ಬೆಂಗಳೂರು,ಆ.7– ಯುವತಿಯರೇ ಎಚ್ಚರ, ತಾವು ಸ್ನೇಹ ಮಾಡುವವರ ಜೊತೆ ತಮ್ಮ ಖಾಸಗಿ ವಿಷಯಗಳನ್ನು ಹಂಚಿಕೊಳ್ಳಬೇಡಿ. ಕೆಲವೊಮ್ಮೆ ನೀವು ಅಂದುಕೊಂಡಂತೆ ಸ್ನೇಹಿತರು ಇರುವುದಿಲ್ಲ. ಅದೇ ಸ್ನೇಹಿತರು ನಿಮಗೆ ಮುಳುವಾಗಬಹುದು ಜಾಗ್ರತೆ.ಇಂತಹದೊಂದು ಘಟನೆ ನಗರದಲ್ಲಿ ನಡೆದಿದ್ದು, ಸ್ನೇಹಿತನ ದುರಾಸೆಗೆ ಮನೆಯಲ್ಲಿದ್ದ ಚಿನ್ನಾಭರಣವನ್ನು ಕೊಟ್ಟು ಯುವತಿ ಮೋಸ ಹೋಗಿದ್ದಾಳೆ.
ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿರುವ ತೇಜಸ್ ಎಂಬ ಯುವಕ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಪರಿಚಯಸ್ಥ ಯುವತಿ ಜೊತೆ ಸ್ನೇಹ ಬೆಳೆಸಿ ಒಳ್ಳೆಯವನಂತೆ ನಟಿಸಿ ವಿಶ್ವಾಸ ಬೆಳೆಸಿಕೊಂಡು ಆಕೆಯ ಖಾಸಗಿ ವಿಷಯಗಳನ್ನೆಲ್ಲ ತಿಳಿದುಕೊಳ್ಳುತ್ತಿದ್ದನು.
ಆ ಯುವತಿ ತಾನು ಪ್ರೀತಿಸುತ್ತಿದ್ದ ಪ್ರಿಯಕರನ ಬಗ್ಗೆ ಸ್ನೇಹಿತ ತೇಜಸ್ ಜೊತೆ ಹಂಚಿಕೊಂಡಿದ್ದಳು. ಆದರೆ ಆ ಸ್ನೇಹಿತ ಇದನ್ನೇ ಡವಾಳವನ್ನಾಗಿಸಿಕೊಂಡು ನೀನು ಕಾಲೇಜಿಗೆ ಹೋಗದೆ ಪ್ರೀತಿ ಪ್ರೇಮ ಎಂದು ತಿರುಗಾಡುತ್ತಿಯಾ, ನಿನ್ನ ಮನೆಗೆ ತಿಳಿಸುತ್ತೇನೆ. ನೀನು ಕಾಲೇಜಿಗೆ ಹೋಗದಂತೆ ಮಾಡುತ್ತೇನೆಂದು ಹೆದರಿಸಿದ್ದಾನೆ.
ಪ್ರೀತಿಯ ವಿಷಯ ನಿನ್ನ ಮನೆಗೆ ತಿಳಿಸಬಾರದೆಂದರೆ ನಾನು ಕೇಳಿದಷ್ಟು ಹಣ ಹಾಗೂ ಚಿನ್ನವನ್ನು ತಂದುಕೊಡಬೇಕೆಂದು ಬ್ಲಾಕ್ಮೇಲ್ ಮಾಡುತ್ತಿದ್ದರಿಂದ ಯುವತಿ ಹೆದರಿ ಮನೆಯಲ್ಲಿದ್ದ ;ಉಮಾರು 3.50 ಲಕ್ಷ ರೂ. ವೌಲ್ಯದ 75 ಗ್ರಾಂ ಚಿನ್ನಾಭರಣಗಳನ್ನು ಆಗಾಗ್ಗೆ ತಂದು ಕೊಟ್ಟಿದ್ದಾಳೆ.
ಒಂದು ದಿನ ಯುವತಿ ತಾಯಿ ಆಭರಣ ತೆಗೆದುಕೊಳ್ಳಲು ಬೀರು ತೆಗೆದು ನೋಡಿದಾಗ ಅದರಲ್ಲಿ ಆಭರಣ ಇಲ್ಲದಿರುವುದು ಗಮನಿಸಿ ಮಗಳನ್ನು ವಿಚಾರಿಸಿದ್ದಾರೆ.
ಆಗ ಮಗಳು ನಡೆದ ವಿಷಯವನ್ನು ತಾಯಿಗೆ ತಿಳಿಸಿದ್ದು, ನಂತರ ತಾಯಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಯುವಕ ತೇಜಸ್ ಬಗ್ಗೆ ಮಾಹಿತಿ ಕಲೆ ಹಾಕಿ ಆತನನ್ನು ಪತ್ತೆ ಹಚ್ಚಿ ಬಂದಿಸಿ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.