ಬೆಂಗಳೂರು,ಆ.9- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡ ಬೇಕೆಂದು ಆಗ್ರಹಿಸಿ ಎನ್ಡಿಎ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ನಾಳೆ ಮುಕ್ತಾಯವಾಗಲಿದೆ.
ಆ.3ರಂದು ಮುಡಾ ಹಗರಣ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬೆಂಗಳೂರಿನಿಂದ ಜಂಟಿ ಪಾದಯಾತ್ರೆಯನ್ನು ಬಿಜೆಪಿ ಜೆಡಿಎಸ್ ಆರಂಭಿಸಿದ್ದವು.
ಬೆಂಗಳೂರಿನಿಂದ ಶ್ರೀರಂಗಪಟ್ಟಣದವರೆಗೆ 100 ಕಿ.ಮೀ ಪಾದಯಾತ್ರೆಯನ್ನು ಮಿತ್ರ ಪಕ್ಷಗಳು ಪೂರ್ಣಗೊಳಿಸಿವೆ. ಇಂದು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಪಾದಯಾತ್ರೆ ತೆರಳಲಿದೆ.
ನಾಳೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಪಾದ ಯಾತ್ರೆಯ ಅದ್ಧೂರಿ ಸಮಾರೋಪ ಸಮಾರಂಭ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ಕುಮಾರಸ್ವಾಮಿ ಸೇರಿದಂತೆ ಉಭಯ ಪಕ್ಷಗಳ ನಾಯಕತ ನೇತೃತ್ವದಲ್ಲಿ ಪಾದಯಾತ್ರೆಯನ್ನು ಆರಂಭಿಸಲಾಗಿತ್ತು.
ಪಾದಯಾತ್ರೆಯುದ್ದಕ್ಕೂ ಎರಡು ಪಕ್ಷಗಳ ನಾಯಕರು, ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹಗರಣಗಳ ಆರೋಪದ ಲಕಗಳನ್ನು ಪ್ರದರ್ಶಿಸಿ ಸಾಗಿದರು. ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಉಭಯ ಪಕ್ಷಗಳ ನಾಯಕರು ಪ್ರತಿದಿನ ನಡೆದ ಬಹಿರಂಗ ಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ರಾಜೀನಾಮೆ ನೀಡುವಂತೆ ಪಟ್ಟು ಹಿಡಿದು ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಪಾದಯಾತ್ರೆಗೆ ಅಪಾರ ಜನ ಬೆಂಬಲ ವ್ಯಕ್ತವಾಗಿದ್ದು, ಮೈಸೂರಿನಲ್ಲಿ ನಡೆಯುವ ಸಮಾರೋಪವನ್ನು ಬೃಹತ್ ಮಟ್ಟದಲ್ಲಿ ನಡೆಸಲು ಮಿತ್ರ ಪಕ್ಷಗಳು ಉದ್ದೇಶಿಸಿವೆ.