ಬೆಂಗಳೂರು, ಆ.9- ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ಪಾದಯಾತ್ರೆಗೆ ಸಡ್ಡು ಹೊಡೆದು ಆಡಳಿತಾ ರೂಢ ಕಾಂಗ್ರೆಸ್ ಪಕ್ಷ ಮೈಸೂರಿನಲ್ಲಿಂದು ಹಮಿ ಕೊಂಡಿದ್ದ ಬೃಹತ್ ಜನಾಂದೋಲನ ಸಮಾವೇಶದಲ್ಲಿ ಶಕ್ತಿ ಪ್ರದರ್ಶನ ಮಾಡುವ ಮೂಲಕ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಹಗರಣಗಳನ್ನು ಬಹಿರಂಗಗೊಳಿಸಿ ತಕ್ಕಶಾಸ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ದಾವಣಗೆರೆಯಲ್ಲಿ ನಡೆದ ಮುಖ್ಯಮಂತ್ರಿ ಸಿದ್ಧರಾಮಯ್ಯ-75 ಮಾದರಿಯಲ್ಲೇ ಮೈಸೂರಿನಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ಹಮಿಕೊಂಡಿದ್ದ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು ಹಲವು ನಾಯಕರು ಹರಿಹಾಯ್ದರು.
ಸಿಎಂ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧವೇ ಕೇಳಿ ಬಂದಿರುವ ಮುಡಾ ಹಗರಣ ವಿಚಾರ ಮುಂದಿಟ್ಟುಕೊಂಡು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುತ್ತಿವೆ.ನಾಳೆ ಮೈಸೂರಿನಲ್ಲಿ ಬೃಹತ್ ಸಮಾವೇಶ ಹಮಿಕೊಳ್ಳಲಾಗಿದೆ. ಇದಕ್ಕೆ ಪರ್ಯಾಯವಾಗಿ ಇಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ನಡೆಯಿತು.
ಸಿದ್ದರಾಮಯ್ಯ ಅವರು ತಮ ವಿರುದ್ಧದ ಗಂಭೀರ ಆರೋಪಗಳಿಗೆ ತಕ್ಕ ಉತ್ತರ ನೀಡುವ ಜೊತೆಗೆ ಬಿಜೆಪಿ ಜೆಡಿಎಸ್ ಅಧಿಕಾರಾವಧಿಯಲ್ಲಿನ ಹಗರಣಗಳನ್ನು ತೆರೆದಿಟ್ಟರು. ಮುಡಾ ಹಗರಣದಲ್ಲಿ ನನ್ನ ಯಾವ ಪಾತ್ರವೂ ಇಲ್ಲ. ಪ್ರತಿಪಕ್ಷಗಳ ಸುಳ್ಳು ಆರೋಪಗಳಿಗೆ ನಾನು ಹೆದರುವುದಿಲ್ಲ. ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ನಾವು ಜಗ್ಗುವುದಿಲ್ಲ. ಜನ ಬೆಂಬಲದ ಹೋರಾಟದ ಜೊತೆಗೆ ಕಾನೂನು ಹೋರಾಟವನ್ನು ಮಾಡುತ್ತೇವೆ ಎಂದು ಗುಡುಗಿದರು.
ದೋಸ್ತಿ ಪಕ್ಷಗಳ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು. ವಿಪಕ್ಷಗಳು ಎಷ್ಟೇ ಹೋರಾಟ, ಪ್ರಯತ್ನ ಮಾಡಿದರೂ ನಮ ಸದೃಢ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ. ನಮ ಸಂಪೂರ್ಣ ಸಂಪುಟ ಸಿಎಂ ಸಿದ್ದು ಬೆಂಬಲಕ್ಕೆ ಬಂಡೆಯಂತೆ ನಿಲ್ಲುತ್ತದೆ ಎಂದು ಹೇಳಿದರು.
ಈ ಬಂಡೆ ಜೊತೆ 136 ಶಾಸಕರು ಇದ್ದಾರೆ. 1.8 ಕೋಟಿ ಮತದಾರರು ಇದ್ದಾರೆ. ಈ ಸರ್ಕಾರವನ್ನು ಹತ್ತು ತಿಂಗಳಲ್ಲಿ ಅಲುಗಾಡಿಸುತ್ತೇವೆ ಎಂಬ ಭ್ರಮೆಯಲ್ಲಿದ್ದೀರಿ. 10 ವರ್ಷವಾದರೂ ಅಲುಗಾಡಿಸಲು ಸಾಧ್ಯವಿಲ್ಲ. ನಿಮ ಪಾಪದ ಯಾತ್ರೆ ಪಾಪ ವಿಮೋಚನೆ ಯಾತ್ರೆಯಿಂದ ನಮಗೆ ಶಕ್ತಿ ಬಂದಿದೆ ಎಂದರು.
ಎಸ್.ಎಂ.ಕೃಷ್ಣ ಅವರು ಕಾವೇರಿಗಾಗಿ ಪಾದಯಾತ್ರೆ ಮಾಡಿದ್ದರು. ನಾವು ಮೇಕೆದಾಟು ಯೋಜನೆಗೆ ಪಾದಯಾತ್ರೆ ನಡೆಸಿದ್ದೆವು. ರಾಹುಲ್ ಗಾಂಧಿ ಅವರು ಭಾರತ್ ಜೋಡೊ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿದ್ದರು. ಸಂಪತ್ತಿನ ಉಳಿವಿಗಾಗಿ ಸಿದ್ದರಾಮಯ್ಯನವರು ಬಳ್ಳಾರಿ ಉಳಿವಿಗಾಗಿ ನಡೆಸಿದ್ದರು. ನಿಮ ಪಾದಯಾತ್ರೆ ಏಕೆ ನಡೆಯುತ್ತಿದೆ ಎಂದು ಪ್ರಶ್ನಿಸಿದರು.
ಏನೂ ಆಗಿಲ್ಲದ ಮುಡಾ ಹಗರಣದಿಂದ ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿರುವ ನಿಮ ಆಟ ನಡೆಯುವುದಿಲ್ಲ ಎಂದು ಡಿ.ಕೆ ಗುಡುಗಿದರು.
ಇದಕ್ಕೂ ಮುನ್ನ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ. ಎಸ್.ಸಿ.ಮಹದೇವಪ್ಪ ಸಂವಿಧಾನದ ಆಶಯಗಳು ಗೊತ್ತಿಲ್ಲದ ಬಿಜೆಪಿ-ಜೆಡಿಎಸ್ ರಾಜ್ಯ ಸರ್ಕಾರದ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸಿದ್ದು, ಅದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ನಿಮ ಸರ್ಕಾರವಿದ್ದಾಗಲೇ ಜಮೀನಿಗೆ ಬದಲಾಗಿ ನಿವೇಶನವನ್ನು ನೀಡಲಾಗಿದೆ. ನಿವೇಶನ ನೀಡಿಕೆ ವಿಚಾರದಲ್ಲಿ ಮುಡಾ ತಪ್ಪು ಮಾಡಿರಬೇಕು ಇದರಲ್ಲಿ ಮುಖ್ಯಮಂತ್ರಿಯ ಯಾವ ತಪ್ಪು ಇಲ್ಲ. ಜನನಾಯಕರಾದ ಸಿದ್ದರಾಮಯ್ಯನವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಮಾತನಾಡಿ, ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಜೆಡಿಎಸ್ ಆರೋಪ ಮಾಡುವ ಮೂಲಕ ಸರ್ಕಾರ ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಿದ್ದಾರೆ. ಇಂದು ನಡೆದ ಈ ಸಮಾವೇಶ ಮತ್ತಷ್ಟು ಶಕ್ತಿ ತಂದು ಕೊಟ್ಟಿದೆ ಅನಾವಶ್ಯಕವಾಗಿ 20 ವರ್ಷದ ಹಳೆಯ ಪ್ರಕರಣವನ್ನು ಮುಂಚೂಣಿಗೆ ತಂದು ಆಡಳಿತ ನಡೆಸಲು ತೊಂದರೆ ಕೊಡಲಾಗುತ್ತಿದೆ.
ವಿರೋಧ ಪಕ್ಷದ ಸ್ಥಾನದ ಜವಾಬ್ಧಾರಿಯನ್ನು ಕೂಡ ನಿರ್ವಹಿಸುತ್ತಿಲ್ಲವೆಂದು ವಾಗ್ದಾಳಿ ನಡೆಸಿದರು. ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ನಿಷ್ಠಾವಂತ ಹಾಗೂ ಕಪ್ಪು ಚುಕ್ಕೆಯಿಲ್ಲದ ಆಡಳಿತ ಮಾಡುತ್ತಿರುವ ಸಿದ್ದರಾಮಯ್ಯ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಸಹೋದರಿಗೆ ದಾನವಾಗಿ ಜಮೀನು ನೀಡಿರುವುದು ಯಾವ ರೀತಿ ಕಾನೂನುಬಾಹಿರವಾಗಿರುತ್ತದೆಂದು ಪ್ರಶ್ನಿಸಿದ್ದಾರೆ.
ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಮಾತನಾಡಿ, ನಮ ಸರ್ಕಾರವನ್ನು ಪತನಗೊಳಿಸಲು ಷಡ್ಯಂತ್ರ ರೂಪಿಸುತ್ತಿವೆ. ಅದರ ವಿರುದ್ಧ ನಾವು ಒಗ್ಗಟ್ಟಿನ ಹೋರಾಟ ಮಾಡುತ್ತೇವೆ ಎಂದು ಹೇಳಿದರು.ಸಂಪುಟದ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ನಿಗಮಗಳ ಅಧ್ಯಕ್ಷರು ಸೇರಿದಂತೆ 300ಕ್ಕೂ ಹೆಚ್ಚು ಮುಖಂಡರು ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಅವರು ಬರೆದಿರುವ ಮುಖ್ಯಮಂತ್ರಿಗಳ ಮೇಲಿನ ಆರೋಪಗಳ ಕುರಿತ ಸತ್ಯ ಶೋಧನ ವರದಿ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಕೆಪಿಸಿಸಿಯಿಂದ ಹಮಿಕೊಂಡಿದ್ದ ಜನಾಂದೋಲನ ಈ ಸಮಾವೇಶಕ್ಕೆ ಮೈಸೂರು ಸುತ್ತಮುತ್ತಲ ಪ್ರದೇಶದ ಹಾಗೂ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದರು.