ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಸಮೀಪ ಇರುವ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟ ಪ್ರಕರಣದಲ್ಲಿ ಚಿಕಿತ್ಸೆ ಫಲಿಸದೆ ಇಂದು ಒಂದೇ ದಿನ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಮೂಲಕ ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಮೃತರನ್ನು ಅಕ್ಷಯ ತೋಪಡೆ, ದೀಪಕ್ ಮುನವಳ್ಳಿ, ಸುದರ್ಶನ ಬನೋಶಿ, ಬೈಲಹೊಂಗಲ ತಾಲೂಕಿನ ಅರವಳ್ಳಿ ನಿವಾಸಿ ಮಂಜುನಾಥ ಮಡಿವಾಳಪ್ಪ ಕಾಜಗಾರ್, ಗೋಕಾಕ್ ತಾಲೂಕಿನ ಗೊಡಚಿನಮಲ್ಕಿ ಗ್ರಾಮದ ಭರತೇಶ ಸಾರವಾಡಿ, ಅಥಣಿ ಪಟ್ಟಣದ ತೇರದಾಳ ನಿವಾಸಿ ಮಂಜುನಾಥ ತೇರದಾಳ ಹಾಗೂ ಬಾಗಲಕೋಟೆ ಜಿಲ್ಲೆಯ ಮರೆಗುದ್ದಿ ಗ್ರಾಮದ ಗುರುಪಾದಪ್ಪ ತಮ್ಮನ್ನವರ್ ಎಂದು ಗುರುತಿಸಲಾಗಿದೆ.
ವಿಕ್ರಮ ಇನಾಮದಾರ್ ಅವರಿಗೆ ಸೇರಿದ ಕಾರ್ಖಾನೆಯಲ್ಲಿ ಬುಧವಾರ ವಾಲ್ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಬಾಯ್ಲರ್ ಸ್ಫೋಟಗೊಂಡಿದ್ದು, ಕುದಿಯುತ್ತಿದ್ದ ಕಬ್ಬಿನ ಹಾಲು ಕಾರ್ಮಿಕರ ಮೈಮೇಲೆ ಬಿದ್ದ ಪರಿಣಾಮ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯಲ್ಲಿ ಸ್ಥಳದಲ್ಲೇ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ನಾಲ್ವರು ಕಾರ್ಮಿಕರು ಕೊನೆಯುಸಿರೆಳೆದಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮೃತ ಕಾರ್ಮಿಕರ ಕುಟುಂಬಸ್ಥರು ರಾಜ್ಯ ಸರ್ಕಾರ ಹಾಗೂ ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆಯಿಂದ ಯಾವುದೇ ಸ್ಪಂದನೆ ಇಲ್ಲ, ಸರ್ಕಾರದಿಂದಲೂ ಪರಿಹಾರ ಘೋಷಣೆ ಆಗಿಲ್ಲ ಎಂದು ಆರೋಪಿಸಿ, ನ್ಯಾಯ ಹಾಗೂ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
