Friday, September 20, 2024
Homeರಾಜ್ಯಮಾಣಿಕ್ ಷಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಹೇಗಿತ್ತು ನೋಡಿ

ಮಾಣಿಕ್ ಷಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಹೇಗಿತ್ತು ನೋಡಿ

ಬೆಂಗಳೂರು,ಆ.15- ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿಂದು ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಅಂಗಾಂಗ ದಾನ ಮಾಡಿರುವ 65 ಕುಟುಂಬದ ಸದಸ್ಯರಿಗೆ ಪ್ರಶಂಸಾ ಪತ್ರ ನೀಡಿಕೆ, ರಾಜ್ಯಸರ್ಕಾರದ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ, ಮೈ ನವಿರೇಳಿಸುವ ಸೇನಾ ಯೋಧರ ಸಾಹಸಮಯ ಬೈಕ್ ಪ್ರದರ್ಶನ, ಸ್ವಾತಂತ್ರ್ಯ ಹೋರಾಟ ನೆನಪಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಧ್ವಜಾರೋಹಣ ಮಾಡಿ ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸಿದ ಬಳಿಕ ಪೊಲೀಸ್ ತಂಡದವರಿಂದ ರಾಷ್ಟ್ರಗೀತೆ ನುಡಿಸಲಾಯಿತು.ತೆರೆದ ಜೀಪಿನಲ್ಲಿ ಮುಖ್ಯಮಂತ್ರಿ ಪರೇಡ್ ಪರಿವೀಕ್ಷಣೆ ಮತ್ತು ಗೌರವರಕ್ಷೆ ಸ್ವೀಕಾರದ ನಂತರ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವ ದಿನದ ಸಂದೇಶ ನೀಡಿದರು.ಬಳಿಕ ಮಂಜುನಾಥ್ ಮತ್ತು ತಂಡದವರು ರಾಷ್ಟ್ರಗೀತೆಯನ್ನು ಹಾಡಿದರು. ಆನಂತರ ಇದೇ ತಂಡದಿಂದ ನಾಡಗೀತೆ ಮತ್ತು ರೈತಗೀತೆಯನ್ನು ಹಾಡಲಾಯಿತು.

ಪೆರೇಡ್ ಕಮಾಂಡರ್ ಗೋಪಾಲರೆಡ್ಡಿ ಹಾಗೂ ಡೆಪ್ಯುಟಿ ಕಮಾಂಡರ್ ಹರೀಶ್ ಹೆಚ್.ಎನ್.ನೇತೃತ್ವದಲ್ಲಿ ಗಡಿ ಭದ್ರತಾ ಪಡೆ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಕೈಗಾರಿಕಾ ಭದ್ರತಾ ಪಡೆ, ಗೋವಾ ಪೊಲೀಸ್, ಶ್ವಾನದಳ, ಅಬಕಾರಿ, ಸಂಚಾರ ಪೊಲೀಸ್, ಅಗ್ನಿ ಶಾಮಕ ದಳ, ಗೃಹ ರಕ್ಷಕ ದಳ, ಎನ್ಸಿಸಿ, ರಾಷ್ಟ್ರೀಯ ಮಿಲಿಟರಿ ಶಾಲೆ, ಆಮಿರ್ ಪಬ್ಲಿಕ್ ಶಾಲೆ, ಪೊಲೀಸ್ ಪಬ್ಲಿಕ್ ಶಾಲೆ, ಸಮರ್ಥನಂ ಹಾಗೂ ರಮಣಶ್ರೀ ಸಂಸ್ಥೆಗಳ ವಿಕಲಚೇತನ ಮಕ್ಕಳು ಸೇರಿದಂತೆ ವಿವಿಧ ಶಾಲಾ ತುಕಡಿಗಳಿಂದ ಚಿತ್ತಾಕರ್ಷಕ ಪಥಸಂಚಲನ ನಡೆಯಿತು.

ಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು :
ಸರ್ಕಾರದ ಐದು ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಕುರಿತು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ 400 ವಿದ್ಯಾರ್ಥಿಗಳು ನಂದಿಧ್ವಜ, ವೀರಗಾಸೆ, ಡೊಳ್ಳುಕುಣಿತ, ರಾಷ್ಟ್ರಧ್ವಜ, ನಾಡಧ್ವಜ ಹಿಡಿದು ವಿವಿಧ ವೇಷಭೂಷಣಗಳನ್ನು ತೊಟ್ಟು ಪ್ರದರ್ಶನ ನೀಡಿದರು.ಯಲಹಂಕದ ಸರ್ಕಾರಿ ಪ್ರೌಢಶಾಲೆಯ 750 ವಿದ್ಯಾರ್ಥಿಗಳು ಜಯ ಭಾರತಿ ಪ್ರದರ್ಶನವನ್ನು ಮನಸೂರೆಗೊಳ್ಳುವಂತೆ ಪ್ರದರ್ಶಿಸಿದರು.

ವಿವಿಧ ವೇಷಭೂಷಣ ತೊಟ್ಟು ಸ್ವಾತಂತ್ರ್ಯ ಹೋರಾಟಗಾರರ ಫಲಕ ಹಾಗೂ ರಾಷ್ಟ್ರಧ್ವಜವನ್ನು ಹಿಡಿದು ಕೋಟೆ ಮಾದರಿಯ ಜೊತೆಗೆ ನೀಡಿದಂತಹ ಪ್ರದರ್ಶನ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವಂತಿತ್ತು. ಬಿಬಿಎಂಪಿ ಪಿಳ್ಳಣ್ಣ ಗಾರ್ಡನ್ ಸಂಯುಕ್ತ ಪ.ಪೂ.ಕಾಲೇಜಿನ 700 ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ ದೇವಿ ಕುರಿತ ಸಮೂಹ ನೃತ್ಯಗಳು, ರೂಪಕಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.

ಮರಾಠ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ ಸೆಂಟರಿನ ಸಿಪಾಯಿಗಳು ನಡೆಸಿದ ಮಲ್ಲಕಂಬ ಪ್ರದರ್ಶನದ ವಿವಿಧ ಭಂಗಿಗಳು ರೋಮಾಂಚನಗೊಳಿಸಿದವು. ಅಲ್ಲದೆ, ಸೇನಾ ಯೋಧರು ಪ್ಯಾರಾ ಮೋಟರ್ನಲ್ಲಿ ಆಕಾಶದಲ್ಲಿ ಹಾರಾಡುತ್ತಾ ರಾಷ್ಟ್ರಧ್ವಜವನ್ನು ಪ್ರದರ್ಶಿಸಿದರು. ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಶ್ವೇತ ಅಶ್ವ ಹೆಸರಿನ ಸೇನಾ ಯೋಧರ ಬೈಕ್ ಪ್ರದರ್ಶನ ನಿಬ್ಬೆರಗಾಗುವಂತೆ ಮಾಡಿತು.

ಮಿಲಿಟರಿ ಪೊಲೀಸ್ ಸೆಂಟರ್ ಮತ್ತು ಶಾಲೆಯವರಿಂದ ಮೈ ನವಿರೇಳಿಸುವ ಮೋಟಾರ್ ಸೈಕಲ್ ಪ್ರದರ್ಶನಗಳು ನೆರೆದ ಜನರಲ್ಲಿ ಸಂಚಲನ ಉಂಟು ಮಾಡಿದವು.ಚಲಿಸುವ ಬೈಕಿನ ಮೇಲೆ ವಿವಿಧ ಭಂಗಿಗಳಲ್ಲಿ ಶಿಸ್ತುಬದ್ಧವಾಗಿ ನೀಡಿದ ಸಾಹಸಮಯ ಪ್ರದರ್ಶನ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಿತು.

ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಗಾಂಗ ದಾನ ಮಾಡಿದ ಕುಟುಂಬದ ಸದಸ್ಯರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಅನಂತರ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ತಂಡಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

RELATED ARTICLES

Latest News