ಬೆಂಗಳೂರು,ಆ.15- ಭಾರತದ 78ನೇ ಸ್ವತಂತ್ರ್ಯ ದಿನಾಚರಣೆ ಅಂಗವಾಗಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಪಕ್ಷದ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ದೇಶದ ಸ್ವತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಕಾಂಗ್ರೆಸ್ ಪಕ್ಷವನ್ನು ಅನೇಕ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಪ್ರಶ್ನಿಸುತ್ತಿವೆ. ಅಂದು ಬ್ರಿಟಿಷರ ಪರವಾಗಿ ನಿಂತು ಭಾರತೀಯರ ವಿರುದ್ಧ ಷಡ್ಯಂತ್ರ ರೂಪಿಸಿದವರನ್ನು ಇಂದು ಧಿಕ್ಕರಿಸಬೇಕಿದೆ.
ಶ್ಯಾಂಪ್ರಸಾದ್ ಮುಖರ್ಜಿ ಅವರ ಕ್ವಿಟ್ ಇಂಡಿಯಾ ಚಳವಳಿಯನ್ನು ಹತ್ತಿಕ್ಕುವಂತೆ ಬ್ರಿಟಿಷರಿಗೆ ಪತ್ರ ಬರೆದವರನ್ನೂ ಸ್ಮರಿಸಬೇಕಿದೆ. ಇಂತಹ ದೇಶದ್ರೋಹಿಗಳನ್ನು ಪೂಜಿಸುವವರು ಅಧಿಕಾರ ನಡೆಸುತ್ತಾ ನಮಗೆ ದೇಶಭಕ್ತಿಯ ಪಾಠ ಮಾಡುತ್ತಿರುವುದು ದೊಡ್ಡ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ಭಾರತ ಹೇಗಿತ್ತು, ಈಗ ಹೇಗಿದೆ ಎಂದು ಆತಾವಲೋಕನ ಮಾಡಿಕೊಳ್ಳಬೇಕಿದೆ. ಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿದರೆ ಸಾಲದು. ಇತಿಹಾಸವನ್ನು ತಿಳಿದು ಸ್ವಾತಂತ್ರ್ಯ ತಂದುಕೊಟ್ಟ ಎಲ್ಲಾ ಹಿರಿಯರ ಕೊಡುಗೆಗಳನ್ನು ಸರಿಸಬೇಕಿದೆ. ಸ್ವಾತಂತ್ರ್ಯ ಎಂದರೆ ಬೆಲೆ ಕಟ್ಟಿ ಪಡೆಯುವ ವಸ್ತುವಲ್ಲ. ಅದು ಜೀವನದ ಉಸಿರು ಎಂದು ಮಹಾತ್ಮ ಗಾಂಧೀಜಿ ಹೇಳಿಕೆಯನ್ನು ಉಲ್ಲೇಖಿಸಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಸ್ವಾತಂತ್ರ್ಯಕ್ಕೆ ಹೋರಾಡಿ, ಪ್ರಜಾಪ್ರಭುತ್ವವನ್ನು ರಕ್ಷಿಸಿದ ಪಕ್ಷದ ಸದಸ್ಯರಾಗಿರುವುದೇ ನಮ ಭಾಗ್ಯ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಮಹನೀಯರನ್ನು ಸರಿಸಿದ ಡಿ.ಕೆ.ಶಿವಕುಮಾರ್, ಸುಮಾರು 6.50 ಲಕ್ಷ ಜನ ಕಾಂಗ್ರೆಸಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ. ಪ್ರತಿ ಹಂತದಲ್ಲೂ ನಾವು ಅವರನ್ನು ನೆನಪಿಸಿಕೊಳ್ಳಬೇಕು. ನಕಲಿ ದೇಶಭಕ್ತರು ಅಂದು ದೇಶ ಮಾರಾಟ ಮಾಡಲು ಯತ್ನಿಸಿದರೂ ಕಾಂಗ್ರೆಸಿಗರು ಅದಕ್ಕೆ ಅವಕಾಶ ನೀಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ದೇಶಕ್ಕೆ ದೊಡ್ಡ ಇತಿಹಾಸವಿದೆ. ಐಕ್ಯತೆ ಮತ್ತು ಶಾಂತಿಗೆ ಒಟ್ಟಾಗಿ ಶ್ರಮಿಸಿದ್ದೇವೆ. ಅನೇಕ ಸಮಸ್ಯೆಗಳು ಬಂದಾಗ ದೇಶ ರಕ್ಷಣೆಗಾಗಿ ಸ್ವಾತಂತ್ರ್ಯ ರಕ್ಷಣೆಯ ಹೋರಾಟಗಳನ್ನು ಮೆಲುಕು ಹಾಕಿಕೊಂಡು ಯುವ ಪೀಳಿಗೆಯನ್ನು ಪ್ರೇರೇಪಿಸುತ್ತೇವೆ. ಸ್ವತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನ, ಕೊಡುಗೆಗಳನ್ನು ಮುಂದಿನ ಸಮುದಾಯಕ್ಕೆ ತಿಳಿಸಬೇಕಿದೆ ಎಂದರು.
ಸ್ವಾತಂತ್ರ್ಯ ಎಂದರೆ ಸಮಾಜದ ಎಲ್ಲಾ ವರ್ಗಗಳಿಗೂ ಹಸಿವು, ಬಡತನ, ಕತ್ತಲೆ, ಸಂಕೋಲೆ, ನಿರುದ್ಯೋಗದಿಂದ ಸ್ವತಂತ್ರ್ಯ ಸಿಕ್ಕಾಗ ಮಾತ್ರ ನಿಜವಾದ ಸ್ವಾತಂತ್ರ್ಯ ದೊರೆತಂತಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷವಾಕ್ಯ ನೀಡಿದ್ದಾರೆ. ರಾಜ್ಯಸರ್ಕಾರದ 5 ಗ್ಯಾರಂಟಿಗಳು ಇಂತಹ ಗಂಭೀರ ಸಮಸ್ಯೆಗಳ ನಿವಾರಣೆಗೆ ಸಹಾಯಕವಾಗಲಿವೆ ಎಂದು ಹೇಳಿದರು.
ಇಡೀ ದೇಶವೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಗಮನಿಸುತ್ತಿದೆ. ಹಸಿವು ಮುಕ್ತ ಸಮಾಜ ನಿರ್ಮಾಣ ನಮ ಸರ್ಕಾರದ ಗುರಿ. ಕಾಂಗ್ರೆಸ್ ಸರ್ಕಾರ ಎಲ್ಲಾ ವರ್ಗದ ಜನರಿಗೂ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸಿದೆ. ಜವಹರಲಾಲ್ ನೆಹರೂ, ಇಂದಿರಾಗಾಂಧಿ, ಮನಮೋಹನ್‌ಸಿಂಗ್ ಸೇರಿದಂತೆ ಕಾಂಗ್ರೆಸ್‌ನ ಎಲ್ಲರ ಕಾಲಾವಧಿಯಲ್ಲೂ ಸಮಷ್ಟಿ ವರ್ಗದ ಹಿತದೃಷ್ಟಿಯನ್ನು ಗುರಿಯಾಗಿಸಿಕೊಂಡೇ ಯೋಜನೆಗಳನ್ನು ರೂಪಿಸಿದ್ದೇವೆ. ಬಡವರಿಗೆ ಭೂಮಿ, ಕಲಿಕೆ, ಪಂಚಾಯಿತಿಗಳ ಅಭಿವೃದ್ಧಿ, ನಿರುದ್ಯೋಗ ನಿವಾರಣೆ, ಮನ್ರೇಗಾ, ಬಿಸಿಯೂಟ, ಆಹಾರ ಭದ್ರತೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರೂ ಅದು ಎಲ್ಲಾ ವರ್ಗಗಳಿಗೂ ಅನುಕೂಲವಾಗಿತ್ತು. ಇಂತಹ ಕಾರ್ಯಕ್ರಮಗಳನ್ನು ಉಳಿಸಲು, ಮುಂದುವರೆಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು.
ಯಾವುದೇ ಕಾರಣಕ್ಕೂ ಪಂಚಖಾತ್ರಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ದೇಶಕ್ಕೆ ಇಲ್ಲಿಂದಲೇ ಮಾದರಿಯ ಸಂದೇಶ ನೀಡಲಾಗುವುದು. ಮಹಾತಗಾಂಧೀಜಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ 100 ವರ್ಷವಾಗಿರುವ ಹಿನ್ನೆಲೆಯಲ್ಲಿ ಇಡೀ ವರ್ಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಎಲ್ಲರೂ ಅದರಲ್ಲಿ ಭಾಗವಹಿಸಬೇಕು ಎಂದು ಕರೆನೀಡಿದರು.