ಬೆಂಗಳೂರು,ಆ.14-ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಭಾರಿ ಮಳೆಯಾಗುವ ಮುನ್ಸೂಚನೆಗಳಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಗುಡುಗು, ಮಿಂಚು ಹಾಗೂ ಜೋರಾದ ಗಾಳಿ ಸಹಿತ ಚದುರಿದಂತೆ ವ್ಯಾಪಕ ಪ್ರಮಾಣದ ಮಳೆಯಾಗಲಿದೆ.
ಕೆಲವೆಡೆ ಭಾರಿ ಮತ್ತು ಅತಿ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ಮಾಡಲಾಗಿದೆ.
ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಆಧರಿಸಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಅರ್ಕಾವತಿ, ಪಾಲಾರ್, ಪೊನ್ನಯ್ಯರ್, ಪೆನ್ನಾರ್ ಮೇಲ್ದಂಡೆ , ಶಿಂಷಾ, ವೇದಾವತಿ, ಕಾವೇರಿ ಹಾಗೂ ಅದರ ಉಪ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಧೋನಿ ನದಿಯು ವಿಜಯಪುರ ಜಿಲ್ಲೆಯಲ್ಲಿ ಪ್ರವಾಹದ ಮಟ್ಟ ಮೀರಿ ಹರಿಯುವುದರಿಂದ ನದಿಗಳ ತೀರ ಪ್ರದೇಶದ ಜನವಸತಿಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಆಗಸ್ಟ್ 16 ಮತ್ತು 17ರಂದು ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಅನಂತರ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ಕರಾವಳಿ ಮತ್ತು ಕರಾವಳಿಗೆ ಹೊಂದಿಕೊಂಡಿರುವ ಮಲೆನಾಡು ಜಿಲ್ಲೆಗಳಲ್ಲೂ ಗುಡುಗು, ಮಿಂಚು ಸಹಿತ ಚದುರಿದಂತೆ ವ್ಯಾಪಕವಾದ ಮಳೆಯಾಗುವ ಸಾಧ್ಯತೆಗಳಿವೆ. ಅಲ್ಲಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.
ಇಂದಿನಿಂದ ಮೂರು ದಿನಗಳ ಕಾಲ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕ ಪ್ರಮಾಣದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ಭಾರಿ ಮಳೆಯಾಗಬಹುದು ಎಂದು ತಿಳಿಸಲಾಗಿದೆ.