂರು,ಆ.5- ಒಂದು ವಾರದಿಂದ ದೆಹಲಿಯಲ್ಲಿದ್ದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಇಂದು ಬೆಂಗಳೂರಿಗೆ ಮರಳಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ನೀಡಲಾದ ಮನವಿಯ ಕುರಿತು ಯಾವುದೇ ಕ್ಷಣದಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ನವದೆಹಲಿಗೆ ಭೇಟಿ ನೀಡಿದ್ದ ರಾಜ್ಯಪಾಲರು ಬಿಜೆಪಿ ಹೈಕಮಾಂಡ್‌ ಮತ್ತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದು, ಕಳೆದ ಜುಲೈ 26ರಂದು ಸಾಮಾಜಿಕ ಹೋರಾಟಗಾರ ಟಿ.ಜೆ ಅಬ್ರಹಾಂ, ರಾಜ್ಯಪಾಲರಿಗೆ ದೂರು ನೀಡಿದ್ದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ದೂರನ್ನ ಗಂಭೀರವಾಗಿ ಪರಿಗಣಿಸಿರುವ ರಾಜ್ಯಪಾಲರು ಇದೀಗ ಕಾನೂನು ತಜ್ಞರ ವರದಿ ಕೇಳಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕದ ಪ್ರಮುಖ ಪ್ರಕರಣಗಳು ಮತ್ತು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ನೀಡಿದ್ದ ತೀರ್ಪಿನ ಉಲ್ಲೇಖಿಸಿ ತಜ್ಞರು ವರದಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮುಡಾ ಅಕ್ರಮ ನಿವೇಶನ ಹಂಚಿಕೆ ಆರೋಪದ ಪ್ರಕರಣದಲ್ಲಿ ಮುಖ್ಯಮಂತ್ರಿ ಅವರಿಗೆ ಜು.26ರಂದು ಶೋಕಾಸ್‌‍ ನೋಟಿಸ್‌‍ ನೀಡಿದ ಬಳಿಕ ರಾಜ್ಯಪಾಲರು ದೆಹಲಿ ಪ್ರವಾಸಕ್ಕೆ ತೆರಳಿದ್ದರು. ಇದರ ನಡುವೆ ನೋಟಿಸ್‌‍ ವಾಪಸ್‌‍ ಪಡೆಯಲು ಸಂಪುಟ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಕಳುಹಿಸಿದೆ. ಮತ್ತೊಂದೆಡೆ ನೋಟಿಸ್‌‍ಗೆ ಮುಖ್ಯಮಂತ್ರಿ ಅವರು ಉತ್ತರವನ್ನೂ ಕೊಟ್ಟಿದ್ದಾರೆ.

ರಾಜ್ಯ ಸರ್ಕಾರ ಕಳುಹಿಸಿರುವ ಮಂತ್ರಿಪರಿಷತ್‌ನ ನಿರ್ಧಾರವನ್ನು ರಾಜ್ಯಪಾಲರು ಪರಿಶೀಲನೆ ಮಾಡಲಿದ್ದಾರೆ. ಸಿಎಂಗೆ ಕಳಿಸಿರುವ ನೋಟೀಸ್‌‍ ಅನ್ನು ವಾಪಸ್‌‍ ಪಡೆಯುವಂತೆ ರಾಜ್ಯಪಾಲರಿಗೆ ಸಂಪುಟ ಮನವಿ ಮಾಡಿದೆ.ಇದು ಪ್ರಾಸಿಕ್ಯೂಷನ್‌ಗೆ ಅರ್ಹ ಪ್ರಕರಣವೇ ಅಲ್ಲವೇ ಎಂದು ತೀರ್ಮಾನ ತೆಗೆದುಕೊಳ್ಳುವ ಹಾಗೂ ಕಾನೂನು ಸಲಹೆ ಬೇಕಿದ್ದರೆ ಮತ್ತೊಮೆ ವಕೀಲರ ಜತೆ ರಾಜ್ಯಪಾಲರು ಚರ್ಚೆ ನಡೆಸುವ ಸಂಭವ ಇದೆ ಎಂದು ಗೊತ್ತಾಗಿದೆ.

ಒಂದು ವೇಳೆ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ಕೊಟ್ಟರೆ ಕಾನೂನು ಕಂಟಕ ಎದುರಾಗಲಿದೆ. ಪ್ರಾಸಿಕ್ಯೂಶನ್‌ಗೆ ಅನುಮತಿ ಸಿಕ್ಕ ಬೆನ್ನಲ್ಲೇ ಅಬ್ರಾಹಂ ಖಾಸಗಿ ದೂರು ದಾಖಲಿಸಲಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯ ಇಲ್ಲವೇ ಲೋಕಾಯುಕ್ತದಲ್ಲಿ ಖಾಸಗಿ ದೂರು ದಾಖಲಿಸಬಹುದು. ಬಳಿಕ ಪ್ರಕರಣ ಸ್ವೀಕರಿಸುವ ಇಲ್ಲವೇ ತಿರಸ್ಕರಿಸುವ ಬಗ್ಗೆ ನ್ಯಾಯಾಲಯದಲ್ಲಿ ವಾದ ಹಾಗೂ ಪ್ರತಿವಾದ ನಡೆಯಲಿದೆ.

ಸಿಎಂ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರು ಅನುಮತಿ ನೀಡಿದ್ದೇ ಆದರೆ, ಅದಕ್ಕೆ ಸಾಂವಿಧಾನಿಕ ಮತ್ತು ರಾಜಕೀಯ ಪರಿಣಾಮಗಳು ಎದುರಾಗಬಹುದು ಎಂಬುದು ತಜ್ಞರ ಅಭಿಪ್ರಾಯಪಟ್ಟಿದ್ದಾರೆ.ಈ ನಡುವೆ ಬಿಜೆಪಿ ಹೈಕಮಾಂಡ್‌ ಆತುರದ ನಿರ್ಧಾರ ಕೈಗೊಳ್ಳದಂತೆ ರಾಜ್ಯ ಬಿಜೆಪಿ ನಾಯಕರಿಗೆ ರಾಜ್ಯಪಾಲರ ಮೂಲಕ ಸಲಹೆಯನ್ನೂ ರವಾನಿಸಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಕಾನೂನು ಹೇಳುವುದು ಏನು? :
ಇನ್ನು ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ತಮ ಪರ ನಿರ್ಣಯ ಅಂಗೀಕರಿಸಿಕೊಂಡರೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದೆಯೋ ಅಥವಾ ಇಲ್ಲವೋ ಎಂಬ ಗೊಂದಲಗಳು ಎದುರಾಗಿವೆ.

ಸಂಪುಟದಲ್ಲಿ ನಿರ್ಣಯ ಅಂಗೀಕಾರವಾದರೂ ಸಹ ಆರ್ಟಿಕಲ್‌ 163ರಲ್ಲಿ ಉಲ್ಲೇಖವಾಗಿರುವಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಅಧಿಕಾರಿ ಹೊಂದಿದ್ದಾರೆ ಎಂದು ಕಾನೂನು ತಜ್ಷರು ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಗ್ಗೆ ರಾಜ್ಯಪಾಲರು ನೇರವಾಗಿ ತೀರ್ಮಾನ ತೆಗೆದುಕೊಳ್ಳಬಹುದು. ಆರ್ಟಿಕಲ್‌ 163ರಲ್ಲಿ ಈ ಬಗ್ಗೆ ಉಲ್ಲೇಖ ಆಗಿದೆ. ಸಂಪುಟದ ಅಭಿಪ್ರಾಯ ಕೊಟ್ಟರೆ ಅನುಮೋದನೆ ಮಾಡಲೇಬೇಕು ಎಂಬ ನಿಯಮವಿಲ್ಲ. ಅವರು ಕೌನ್ಸಿಲ್‌ ಮಿನಿಸ್ಟರ್‌ ತೀರ್ಮಾನದ ವಿರುದ್ಧವಾಗಿ ಅನುಮತಿ ನೀಡಬಹುದು ಎಂಬುದು ಕಾನೂನು ತಜ್ಞರ ವಾದವಾಗಿದೆ.

ಸಚಿವ ಸಂಪುಟ ತೀರ್ಮಾನವನ್ನು ಲೆಕ್ಕಿಸದೆ, ಪ್ರಾಸಿಕ್ಯೂಷನ್‌ ಗೆ ಕೊಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಅಕ್ರಮ ನಡೆದಿದೆ ಎಂಬುದು ಮನವರಿಕೆ ಆಗಿದ್ದರೆ ಕಾನೂನಿನ ಪ್ರಕಾರ ಸಂಪುಟದ ಅಭಿಪ್ರಾಯ ತೆಗೆದುಕೊಳ್ಳಬಹುದು. ಇಲ್ಲ ಸ್ವತಂತ್ರವಾಗಿ ಕೂಡ ತೀರ್ಮಾನ ಮಾಡಬಹುದು ಎಂದು ಕಾನೂನು ಹೇಳುತ್ತದೆ.

2004ರಲ್ಲಿ ಮಧ್ಯಪ್ರದೇಶದ ಇಬ್ಬರು ಸಚಿವರು ಮೇಲೆ ಭೂಕಬಳಿಕೆ ಸಂಬಂದ ದೂರು ದಾಖಲಾಗಿತ್ತು. ಇವರ ವಿರುದ್ಧ ದೂರು ದಾಖಲಿಸದಂತೆ ಸಚಿವ ಸಂಪುಟದಲ್ಲಿ ಒಂದು ಸಾಲಿನ ನಿರ್ಣಯವನ್ನೂ ಸಹ ಮಾಡಲಾಗಿತ್ತು. ಆದರೆ ಅಂದಿನ ರಾಜ್ಯಪಾಲರು ಸಂಪುಟದ ತೀರ್ಮಾನವನ್ನು ಒಪ್ಪದೆ ತಾವಾಗಿಯೇ ಅನುಮತಿ ನೀಡಿದ್ದನ್ನು ಸುಪ್ರೆಂಕೋರ್ಟ್‌ ಒಪ್ಪಿತ್ತು. ಆದರೆ ನೇರವಾಗಿ ಕೇಂದ್ರದ ತನಿಖಾ ಸಂಸ್ಥೆಗೆ ನೀಡುವ ಹಾಗಿಲ್ಲ ಎಂಬುದನ್ನು ಸಹ ಉಲ್ಲೇಖ ಮಾಡಿತ್ತು.

ಸಿಎಂ ವಿರುದ್ಧ ವಿಚಾರಣಾ ಅನುಮತಿಯನ್ನು ರಾಜ್ಯಪಾಲರು ಕೊಟ್ಟರೆ ರಾಜಭವನದೊಂದಿಗೆ ಸಂಘರ್ಷಕ್ಕೆ ಇಳಿದರೂ ಆಶ್ಚರ್ಯವಿಲ್ಲ.
ದೂರುದಾರರಾಗಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಹೇಳುವಂತೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡದೆ ಬೇರೆ ದಾರಿಯಿಲ್ಲ ಎಂದಿದ್ದಾರೆ.

RELATED ARTICLES

Latest News