ಬೆಂಗಳೂರು,ಆ.17- ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವುದರಿಂದ ಮುಂದಿನ ಯುದ್ಧ ಹೈಕೋರ್ಟ್‌ನಲ್ಲಿ ನಡೆಯಲಿದೆ ಎಂದು ದೂರುದಾರ ಟಿ.ಜೆ.ಅಬ್ರಹಾಂ ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಅನುಮತಿ ನೀಡಿರುವುದನ್ನು ಮುಖ್ಯಮಂತ್ರಿಯವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದಾರೆ. ಅನುಮತಿ ಏಕೆ ಕೊಡಬಾರದು ಎಂದು ನಾನು ವಾದಿಸಲಿದ್ದೇನೆ. ಹೀಗಾಗಿ ಮುಂದಿನ ಯುದ್ಧ ಹೈಕೋರ್ಟ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ನಾನು ಈಗಾಗಲೇ ಜನಪ್ರತಿನಿಧಿಗಳ ನ್ಯಾಯಾಲಯ ಸಂಖ್ಯೆ 82ರಲ್ಲಿ ಪ್ರಕರಣ ದಾಖಲಿಸಿದ್ದೇನೆ. ಅದರ ವಿಚಾರಣೆ ಈ ತಿಂಗಳ 21ರಂದು ನಡೆಯಲಿದ್ದು, ರಾಜ್ಯಪಾಲರು ಅನುಮತಿ ನೀಡಿರುವುದನ್ನು ನಾನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇನೆ ಎಂದು ಹೇಳಿದರು.
ಪ್ರಕರಣದ ತನಿಖೆಯಾಗಬೇಕು ಎಂದು ನ್ಯಾಯಾಲಯದ ಮುಂದೆ ಪ್ರಾರ್ಥನೆ ಮಾಡಿಕೊಂಡಿದ್ದೇನೆ. ನ್ಯಾಯಾಲಯ ಯಾವ ನಿರ್ದೇಶನ ನೀಡಲಿದೆ ಎಂದು ಕಾದುನೋಡಬೇಕಿದೆ. ಈ ಹಿಂದೆ ಯಡಿಯೂರಪ್ಪ ಪ್ರಕರಣದಲ್ಲಿ ಲೋಕಾಯುಕ್ತ ಮುಂದೆ ದೂರು ದಾಖಲಿಸಿದ ರೀತಿ ಬೇರೆ ಇತ್ತು. ಅದು ವಿಚಾರಣೆಯಾಗಬೇಕು ಎಂಬ ಕಾರಣಕ್ಕೆ ಸಲ್ಲಿಸಿದ್ದ ಅರ್ಜಿ.
ಈಗ ನಾನು ತನಿಖೆಗೆ ಮನವಿ ಮಾಡಿದ್ದೇನೆ. ಅದು ನ್ಯಾಯಾಲಯದ ಮುಂದಿದೆ. ರಾಜ್ಯಪಾಲರು ಅನುಮತಿ ನೀಡಿರುವುದರಿಂದ ನ್ಯಾಯಾಲಯದ ನಿರ್ದೇಶನಗಳು ಮಹತ್ವ ಪಡೆದುಕೊಳ್ಳುತ್ತವೆ ಎಂದರು.