Friday, September 20, 2024
Homeಜಿಲ್ಲಾ ಸುದ್ದಿಗಳು | District Newsಪ್ರವಾಸಿಗರ ಮನಸೂರೆಳಿಸಿದ ಭರಚುಕ್ಕಿ ಜಲಪಾತೋತ್ಸವ

ಪ್ರವಾಸಿಗರ ಮನಸೂರೆಳಿಸಿದ ಭರಚುಕ್ಕಿ ಜಲಪಾತೋತ್ಸವ

ಕೊಳ್ಳೇಗಾಲ, ಆ.11– ಪ್ರವಾಸಿಗರ ಸ್ವರ್ಗ, ಭಾರತದ ನಯಾಗರಾ ಫಾಲ್ಸ್ ಎಂದೇ ಕರೆಯಲ್ಪಡುವ ತಾಲೂಕಿನ ವಿಶ್ವವಿಖ್ಯಾತ ಭರಚುಕ್ಕಿ ಜಲಪಾತೋತ್ಸವ ಪ್ರವಾಸಿಗರ ಮನಸೂರೆಗೊಳಿಸಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಚೆಲುವ ಚಾಮರಾಜನಗರ ಭರಚುಕ್ಕಿ ಜಲಪಾತೋತ್ಸವ-2024 ಉದ್ಘಾಟನಾ ವೇದಿಕೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿ ಮಾತನಾಡಿ, ರಾಜ್ಯದ ಪ್ರವಾಸೋದ್ಯಮ ತಾಣಗಳ ಬೆಳವಣಿಗೆಗೆ ಸರ್ಕಾರ ಬದ್ಧವಾಗಿದೆ. ಅಂತೆಯೇ, ಚಾಮರಾಜನಗರ ಜಿಲ್ಲೆಯ ಸಮಗ್ರ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.

ಈ ಬಾರಿ ಉತ್ತಮ ಮಳೆಯಾಗಿದೆ. ಕಬಿನಿ ಹಾಗೂ ಕೆಆರ್‌ಎಸ್‌‍ ಭರ್ತಿಯಾಗಿ ಭರಚುಕ್ಕಿ ಹಾಗೂ ಗಗನಚುಕ್ಕಿ ಜಲಪಾತಗಳ ಸೊಬಗು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭರಚುಕ್ಕಿ ಜಲಪಾತೋತ್ಸವ ಆಯೋಜಿಸಲಾಗಿದೆ. ಆರಂಭದಲ್ಲಿದ್ದಾಗ ಭರಚುಕ್ಕಿ ಜಲಪಾತ ವೀಕ್ಷಣೆ ಮಾಡ್ದೆಿ ಎಂದರು.ಗಗನಚುಕ್ಕಿಯಲ್ಲಿ ರೋಪ್‌ವೇ ನಿರ್ಮಾಣ ಮಾಡಬೇಕೆಂಬ ಮನವಿ ಬಂದಿದ್ದು, ಪ್ರವಾಸಿಗರ ಅನುಕೂಲಕ್ಕೆ ಸರ್ಕಾರ ಕ್ರಮ ವಹಿಸುತ್ತದೆ.

ಹಾಗೆಯೇ ಹಿಮದ್‌ ಗೋಪಾಲಸ್ವಾಮಿ ಬೆಟ್ಟದ ಮೂಲಸೌಕರ್ಯ ಒತ್ತಾಯವಿದೆ. ಹುಲಿ ಪ್ರವಾಸೋದ್ಯಮ ಜತೆಗೆ ಸರ್ಕ್ಯೂಟ್‌ ಅಭಿವೃದ್ಧಿಪಡಿಸಬೇಕು ಮತ್ತು ಸುವರ್ಣಾವತಿ ಜಲಾಶಯದಲ್ಲಿ ಜಲ ಸಾಹಸ ಕ್ರೀಡೆ ಅಭಿವೃದ್ಧಿ ಅಗತ್ಯವಿದೆ. ರಾಜ್ಯವನ್ನು ಪ್ರವಾಸೋದ್ಯಮ ತಾಣವಾಗಿಸಲು ಹೇರಳ ಅವಕಾಶವಿರುವುದರಿಂದ ಸರ್ಕಾರ ಮುಂದೆ ಶ್ರಮಿಸಲಿದೆ ಎಂದರು.

ಶಾಸಕ ಎಂ.ಆರ್‌.ಮಂಜುನಾಥ್‌ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಭರಚುಕ್ಕಿ ಮತ್ತು ಗಗನಚುಕ್ಕಿ ಇವೆರಡೂ ಅವಳಿ ಜಲಪಾತವನ್ನು ಒಂದೆಡೆ ವೀಕ್ಷಣೆ ಮಾಡುವ ನಿಟ್ಟಿನಲ್ಲಿ ಕಾಮಗಾರಿ ನಡೆಸಿದಲ್ಲಿ ಇಡೀ ದೇಶಕ್ಕೆ ಮಾದರಿ ಪ್ರವಾಸಿ ತಾಣವಾಗುತ್ತದೆ ಎಂದರು.

ಆಹಾರ ಖಾದ್ಯಗಳ ಸ್ಟಾಲ್‌ಗಳು:
ಜಲಪಾತೋತ್ಸವದ ಹಿನ್ನೆಲೆಯಲ್ಲಿ ಸ್ವಸಹಾಯ ಮಹಿಳಾ ಸಂಘ ಸಂಸ್ಥೆಗಳು ಸ್ಟಾಲ್‌ಗಳನ್ನು ತೆರೆದು ಪ್ರವಾಸಿಗರಿಗೆ ರುಚಿಕರವಾದ ಆಹಾರ ಖಾದ್ಯಗಳನ್ನು ಖರೀದಿಸುವ ವ್ಯವಸ್ಥೆ ಕಲ್ಪಿಸಿತ್ತು. ಬಿರಿಯಾನಿ, ಚಿಕನ್‌ ಕಬಾಬ್‌‍, ಬೋಂಡ, ಬಜ್ಜಿ ಇನ್ನಿತರ ತಿಂಡಿ-ತಿನಿಸುಗಳು ಸೇರಿದಂತೆ ಗೃಹಬಳಕೆ ವಸ್ತುಗಳನ್ನು ಮಾರಾಟಕ್ಕಿಟ್ಟಿದರು. ಜನರು ತಮ ಇಚ್ಛೆಯ ತಿಂಡಿ-ತಿನಿಸು ತಿಂದು ಖುಷಿಪಟ್ಟರು.

ಉಚಿತ ಬಸ್‌‍ ವ್ಯವಸ್ಥೆ: ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ವಾಹನಗಳಿಗೆ ದರ್ಗಾ ಸಮೀಪ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದರಂತೆ ಜನರು ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡಿದರು. ನಂತರ, ಕೆಎಸ್‌‍ಆರ್‌ಟಿಸಿ ಬಸ್‌‍ನಲ್ಲಿ ಜನರು ಉಚಿತವಾಗಿ ಭರಚುಕ್ಕಿ ಅಂಗಳಕ್ಕೆ ಬಂದಿಳಿಯುವ ವ್ಯವಸ್ಥೆ ಮಾಡಲಾಗಿತ್ತು.

ರಂಗೇರಿದ ಸಾಂಸ್ಕೃತಿಕ ಕಾರ್ಯಕ್ರಮ:
ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಳಿಸಿದವು. ಸಚಿವರಾದ ಎಚ್‌.ಕೆ.ಪಾಟೀಲ್‌, ಕೆ.ವೆಂಕಟೇಶ್‌, ಎಚ್‌.ಸಿ.ಮಹದೇವಪ್ಪ, ಎಸ್‌‍.ತಂಗಡಗಿ, ಸಂಸದ ಸುನೀಲ್‌ ಬೋಸ್‌‍, ಶಾಸಕ ಸಿ.ಪುಟ್ಟರಂಗಶೆಟ್ಟಿ, ಉಗ್ರಾಣ ನಿಗಮ ಅಧ್ಯಕ್ಷ ಜಯಣ್ಣ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಚಂದ್ರು, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್‌, ಸಿಇಒ ಮೋನಾ ರೋತ್‌, ಮಂಡ್ಯ ಜಿಲ್ಲಾಧಿಕಾರಿ ಕುಮಾರ್‌, ಎಸ್‌‍ಪಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಮಹೇಶ್‌, ತಹಸೀಲ್ದಾರ್‌ ಮಂಜುಳಾ ಮತ್ತಿತರರಿದ್ದರು.

RELATED ARTICLES

Latest News