ಬೆಂಗಳೂರು,ಆ.13- ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಈ ಬಾರಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅಂಗಾಂಗ ದಾನ ಮಾಡಿರುವ 64 ಕುಟುಂಬಗಳ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಂಸಾ ಪತ್ರ ನೀಡಿ ಗೌರವಿಸಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದಿಲ್ಲಿ ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆ ಕುರಿತಂತೆ ಹಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಬಾರಿ ವಿಶೇಷವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಸ್ಥಾಪಿತವಾದ ಸ್ಟೇಟ್ ಆರ್ಗನ್ ಟಿಶ್ಯೂ ಟ್ರಾನ್ಸ್ ಸಪ್ಲಾಂಟ್ ಆರ್ಗನೈಸೇಷನ್ ಮಾಹಿತಿಯನ್ನಾಧರಿಸಿ ಅಂಗಾಂಗ ದಾನ ಮಾಡಿರುವ 64 ಕುಟುಂಬಗಳ ಸದಸ್ಯರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುತ್ತಿದೆ ಎಂದು ವಿವರಿಸಿದರು.
ಸ್ವಾತಂತ್ರ್ಯ ದಿನೋತ್ಸವದಂದು ಬೆಳಿಗ್ಗೆ 8.58 ಕ್ಕೆ ಮುಖ್ಯಮಂತ್ರಿಗಳು ಪೆರೇಡ್ ಮೈದಾನಕ್ಕೆ ಆಗಮಿಸಲಿದ್ದು, 9 ಗಂಟೆಗೆ ಸರಿಯಾಗಿ ಧ್ವಜಾರೋಹಣ ನೆರವೇರಿಸಲಿದ್ದಾರೆ.ಧ್ವಜಾರೋಹಣದ ನಂತರ ಮುಖ್ಯಮಂತ್ರಿಗಳು ತೆರೆದ ಜೀಪ್‌ನಲ್ಲಿ ಪೆರೇಡ್ ವೀಕ್ಷಣೆ ಮಾಡಿ ಗೌರವ ರಕ್ಷೆ ಸ್ವೀಕರಿಸಿದ ನಂತರ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಲಿದ್ದಾರೆ ಎಂದು ತುಷಾರ್ ಗಿರಿನಾಥ್ ಹೇಳಿದರು.
ಸಿಎಂ ಗೌರವ ರಕ್ಷೆ ಸ್ವೀಕರಿಸುವ ತಾಲೀಮನ್ನು ಆ.11 ರಿಂದ ನಡೆಸಿಕೊಂಡು ಬರಲಾಗುತ್ತಿದೆ. ಗೌರವ ರಕ್ಷೆ ಕಾರ್ಯದಲ್ಲಿ ಕೆಎಸ್‌ಆರ್‌ಪಿ, ಸಿಆರ್‌ಪಿಎಫ್, ಬಿಎಸ್‌ಎಫ್, ಸಿಎಆರ್, ಗೋವಾ ಪೊಲೀಸ್, ಕೆಎಸ್‌ಐಎಸ್‌ಎಫ್, ಟ್ರಾಫಿಕ್, ಮಹಿಳಾ ಪೊಲೀಸರು, ಹೋಂಗಾರ್ಡ್‌್ಸ, ಅಗ್ನಿಶಾಮಕ ದಳ, ಡಾಗ್ ಸ್ಕ್ವಾಡ್ ಮತ್ತು ಬ್ಯಾಂಡ್‌ನ 35 ತುಕಡಿಗಳಲ್ಲಿ 1150 ಮಂದಿ ಭಾಗವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ನಾಡಗೀತೆ ಮತ್ತು ರೈತಗೀತೆಯನ್ನು ಮಂಜುನಾಥ್, ಸಿದ್ದರಾಜಯ್ಯ ಹಾಗೂ ಸಬ್ಬನಹಳ್ಳಿ ರಾಜು ಮತ್ತು ತಂಡದವರು ನಡೆಸಿಕೊಡಲಿದ್ದಾರೆ.ಯಲಹಂಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ 750 ವಿದ್ಯಾರ್ಥಿಗಳು ಜಯಭಾರತಿ ಹಾಡು ಹಾಡಲಿದ್ದಾರೆ.ರಾಷ್ಟ್ರೀಯ ಸೇವಾ ಯೋಜನೆ, ಎನ್‌ಎಸ್‌ಎಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 400 ಮಕ್ಕಳು ಸರ್ಕಾರದ 5 ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆ ಕುರಿತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 700 ಮಕ್ಕಳು ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕದೇವಿ ನೃತ್ಯ ನಾಟಕ ಪ್ರದರ್ಶಿಸಲಿದ್ದಾರೆ. ಅನಂತರ ಮಲ್ಲಕಂಬ, ಪ್ಯಾರಾಮೋಟಾರ್ ಪ್ರದರ್ಶನ ಹಾಗೂ ಮೋಟಾರ್ ಸೈಕಲ್ ಪ್ರದರ್ಶನಗಳನ್ನು ಹಮಿಕೊಳ್ಳಲಾಗಿದೆ.
ಬಿಗಿ ಬಂದೋಬಸ್ತ್ :
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪೆರೇಡ್ ಮೈದಾನಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೈದಾನದ ಸುತ್ತ 100 ಸಿಸಿ ಕ್ಯಾಮರಾ ಹಾಗೂ ಎರಡು ಬ್ಯಾಗೇಜ್ ಸ್ಕ್ಯಾನರ್‌ಗಳನ್ನು ಸ್ಥಾಪಿಸಲಾಗಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ಸ್ಥಳದಲ್ಲಿ ಆಂಬುಲೆನ್ಸ್ ಸ ವ್ಯವಸ್ಥೆ, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಗಾಯಾಳುಗಳಿಗೆ ಹಲವು ಆಸ್ಪತ್ರೆಗಳನ್ನು ಗುರುತಿಸಿ ಸಾಕಷ್ಟು ಸಂಖ್ಯೆಯ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.
ಪ್ರವೇಶ ದ್ವಾರ :
ಸ್ವಾತಂತ್ರ್ಯ ದಿನಾಚರಣೆ ವೀಕ್ಷಣೆಗೆ ಆಗಮಿಸುವ ಅತಿ ಗಣ್ಯ, ಗಣ್ಯ, ಇತರ ಆಹ್ವಾನಿತರು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಮಾಡಲಾಗಿದೆ. ಅತಿ ಗಣ್ಯ, ಗಣ್ಯವ್ಯಕ್ತಿಗಳು ಹಾಗೂ ರಕ್ಷಣಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳು ಜಿ-2 ಪ್ರವೇಶ ದ್ವಾರದ ಮೂಲಕ ಆಗಮಿಸಬೇಕಾಗಿದೆ.
ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಡಿಜಿ, ಐಜಿ, ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಜಿ-3 ಪ್ರವೇಶ ದ್ವಾರದ ಮೂಲಕ ಆಗಮಿಸಬೇಕಿದೆ. ಸ್ವಾತಂತ್ರ್ಯ ಹೋರಾಟಗಾರರು, ಪತ್ರಿಕಾ ಪ್ರತಿನಿಧಿಗಳು ಹಾಗೂ ಇಲಾಖೆಯ ಇತರೆ ಅಧಿಕಾರಿಗಳಿಗೆ ಜಿ-4 ಮತ್ತು ಸಾರ್ವಜನಿಕರಿಗೆ ಜಿ-5 ಪ್ರವೇಶ ದ್ವಾರ ನಿಗದಿಪಡಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.