ಬೆಂಗಳೂರು, ಆ.12-ಪ್ರತಿ ಗ್ರಾಮದಲ್ಲೂ ಸ್ಮಶಾನಗಳಿಗೆ ಜಾಗ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.ವಿಕಾಸಸೌಧದಲ್ಲಿ ಕಂದಾಯ ಇಲಾಖೆಯ ಬೆಂಗಳೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಪ್ರತಿ ಗ್ರಾಮದಲ್ಲೂ ಸಶಾನಗಳು ಇರುವ ಹಾಗೂ ಇಲ್ಲದಿರುವ ಬಗ್ಗೆ ಸರ್ವೆ ನಡೆಸಬೇಕು. ಸಶಾನಗಳು ಇಲ್ಲದಿರುವ ಗ್ರಾಮಗಳನ್ನು ಗುರುತಿಸಿ ಸಶಾನಕ್ಕೆ ಬೇಕಾದ ಸ್ಥಳಾವಕಾಶ ಕಲ್ಪಿಸಬೇಕು ಎಂದು ಸೂಚಿಸಿದ್ದಾರೆ.
ಅದೇ ರೀತಿ ಕೆರೆಗಳ ಒತ್ತುವರಿ ಬಗ್ಗೆಯೂ ಸರ್ವೆ ನಡೆಸಬೇಕು. ಕೆರೆಯ ಅಂಗಳ ಒತ್ತುವರಿಯಾಗಿರುವುದನ್ನು ಗುರುತಿಸಿ ತಕ್ಷಣವೇ ಒತ್ತುವರಿ ತೆರವಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.
ಸಭೆಯಲ್ಲಿ ಆಯಾ ಜಿಲ್ಲಾ ಮತ್ತು ತಾಲ್ಲೂಕಿಗೆ ಸಂಬಂಧಿಸಿದಂತೆ ಸಶಾನಗಳ ಹಾಗೂ ಕೆರೆ ಒತ್ತುವರಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಮೇಲಿನಂತೆ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬಹಳ ವರ್ಷಗಳಿಂದ ರೈತರು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಆದಷ್ಟು ಶೀಘ್ರವಾಗಿ ಬಗರ್ ಹುಕುಂನಡಿ ಸಲ್ಲಿಸಿರುವ ಅರ್ಜಿಗಳನ್ನು ಇತ್ಯರ್ಥಪಡಿಸಿ. ಅರ್ಹರಿಗೆ ಬಗರ್ ಹುಕುಂನಡಿ ಜಮೀನು ಮಂಜೂರು ಮಾಡುವಂತೆ ಇಲಾಖೆಯ ಅಧಿಕಾರಿಗಳಿಗೆ ಅವರು ತಾಕೀತು ಮಾಡಿದ್ದಾರೆ.
ಬಗರ್ ಹುಕುಂ ಅರ್ಜಿ ವಿಲೇವಾರಿಗೆ ಆಸಕ್ತಿ ತೋರದ ಅಧಿಕಾರಿಗಳನ್ನು ತರಾಟೆಗೆ ತೆಗೆದಕೊಂಡ ಸಚಿವರು, ಸಲ್ಲಿಸಿರುವ ಅರ್ಜಿ ನ್ಯಾಯಸಮತವಾಗಿದ್ದರೆ, ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಲು ಅಧಿಕಾರಿಗಳಿಗೆ ಏನು ಸಮಸ್ಯೆ? ಅಧಿಕಾರಿಗಳು ಮಾಡುವ ತಪ್ಪಿಗೆ ಜನಪ್ರತಿನಿಧಿಗಳು ತಲೆತಗ್ಗಿಸಬೇಕೆ? ಗೋಮಾಳ ಜಮೀನು ಮಂಜೂರಾತಿ ಬಗ್ಗೆ ಕಾನೂನು ಪುಸ್ತಕದಲ್ಲಿ ಸ್ಪಷ್ಟವಾಗಿದೆ.ಅದನ್ನು ಓದಿ ಪಾಲಿಸಲು ನಿಮಗೇನು ಸಮಸ್ಯೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
40 ವರ್ಷಗಳ ಹಿಂದೆ ಮಂಜೂರಾದ ಜಮೀನಿಗೆ ಇನ್ನೂ ಹದ್ದುಬಸ್ತು ಮಾಡಿಕೊಡದೇ ರೈತರನ್ನು ಅನಗತ್ಯವಾಗಿ ಕಚೇರಿಗೆ ಅಲೆಸುತ್ತಿರುವ ವಿಚಾರದ ಬಗ್ಗೆ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ, ಕಂದಾಯ ಇಲಾಖೆಯ ಆಯುಕ್ತ ವಿ.ಸುನೀಲ್ ಕುಮಾರ್, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆದಿತ್ಯ ಬಿಸ್ವಾಸ್, ಸರ್ವೇ ಇಲಾಖೆಯ ಆಯುಕ್ತ ಮಂಜುನಾಥ್, ಕರ್ನಾಟಕ ವಿಪತ್ತು ನಿರ್ವಹಣಾ ಇಲಾಖೆಯ ಆಯುಕ್ತ ಶಿವಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.