Monday, November 25, 2024
Homeರಾಜ್ಯಸೋಲಾರ್‌ ಪ್ಯಾನೆಲ್‌ ವಿಲೇವಾರಿಗೆ ವೈಜ್ಞಾನಿಕ ನೀತಿ ರೂಪಿಸಲು ದೇವೇಗೌಡರ ಸಲಹೆ

ಸೋಲಾರ್‌ ಪ್ಯಾನೆಲ್‌ ವಿಲೇವಾರಿಗೆ ವೈಜ್ಞಾನಿಕ ನೀತಿ ರೂಪಿಸಲು ದೇವೇಗೌಡರ ಸಲಹೆ

ನವದೆಹಲಿ, ಆ.6- ಸೋಲಾರ್‌ ಪ್ಯಾನೆಲ್‌ಗಳ ವಿಲೇವಾರಿಗೆ ವೈಜ್ಞಾನಿಕ ನೀತಿ ರೂಪಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ಸಲಹೆ ಮಾಡಿದ್ದಾರೆ. ರಾಜ್ಯಸಭೆಯಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೋಲಾರ್‌ ಪ್ಯಾನೆಲ್‌ಗಳ ವಿಲೇವಾರಿಯಲ್ಲಿ ನಾವು ಅತ್ಯಂತ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಸೋಲಾರ್‌ ಪ್ಯಾನೆಲ್‌ಗಳನ್ನು 25 ವರ್ಷಗಳ ಬಳಿಕ ವಿಲೇವಾರಿ ಮಾಡಲೇಬೇಕಾಗುತ್ತದೆ. ಅವುಗಳನ್ನು ವಿಲೇವಾರಿ ಮಾಡುವ ಬಗ್ಗೆ ನಮ್ಮ ದೇಶದಲ್ಲಿ ಯಾವುದೇ ರೀತಿಯ ವೈಜ್ಞಾನಿಕ ನೀತಿ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಪರಿಸರ ಸಂರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ನಮ ಮೇಲೆ ಇದೆ. ನವೀಕರಿಸಬಹುದಾದ ಇಂಧನ ಶಕ್ತಿಯಿಂದ ನಮ್ಮ ಪರಿಸರ ಹಾಗೂ ಜೀವ ವೈವಿಧ್ಯದ ಮೇಲೆ ಉಂಟಾಗುವ ದುಷ್ಪರಿಣಾಮದ ಬಗ್ಗೆಯೂ ಅತ್ಯಂತ ಮುನ್ನೆಚ್ಚರಿಕೆ ವಹಿಸಬೇಕು. ಸೋಲಾರ್‌ ಪ್ಯಾನೆಲ್‌ಗಳನ್ನು ಇದೀಗ ಕೃಷಿ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಳವಡಿಸಲಾಗುತ್ತಿದೆ. ಭವಿಷ್ಯದಲ್ಲಿ ಇವುಗಳನ್ನು ಕೃಷಿ ಯೋಗ್ಯ ವಲ್ಲದ ಪ್ರದೇಶಗಳಲ್ಲಿ ಅಳವಡಿಸಲು ಯೋಜನೆಗಳನ್ನು ರೂಪಿಸಬೇಕು ಎನ್ನು ವುದು ನನ್ನ ಕಳಕಳಿಯ ಸಲಹೆಯಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ನವೀಕರಿಸಬಹುದಾದ ಇಂಧನ ಶಕ್ತಿಗಳ ಕ್ಷೇತ್ರವನ್ನು ಕರ್ನಾಟಕವೂ ಸೇರಿ ಹಲವಾರು ರಾಜ್ಯಗಳು ಕಡೆಗಣಿಸುತ್ತಿವೆ. ಹಿಂದೆ ಕರ್ನಾಟಕ ರಾಜ್ಯವು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ನಾಯಕತ್ವ ನೀಡಿತ್ತು. ಈ ಕ್ಷೇತ್ರದಲ್ಲಿ ಗಣನೀಯ ದಾಪು ಗಾಲು ಇರಿಸಿತ್ತು. ಆದರೆ ಕೆಲ ವರ್ಷಗಳಿಂದ ಕರ್ನಾಟಕದಲ್ಲಿ ಈ ಕ್ಷೇತ್ರ ಗಣನೀಯವಾಗಿ ಹಿನ್ನಡೆ ಅನುಭವಿಸಿದೆ ಎಂದು ಅವರು ನುಡಿದಿದ್ದಾರೆ.

ನಮ ದೇಶದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದ ಬೆಳವಣಿಗೆ ಪ್ರಮಾಣ ಶೇ. 14ರಷ್ಟು ಇದ್ದು, ಕರ್ನಾಟಕ ರಾಜ್ಯದಲ್ಲಿ ಆ ಪ್ರಮಾಣ ಶೇ.2.58ರಷ್ಟು ಇದೆ. ಈ ಸಂದರ್ಭದಲ್ಲಿ ಈ ಕ್ಷೇತ್ರದ ಬೆಳವಣಿಗೆಯ ದರ ಕುಂಠಿತವಾಗಿರುವ ಬಗ್ಗೆ ಎಲ್ಲರೂ ಗಂಭೀರ ಚಿಂತನೆ ನಡೆಸಬೇಕು.ಈ ಕ್ಷೇತ್ರದಲ್ಲಿ ಉಂಟಾಗುವ ತ್ಯಾಜ್ಯ ವಸ್ತುಗಳ ಬಗ್ಗೆಯೂ ಗಮನ ಹರಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ಸದ್ಯದ ಸಂದರ್ಭದಲ್ಲಿ ನವೀಕರಿಸಬಹುದಾದ ಇಂಧನ ಶಕ್ತಿಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ನಾವು ಕೇವಲ ಇಷ್ಟನ್ನಷ್ಟೇ ಮಾಡಿದರೆ ಸಾಲದು. ಅವುಗಳ ಅಳವಡಿಕೆ, ಬಳಕೆ, ನಿರ್ವಹಣೆಗೆ ಪರಿಣಾಮಕಾರಿ ವ್ಯವಸ್ಥೆ ಅತ್ಯಗತ್ಯ. ಈ ಬಗ್ಗೆ ಸರ್ಕಾರ ಗಮನ ಕೊಡಬೇಕು ಎಂದು ಅವರು ಹೇಳಿದ್ದಾರೆ.

ನವೀಕರಿಸಬಹುದಾದ ಇಂಧನಕ್ಕೆ ಇನ್ನಷ್ಟು ಒತ್ತು ನೀಡಿ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಪ್ರಮಾಣ ದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ಇದಕ್ಕಾಗಿ ಸಮಗ್ರ ನೀತಿ ರೂಪಿಸಬೇಕು ಎಂದು ಮಾಜಿ ಪ್ರಧಾನಿಗಳು ಸಲಹೆ ಮಾಡಿದ್ದಾರೆ.

ಇಡೀ ಜಗತ್ತಿನಲ್ಲಿಯೇ ಭಾರತವು ಇಂಧನ ಬಳಕೆಯಲ್ಲಿ 3ನೇ ಸ್ಥಾನದಲ್ಲಿದೆ. ನವೀಕರಿಸ ಬಹುದಾದ ಇಂಧನಗಳ ಪಾಲು ಶೇಕಡಾ 20ರಷ್ಟು ಮಾತ್ರ ಎಂದು ಟೆರಿ ವರದಿಯಲ್ಲಿ ಬೊಟ್ಟು ಮಾಡಿ ತೋರಿಸಲಾಗಿದೆ.2050ರ ವೇಳೆಗೆ ಇಂಧನ ಬೇಡಿಕೆ ಪ್ರಮಾಣ ಶೇ.400ರಷ್ಟು ಹೆಚ್ಚಳವಾಗಲಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಈ ಸಲದ ಬಜೆಟ್‌ನಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ವಿಶೇಷ ಒತ್ತಾಸೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News