ಶ್ರೀನಗರ,ಆ.7- ತಾಯಿ ಸ್ವಂತ ಆದಾಯ ಹೊಂದಿದ್ದರೂ ಕೂಡ ಅಪ್ರಾಪ್ತ ಮಕ್ಕಳ ಪಾಲನೆಗೆ ತಂದೆ ಕಾನೂನಾತಕ ಹಾಗೂ ನೈತಿಕ ಬಾಧ್ಯತೆಯನ್ನು ಹೊಂದಿದ್ದಾರೆ ಎಂದು ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿ ಸಂಜಯ್ ಧಾರ್ ಅವರ ಪೀಠ – ಮಕ್ಕಳ ತಾಯಿ ಉದ್ಯೋಗದಲ್ಲಿದ್ದು, ದುಡಿಮೆ ಮಾಡುತ್ತಿದ್ದರೂ ತಂದೆಯನ್ನು ಜವಾಬ್ದಾರಿಯಿಂದ ವಿಮುಕ್ತಿಗೊಳಿಸಲು ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರು ತಮ ಮಕ್ಕಳ ಪಾಲನೆ, ನಿರ್ವಹಣೆ ಮಾಡಲು ಹಣ ನೀಡುವಷ್ಟು ಆದಾಯ ಹೊಂದಿಲ್ಲ ಎಂದು ವಾದಿಸಿದ್ದರು. ಜೊತೆಗೆ ಮಕ್ಕಳ ತಾಯಿ ಉದ್ಯೋಗದಲ್ಲಿದ್ದು, ಕುಟುಂಬ ನಿರ್ವಹಣೆ ಹಾಗೂ ಅಪ್ರಾಪ್ತ ಮಕ್ಕಳ ಪಾಲನೆಗೆ ಸಾಕಷ್ಟು ಆದಾಯ ಹೊಂದಿದ್ದಾರೆ ಎಂದು ವಾದಿಸಿದ್ದರು. ನ್ಯಾಯಾಲಯ ಈ ವಾದವನ್ನು ತಿರಸ್ಕರಿಸಿದೆ.
ಮಕ್ಕಳ ತಂದೆಯಾದ ಮೇಲೆ ಪಾಲನೆಯ ಜವಾಬ್ದಾರಿ ಹಾಗೂ ನೈತಿಕ ಬಾಧ್ಯತೆಯಿದೆ. ತಾಯಿ ಸ್ವಂತ ದುಡಿಮೆ ಹೊಂದಿದ್ದರೂ ಕೂಡ ತಂದೆಯನ್ನು ಬಾಧ್ಯತೆಯಿಂದ ವಿಮುಕ್ತಿಗೊಳಿಸಲು ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಈ ಪ್ರಕರಣದಲ್ಲಿ ಮೂವರು ಮಕ್ಕಳಿದ್ದು, ಮಾಸಿಕ ತಲಾ 4,500 ರೂ.ಗಳ ನಿರ್ವಹಣಾ ವೆಚ್ಚವನ್ನು ಭರಿಸಬೇಕೆಂದು ಹಿಂದೆ ನ್ಯಾಯಾಲಯ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ವಿಚ್ಛೇದಿತ ವ್ಯಕ್ತಿಯೊಬ್ಬ ಹೈಕೋರ್ಟ್ ಮೆಟ್ಟಿಲೇರಿದ್ದರು. ತನ್ನ ಆದಾಯ ತಿಂಗಳಿಗೆ 12 ಸಾವಿರ ರೂ. ಮಕ್ಕಳ ನಿರ್ವಹಣೆಗಾಗಿ ಕೋರ್ಟ್ ತೀರ್ಪಿನ ಪ್ರಕಾರ 13,500 ರೂ. ನೀಡಬೇಕು.
ಜೊತೆಗೆ ತಮನ್ನೇ ಅವಲಂಬಿಸಿರುವ ವಯೋವೃದ್ಧ ತಂದೆ-ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ ಎಂದು ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಂಡಿದ್ದರು.
ಅರ್ಜಿದಾರರು ತಮ ಆದಾಯ 12 ಸಾವಿರ ರೂ. ಮಾತ್ರ ಎಂದು ಸಮರ್ಥಿಸುವಷ್ಟು ಪುರಾವೆಗಳನ್ನು ನ್ಯಾಯಾಲಯಕ್ಕೆ ಒದಗಿಸಿಲ್ಲ. ಮೇಲಾಗಿ ಅರ್ಜಿದಾರರು ಪದವೀಧರ ಎಂಜಿನಿಯರ್ ಆಗಿದ್ದು, ಈ ಮೊದಲು ವಿದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹೀಗಾಗಿ ಅವರ ಆದಾಯ ಕಡಿಮೆ ಇದೆ ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರರು ತಾವು ಮಕ್ಕಳ ನಿರ್ವಹಣೆಗೆ ನೀಡುತ್ತಿರುವ ಮಾಸಿಕ ವೆಚ್ಚವನ್ನು ಮಾಜಿ ಪತ್ನಿ ಆಸ್ತಿ ಖರೀದಿಸಲು ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಪುರಸ್ಕರಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.