Sunday, October 6, 2024
Homeಇದೀಗ ಬಂದ ಸುದ್ದಿBIG NEWS : ಸಿಎಂ ಸಿದ್ದರಾಮಯ್ಯ ಸಂಕಷ್ಟ : ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ರಾಜ್ಯಪಾಲರು

BIG NEWS : ಸಿಎಂ ಸಿದ್ದರಾಮಯ್ಯ ಸಂಕಷ್ಟ : ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ರಾಜ್ಯಪಾಲರು

ಬೆಂಗಳೂರು,ಆ.17- ಮಹತ್ವದ ಬೆಳವಣಿಗೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಅಕ್ರಮ ನಿವೇಶನ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ನೀಡಿದ್ದಾರೆ.

ರಾಜ್ಯದ ಇತಿಹಾಸದಲ್ಲೇ ಹಾಲಿ ಮುಖ್ಯಮಂತ್ರಿ ವಿರುದ್ಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಸಮ್ಮತಿಸಿದ ಎರಡನೇ ಪ್ರಕರಣ ಇದಾಗಿದೆ.ಈ ಹಿಂದೆ ಅಕ್ರಮ ಡಿ ನೋಟಿಫಿಕೇಶನ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ 2011 ರಲ್ಲಿ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್‍ರವರು ಪ್ರಾಸಿಕ್ಯೂಶನ್‍ಗೆ ಅನುಮತಿ ನೀಡಿದ್ದರು.

ಸಿಎಂ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಮಿತಿ ಸೆಕ್ಷನ್ 218 ರಡಿ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದ್ದಾರೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಅವರು ಹೊರಡಿಸಿರುವ ನೋಟಿಸ್‍ನಲ್ಲಿ ತಿಳಿಸಿದ್ದಾರೆ.

ಇದೀಗ ರಾಜ್ಯಪಾಲ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ಸಿಎಂ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿರುವುದರಿಂದ ಸಿದ್ದರಾಮಯ್ಯಗೆ ಭಾರಿ ಕಾನೂನಿನ ಸಂಕಷ್ಟ ಎದುರಾಗಿದೆ.ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಂದಿನ ಕಾನೂನು ಹೊರಾಟ ನಡೆಸುವ ಕುರಿತು ತಮ್ಮ ಸಂಪುಟದ ಸಹದ್ಯೋಗಿಗಳು ಹಾಗೂ ಕಾನೂನು ಸಲಹೆಗಾರ ಪೊನ್ನಣ್ಣ ಸೇರಿದಂತೆ ಮತ್ತಿತರರ ಜೊತೆ ಸಿದ್ದರಾಮಯ್ಯನವರು ಸಭೆ ನಡೆಸಿದ್ದಾರೆ.

ಇದರ ಬೆನ್ನಲ್ಲೇ ಸಂಜೆ 5 ಗಂಟೆಗೆ ವಿಶೇಷ ಸಚಿವ ಸಂಪುಟ ಸಭೆ ಕರೆದಿರುವುದು ಕೂಡ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಇದೀಗ ಸರ್ಕಾರ Vs ರಾಜಭವನದ ನಡುವೆ ಕಾನೂನಿನ ಸಂಘರ್ಷ ಏರ್ಪಟ್ಟಿದ್ದು, ರಾಜ್ಯಪಾಲರ ತೀರ್ಮಾನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸರ್ಕಾರ ಸಜ್ಜಾಗಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‍ಗೆ ಅನುಮತಿ ವಿಚಾರವಾಗಿ ಮುಖ್ಯ ಕಾರ್ಯದರ್ಶಿ ಶಾಲಿನ್ ರಜನೀಶ್, ಎಸಿಎಸ್ ಅತೀಕ್‍ಗೆ ನೋಟಿಸ್ ನೀಡಲಾಗಿದೆ. ರಾಜಭವನದಿಂದ ನೋಟಿಸ್ ರವಾನೆಯಾಗಿದೆ. ಮುಡಾ ಪ್ರಕರಣದ ಮೂವರು ದೂರುದಾರರಾದ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್‍ಗೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರದೀಪ್ ಈಗಾಗಲೇ ರಾಜಭವನದಲ್ಲಿ ನೋಟಿಸ್ ಸ್ವೀಕರಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್ ಐಆರ್ ದಾಖಲಾಗುವ ಸಾಧ್ಯತೆಯಿದೆ.ಹೀಗಾದರೆ ರಾಜಕೀಯ ಮತ್ತು ಕಾನೂನಾತ್ಮಕವಾಗಿ ಸರ್ಕಾರ ಇದನ್ನು ಒಂದು ಕಡೆಯಲ್ಲಿ ಎದುರಿಸಲಿದೆ. ಅದರ ಜೊತೆಗೆ ನೈತಿಕವಾಗಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಆಗ್ರಹ ಪ್ರತಿಪಕ್ಷಗಳಿಂದ ಹೆಚ್ಚಾಗುತ್ತದೆ. ಹೀಗಾಗಿ ಮುಂದಿನ ರಾಜಕೀಯ ಬೆಳವಣಿಗೆಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ.

ಸಿದ್ದರಾಮಯ್ಯನವರು ಅ„ಕಾರ ದುರುಪಯೋಗಪಡಿಸಿಕೊಂಡು ಮುಡಾದಲ್ಲಿ ತಮ್ಮ ಪತ್ನಿ ಪಾರ್ವತಮ್ಮ ಹೆಸರಿನಲ್ಲಿ 14 ನಿವೇಶನಗಳನ್ನು ಪಡೆದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರಾದ ಟಿ.ಜೆ.ಅಬ್ರಹಾಂ ಮೈಸೂರು ಮೂಲದ ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್ ಎಂಬುವವರು ರಾಜ್ಯಪಾಲರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು. ಈ ದೂರುಗಳನ್ನು ಸುದೀರ್ಘವಾಗಿ ಪರಿಶೀಲಿಸಿ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ್ದ ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ನೀಡಿದ್ದಾರೆ.

ಸಿಎಂ ವಿರುದ್ಧ ದೂರು ನೀಡಿರುವ ಮೂವರಿಗೂ ರಾಜ್ಯಪಾಲರಿಂದ ದೂರವಾಣಿ ಕರೆ ಬಂದಿದ್ದು, ರಾಜಭವನಕ್ಕೆ ಬರುವಂತೆ ಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್‍ಗೆ ಸೂಚಿಸಲಾಗಿದೆ.ಸಿಎಂ ವಿರುದ್ಧ ನೀಡಿರುವ ಶೋಕಾಸ್ ನೋಟಿಸ್ ಅನ್ನು ಹಿಂಪಡೆಯಬೇಕೆಂದು ಸಚಿವ ಸಂಪುಟ ಸಭೆ ಒಂದು ಸಾಲಿನ ನಿರ್ಣಯವನ್ನು ಕೈಗೊಂಡು ರಾಜಭವನಕ್ಕೆ ಕಳುಹಿಸಿಕೊಟ್ಟಿತ್ತು.

ರಾಜ್ಯಪಾಲರು ನೀಡಿದ್ದ ಶೋಕಾಸ್ ನೋಟಿಸ್‍ಗೆ ಸುಮಾರು 60 ಪುಟಗಳ ಸುದೀರ್ಘ ಉತ್ತರವನ್ನು ಕಳುಹಿಸಿಕೊಡಲಾಗಿತ್ತು. ಆದರೆ ರಾಜ್ಯಪಾಲರು ಇದ್ಯಾವುದಕ್ಕೂ ಜಗ್ಗದೇ ಕಾನೂನಿನ ಪ್ರಕಾರವಾಗಿ ಸಿಎಂ ವಿರುದ್ಧ ತನಿಖೆಗೆ ಅಸ್ತು ಎಂದಿದ್ದಾರೆ.
ಕಳೆದ ಆ.15ರ ಸ್ವತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶಿಷ್ಟಾಚಾರದಂತೆ ಸಿಎಂ ಸಿದ್ದರಾಮಯ್ಯನವರು ರಾಜಭವನದಲ್ಲಿ ಚಹಾಕೂಟಕ್ಕೆ ತೆರಳಿದ್ದ ವೇಳೆಯೇ ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ನೀಡಲಿದ್ದಾರೆ ಎಂಬ ಸುಳಿವನ್ನು ಅಂದಾಜಿಸಿದ್ದರು ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?:
ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ 50-50 ಅನುಪಾತದಲ್ಲಿ 14 ಮೂಡಾ ಸೈಟ್‍ಗಳನ್ನು ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಎಂಬುವವರು ಇದರಲ್ಲಿ ಅಕ್ರಮ ಮಂಜೂರಾತಿ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಸಿಎಂ ಪತ್ನಿಗೆ 14 ನಿವೇಶನ ಮಂಜೂರಾದ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.

ದೇವನೂರು ಬಡಾವಣೆಯಲ್ಲಿ ಸಾವಿರಾರು ಸೈಟ್ ಇದ್ದರೂ ವಿಜಯನಗರದಲ್ಲಿ ಕೊಟ್ಟಿರುವುದು ಯಾಕೆ? ಇದು ಲಾಭದ ಉದ್ದೇಶ ಅಲ್ಲವೇ. ಈ ಹಿಂದಿನ ಮೂಡಾ ಆಯುಕ್ತ ನಟೇಶ್ ಈ ಆದೇಶ ಮಾಡಿದ್ದು, ಸಿಎಂ ಪತ್ನಿ ಆರ್ಥಿಕ ಲಾಭವನ್ನು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

RELATED ARTICLES

Latest News