ಬೆಂಗಳೂರು, ಜ.8- ಆಡಳಿತ ಮತ್ತು ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರಿಗಿಂತಲೂ ನನಗೆ ಉತ್ತಮ ಅನುಭವ ಇದೆ. ಅವರಿಂದ ನಾನು ಏನನ್ನು ಕಲಿಯುವ ಅಗತ್ಯ ಇಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕೆಪಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಸುಧೀರ್ಘಕಾಲ ಸಚಿವನಾಗಿ ಕೆಲಸ ಮಾಡಿದ್ದು ಉತ್ತಮ ಅನುಭವ ಹೊಂದಿದ್ದೇನೆ ಎಂದಿದ್ದಾರೆ. ಬಳ್ಳಾರಿಯಲ್ಲಿ ನಡೆದಿದ್ದ ಬ್ಯಾನರ್ ಗಲಭೆ ಪ್ರಕರಣದ ಬಳಿಕ ಅಲ್ಲಿಗೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್, ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದರು. ಕುಮಾರಸ್ವಾಮಿ ಇದನ್ನು ಪ್ರಶ್ನೆ ಮಾಡಿ, ಡಿ.ಕೆ.ಶಿವಕುಮಾರ್ ಅವರಿಗೆ ಯಾವ ಅಧಿಕಾರ ಇದೆ ಎಂಬ ಕಾರಣಕ್ಕೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ ಎಂದು ಪ್ರಶ್ನಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನನಗೆ ಆಡಳಿತದಲ್ಲಿ ಎಚ್.ಡಿ,ಕುಮಾರಸ್ವಾಮಿಯವರಿಗಿಂತಲೂ ಹೆಚ್ಚು ಮತ್ತು ಉತ್ತಮ ಅನುಭವ ಇದೆ. ರಾಜಕಾರಣದಲ್ಲೂ ಹೆಚ್ಚು ಅನುಭವ ಹೊಂದಿದ್ದೇನೆ. ದೀರ್ಘಕಾಲ ಸಚಿವನಾಗಿ ಕೆಲಸ ಮಾಡಿದ್ದೇನೆ. ಏನು ಮಾಡಬೇಕು ? ಹೇಗೆ ಕೆಲಸ ಮಾಡಬೇಕು ? ಯಾರನ್ನು ಕರೆದು ಸಭೆ ಮಾಡಬೇಕು ಎಂಬ ಅರಿವಿದೆ ಎಂದರು.
ಬಳ್ಳಾರಿ ಘಟನೆಯನ್ನು ಕುಮಾರಸ್ವಾಮಿ ಸಿಬಿಐ ತನಿಖೆ ವಹಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿರುವುದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಮತ್ತೊಮೆ ವೇದಿಕೆಯಲ್ಲಿ ಕೊಟ್ಟ ಮಾತಿನ ಪ್ರಸ್ತಾಪ ಮಾಡಿರುವುದಕ್ಕೂ ಮತ್ತೆ ಸ್ಪಷ್ಟನೆ ನೀಡಲು ಡಿ.ಕೆ.ಶಿವಕುಮಾರ್ ಬಯಸಲಿಲ್ಲ.
