Saturday, November 23, 2024
Homeರಾಜಕೀಯ | Politicsಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಯೋಗೇಶ್ವರ್- ಶಿವಕುಮಾರ್

ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಯೋಗೇಶ್ವರ್- ಶಿವಕುಮಾರ್

ಚನ್ನಪಟ್ಟಣ,ಆ.15– ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚನ್ನಪಟ್ಟಣದಲ್ಲಿಂದು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಪೊಲೀಸರು, ಭದ್ರತಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ಅನಂತರ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸೇರಿದಂತೆ ವಿವಿಧ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಹಾಗೂ ಇತರರು ಭಾಗವಹಿಸಿದ್ದರು.

ಇತ್ತೀಚೆಗೆ ಪರಸ್ಪರ ರಾಜಕೀಯ ಪ್ರತಿಸ್ಪರ್ಧಿಗಳಾಗಿ ಗುರುತಿಸಿಕೊಂಡಿದ್ದ ಸಿ.ಪಿ.ಯೋಗೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದ್ದು, ಅಲ್ಲಿಂದ ಸ್ಪರ್ಧಿಸಲು ಸಿ.ಪಿ.ಯೋಗೇಶ್ವರ್ ಬಿಜೆಪಿ ಟಿಕೆಟ್ ಗಿಟ್ಟಿಸಿ ಎನ್ಡಿಎ ಅಭ್ಯರ್ಥಿಯಾಗಲು ಲಾಬಿ ನಡೆಸಿದ್ದರು.

ಒಂದು ವೇಳೆ ಅದು ಸಾಧ್ಯವಾಗದೇ ಹೋದರೆ ಕಾಂಗ್ರೆಸ್ ಸೇರ್ಪಡೆಯಾಗಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ನಾಯಕರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಧ್ವಜಾರೋಹಣ ನಡೆಸಿದ್ದರಿಂದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಚ್.ಡಿ.ಕುಮಾರಸ್ವಾಮಿಯವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 150 ಕೋಟಿ ರೂ.ಗಳ ಅನುದಾನಕ್ಕೆ ನಿನ್ನೆಯಷ್ಟೇ ಮಂಜೂರಾತಿ ನೀಡಿದ್ದಾರೆ. ಇದರಲ್ಲಿ ಕ್ಷೇತ್ರದ ಸಮಾಜದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗುವುದು. ಈ ಹಿಂದೆ ಪ್ರಗತಿಯಲ್ಲಿದ್ದ 105 ಕಾಮಗಾರಿಗಳನ್ನು ಮುಂದುವರೆಸಲಾಗುವುದು ಎಂದರು.

ತಾವು ನಡೆಸಿದ ಜನತಾದರ್ಶನದಲ್ಲಿ 22 ಸಾವಿರ ಅರ್ಜಿಗಳು ಸ್ವೀಕಾರವಾಗಿವೆ. ಅವುಗಳಿಗೆ ಪರಿಹಾರ ಒದಗಿಸಲಾಗುವುದು. ವನ್ಯಜೀವಿಗಳಿಗಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗುತ್ತಿದ್ದು, ಅದನ್ನು ತಡೆಯಲು 65 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಮನೆ ಹಾಗೂ ನಿವೇಶನಕ್ಕಾಗಿ 7 ಸಾವಿರ ಅರ್ಜಿಗಳು ಬಂದಿದ್ದು, 117 ಎಕರೆ ಜಾಗ ಗುರಿತಿಸಿ 5 ಸಾವಿರ ನಿವೇಶನ ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲೆಯ ಪ್ರತಿನಿಧಿಯಾಗಿ ಚನ್ನಪಟ್ಟಣದ ಮನೆಮಗನಾಗಿ ಇಲ್ಲಿಗೆ ಬಂದು ಧ್ವಜಾರೋಹಣ ಮಾಡಿದ್ದೇನೆ. ನಿಮ ಸಮಸ್ಯೆಗಳಿಗೆ ಪರಿಹಾರ ದೊರಕಿಸುವುದುನನ್ನ ಆದ್ಯತೆ. ಸ್ವತಂತ್ರ್ಯ ದಿನಾಚರಣೆಯಂದು ಬಂದು ಬಾವುಟ ಹಾರಿಸಿ ಅರ್ಧಕ್ಕೆ ಹೋಗುವುದು ಧ್ವಜಕ್ಕೆ ಮಾಡಿದ ಅಪಮಾನ. ಅದೇ ರೀತಿ ಮತ ಹಾಕಿ ಆಯ್ಕೆ ಮಾಡಿದ ಜನರನ್ನು ಅರ್ಧಕ್ಕೆ ಕೈ ಬಿಟ್ಟು ಹೋಗುವುದೂ ಕೂಡ ಜನರಿಗೆ ಮಾಡುವ ಅಪಮಾನ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ನಾನು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ಅಭಿವೃದ್ಧಿ ಏನು ಎಂದು ತಿಳಿಸಲು ಬಂದಿದ್ದೇನೆ. ಹಿಂದಿನ ಶಾಸಕರು ಏನು ಮಾಡಿದರು ಎಂದು ಚರ್ಚಿಸಲು ಬಯಸುವುದಿಲ್ಲ. ಜನರ ಬದುಕಿಗೆ ನೆರವಾಗುವುದು ನಮ ಆದ್ಯತೆ ಎಂದು ಹೇಳಿದರು.

RELATED ARTICLES

Latest News