ಬೆಂಗಳೂರು, ಆ.12– ನೈರುತ್ಯ ಮುಂಗಾರು ಮಳೆ ಎರಡು ವಾರದ ನಂತರ ಮತ್ತೆ ಚುರುಕಾಗಿದ್ದು, ರಾಜ್ಯದ ಒಳನಾಡಿನಲ್ಲಿ ಇನ್ನೂ ಐದು ದಿನಗಳ ಕಾಲ ವ್ಯಾಪಕ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಇಂದಿನಿಂದ ಆಗಸ್್ಟ 16ರವರೆಗೆ ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಕೆಲವೆಡೆ ಮಿಂಚು, ಗುಡುಗು ಹಾಗೂ ಬಲವಾದ ಗಾಳಿ ಸಹಿತ ಮಳೆಯಾಗಲಿದೆ. ಕೆಲವೆಡೆ ಭಾರೀ ಮಳೆಯಾಗಲಿದ್ದು, ಹಲವೆಡೆ ಉಳಿದಂತೆ ಸಾಧಾರಣ ಮಳೆಯಾಗಲಿದೆ.
ಉತ್ತರ ಒಳನಾಡಿನಲ್ಲಿ ಇಂದಿನಿಂದ ಗುರುವಾರದವರೆಗೆ ವ್ಯಾಪಕ ಪ್ರಮಾಣದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದ್ದರೂ ಮುಂದಿನ ಐದು ದಿನಗಳ ಕಾಲ ಚದುರಿದಂತೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
ರಾಜಧಾನಿ ಬೆಂಗಳೂರಿನಲ್ಲಿ ಬೆಳಗಿನಜಾವ ಗುಡುಗು, ಮಿಂಚಿನ ಮಳೆಯಾಗಿದ್ದು, ತಗ್ಗು ಪ್ರದೇಶದ ರಸ್ತೆಗಳು, ಅಂಡರ್ ಪಾಸ್ಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ತಗ್ಗು ಪ್ರದೇಶಗಳಿಗೂ ನೀರು ನುಗ್ಗಿದ್ದು ಜನರು ಸಾಕಷ್ಟು ತೊಂದರೆ ಅನುಭವಿಸಿದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೆಲವೆಡೆ ಚದುರಿದಂತೆ ಸಾಧಾರಣ ಮಳೆಯಾಗಿದೆ.ಸ್ಥಳೀಯ ಹವಾಮಾನ ಮುನ್ಸೂಚನೆ ಪ್ರಕಾರ ಬೆಂಗಳೂರು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಮತ್ತು ರಾತ್ರಿ ಮಳೆಯಾಗುವ ಸಾಧ್ಯತೆಗಳಿವೆ.