ಹಾಸನ,ಆ.10- ಮತ್ತೆ ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗದ ಹಳಿ ಮೇಲೆ ಗುಡ್ಡ ಕುಸಿತವಾಗಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.ಕಳೆದ ಕೆಲವು ದಿನಗಳ ಹಿಂದೆ ಭಾರಿ ಮಳೆಯಿಂದಾಗಿ ಎಡಕುಮರಿ ಹಾಗೂ ಕಡೆಗರವಳ್ಳಿ ಬಳಿ ಭೂಕುಸಿತವಾಗಿ ಕೆಲವು ದಿನಗಳ ಕಾಲ ರೈಲು ಸಂಚಾರ ರದ್ದಾಗಿದ್ದು, ದುರಸ್ಥಿ ಕಾರ್ಯ ಮುಗಿದಿತ್ತು.
ಇನ್ನೇನು ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡುವಷ್ಟರಲ್ಲಿ ಇಂದು ಬೆಳಿಗ್ಗೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ಕಿ.ಮೀ. ಸಂಖ್ಯೆಯ 42/43 ರ ಮಧ್ಯೆ ಮತ್ತೆ ಹಳಿ ಮೇಲೆ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ.
ಹಾಸನದಿಂದ ಮಂಗಳೂರಿಗೆ, ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರ ಸ್ಥಗಿತವಾಗಿದೆ. ಸಕಲೇಶಪುರ, ಎಡಕುಮರಿ, ಶಿರವಾಗಿಲು ಸೇರಿದಂತೆ ಆರು ಕಡೆ ಆರು ರೈಲುಗಳು ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಗಿತ್ತು.
ಪರ್ಯಾಯ ವಾಹನ ವ್ಯವಸ್ಥೆ ಕಲ್ಪಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದು, ಕೆಲ ಪ್ರಯಾಣಿಕರು ರೈಲುಗಳನ್ನಿಳಿದು ಸಮೀಪದ ಗ್ರಾಮಗಳಿಗೆ ನಡೆದುಕೊಂಡೇ ಹೋಗಿ ಇತರೆ ವಾಹನಗಳಲ್ಲಿ ಪಟ್ಟಣ ಸೇರಿ ಬಸ್ಸುಗಳ ಮೂಲಕ ಊರು ಸೇರಿದ್ದಾರೆ.ಕೂಡಲೇ ಕಾರ್ಯಪ್ರವೃತ್ತರಾದ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಇಟಾಚಿ ಯಂತ್ರದ ಮೂಲಕ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.