ಬೆಂಗಳೂರು,ಆ.5– ಜೆಡಿಎಸ್- ಬಿಜೆಪಿ ಪಕ್ಷಗಳು ತಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಪಾದಯಾತ್ರೆ ನಡೆಸಿ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆರೆ ಹಾವಳಿಯನ್ನು ವೀಕ್ಷಿಸಿ ಮಾತನಾಡಿದ ಅವರು, ಇವರ ವೈಲ್ಯ ಮುಚ್ಚಿಹಾಕಲು ಜನರ ಗಮನ ಬೇರೆಡೆ ಸೆಳೆಯುವ ಯತ್ನ ಮಾಡುತ್ತಿದ್ದಾರೆ.
ಕುಮಾರಸ್ವಾಮಿಯವರು ನಮ ಭದ್ರಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಯೋಜನೆಗೆ ಕೇಂದ್ರದಿಂದ ಅನುಮತಿ ಕೊಡಿಸಲಿ ಸಾಕು ನಾನು ಅವರ ಕೈಮುಗಿಯುತ್ತೇನೆ ಎಂದರು.
ಬಿಜೆಪಿ-ಜೆಡಿಎಸ್ ಒಟ್ಟಾಗಿ ಆಪರೇಷನ್ ಮಾಡಿ ಜನರಿಂದ ಆಯ್ಕೆಯಾದ ಸರ್ಕಾರವನ್ನು ಬೀಳಿಸೋ ಪುರುಷಾರ್ಥಕ್ಕೆ ಜನ ಇವರನ್ನು ಆಯ್ಕೆ ಮಾಡಿ ಕಳಿಸಿರೋದು, ಸರ್ಕಾರ ಬೀಳಿಸೋದನ್ನೇ ಇವರು ರಾಜ್ಯದ ಅಭಿವೃದ್ಧಿ ಎಂದು ತಿಳಿದಿರುವ ಹಾಗಿದೆ ಎಂದು ಹೇಳಿದರು.
ಸರ್ಕಾರ ಬೀಳಿಸೋದು ಇರಲಿ, ಕೇಂದ್ರದಿಂದ ಯಾವೆಲ್ಲಾ ಯೋಜನೆಯನ್ನ ಇವರು ರಾಜ್ಯಕ್ಕೆ ತಂದಿದ್ದಾರೆ? ಇವರಿಂದ ರಾಜ್ಯಕ್ಕೆ ಕೊಡುಗೆ ಏನು? ಮೊದಲು ತಿಳಿಸಲಿ, ಆಪರೇಷನ್ ಕಮಲ ಮಾಡುವುದೇ ದೊಡ್ಡ ಕೊಡುಗೆಯಾ? ಎಂದು ಪ್ರಶ್ನಿಸಿದರು.