ಬೆಂಗಳೂರು, ಆ.11– ಶ್ರಾವಣ ಮಾಸದಲ್ಲಿ ಸರಣಿ ಹಬ್ಬಗಳು… ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುತ್ತವೆ. ಪೂಜೆಗೆ ಅಗತ್ಯವಾಗಿ ಬೇಕಾಗಿರುವ ಬಾಳೆಹಣ್ಣಿನ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಕಳೆದ ಕೆಲವು ತಿಂಗಳುಗಳ ಹಿಂದೆ ಕೆಜಿಗೆ 50ರಿಂದ 60ರೂ.ಗೆ ಮಾರಾಟವಾಗುತ್ತಿದ್ದ ಏಲಕ್ಕಿ ಬಾಳೆಹಣ್ಣು ಈಗ 120 ರಿಂದ 150ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ರಸ್ತೆಬದಿಯಲ್ಲಿ ತಳ್ಳುವ ಗಾಡಿಯಲ್ಲಿ ಬಾಳೆಹಣ್ಣು ಮಾರುವವರು, ಹಣ್ಣಿನ ಮಾರಾಟವಾಗದೆ ಸಂಕಷ್ಟದಲ್ಲಿದ್ದಾರೆ. ಬಹಳಷ್ಟು ಬಾರಿ ಅವರು ಕೆಜಿಗೆ 100ರೂ. ಮುಟ್ಟಿದಾಗ ಬಾಳೆಹಣ್ಣು, ಮಾರಾಟ ಮಾಡಲಾಗದೆ, ಗಿರಾಕಿಗಳಿಗೂ ಸಹ ಉತ್ತರ ನೀಡಲಾರದೆ ಪರಿತಪಿಸುವಂತಾಗಿದೆ.
ರೈತರಿಂದ ನೇರವಾಗಿ ಖರೀದಿ ಮಾಡಿ, ಮನೆಯಲ್ಲಿ ಹಣ್ಣು ಹಾಕಿ, ಅವುಗಳನ್ನು ಸಂಗ್ರಹಿಸಿಟ್ಟುಕೊಂಡು, ಕಾಲಕ್ಕೆ ಸರಿಯಾಗಿ ಜನಸಾಮಾನ್ಯರಿಗೆ, ನಾಗರಿಕರಿಗೆ ತಲುಪಿಸುವಂತಹ ಕೆಲಸ ಮಾಡುತ್ತಿರುವ ಬಾಳೆಹಣ್ಣಿನ ವ್ಯಾಪಾರಿಗಳು ಸಹ ಈ ತುಟ್ಟಿಯಾದ ಬಾಳೆಹಣ್ಣಿನ ಬಗ್ಗೆ ನೊಂದು, ಅಸಹಾಯಕರಾಗಿದ್ದಾರೆ.
ಬಾಳೆಹಣ್ಣನ್ನು ಬಹಳ ದಿವಸ ಇಟ್ಟು ಮಾರಲಾಗುವುದಿಲ್ಲ. ಹಣ್ಣಾದ ಕೂಡಲೇ ಬೆಲೆ ಹೆಚ್ಚಾಗಿರಲಿ, ಕಡಿಮೆಯಾಗಿರಲಿ ಮಾರಾಟ ಮಾಡಲೇಬೇಕೆಂಬುದು ರೈತರು ಮತ್ತು ವ್ಯಾಪಾರಿಗಳ ಮಾತಾಗಿದೆ.ಬಾಳೆಹಣ್ಣು ಬೆಳಗಾರರಿಗೆ ಸಂಕಷ್ಟಗಳಿವೆ. ಬಾಳೆ ಬೆಳೆಗೆ ಹೆಚ್ಚಿನ ನೀರು, ಔಷಧಿ ಗಳ ಸಿಂಪಡಣೆ, ಕೂಲಿಕಾರ್ಮಿಕರ ಅಭಾವ, ಸಾಗಾಣಿಕೆ ವೆಚ್ಚ, ಸಂಗ್ರಹಿಸಲು ಸರಿಯಾದ ವ್ಯವಸ್ಥೆ ಇಲ್ಲದಿರುವುದು,
ಮಳೆ ನೀರಿನ ಅಭಾವ, ರೋಗ-ರುಜಿನಗಳು, ಮಾರುಕಟ್ಟೆಯಲ್ಲಿ ನಿಗದಿಯಾದ ಬೆಲೆ ಸಿಗದಿರುವುದು, ಮಧ್ಯವರ್ತಿಗಳಿಂದ ಶೋಷಣೆ, ಸಾಗಾಣಿಕೆಯಲ್ಲಿ ಬಹಳಷ್ಟು ಹಣ್ಣಿನ ನಾಶ, ಹೀಗೆ ಬಹಳಷ್ಟು ಸಮಸ್ಯೆಗಳಿಂದ ರೈತರು ಬಳಲುತ್ತಿದ್ದು, ಮಾರುಕಟ್ಟೆಗೆ ಸಮ ಪ್ರಮಾಣದಲ್ಲಿ ಬಾಳೆಹಣ್ಣನ್ನು ಒದಗಿಸಲು ಸಾಧ್ಯವಾಗದೆ ಬೆಲೆ ಏರಿಕೆಯಾಗಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರೈತರಿಂದ ಅರ್ಧ ಬೆಲೆಗೆ ಖರೀದಿ ಮಾಡಿ ತಂದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಇಲ್ಲಿ ವ್ಯಾಪಾರಿಗಳಿಗೂ ಲಾಭವಿಲ್ಲ, ರೈತರಿಗೂ ಲಾಭವಿರುವುದಿಲ್ಲ. ಮಧ್ಯವರ್ತಿಗಳಿಗೆ ಮಾತ್ರ ಹೆಚ್ಚಿನ ಲಾಭವಾಗುತ್ತಿದೆ.
ವರಮಹಾಲಕ್ಷ್ಮಿ, ಶ್ರೀ ಕೃಷ್ಣ ಜನಾಷ್ಠಮಿ, ಶ್ರಾವಣ ಶನಿವಾರ, ಗೌರಿ-ಗಣೇಶ ಸೇರಿದಂತೆ ಹಲವಾರು ಹಬ್ಬಗಳು ಬರಲಿದ್ದು, ಯಾಲಕ್ಕಿ ಬಾಳೆ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕೆಜಿಗೆ 20 ರಿಂದ 30ರೂ.ಗೆ ಮಾರಾಟವಾಗುತ್ತಿದ್ದ ಪಚ್ಚಬಾಳೆಹಣ್ಣಿನ ಬೆಲೆಯೂ ಸಹ ಹೆಚ್ಚಾಗಲಿದೆ.