ಬೆಂಗಳೂರು,ಆ.17- ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯನವರು ಹೈಕೋರ್ಟ್‌ನಲ್ಲಿ ಮೇಲನವಿ ಸಲ್ಲಿಸಿದರೆ, ಕೇವಿಯಟ್ ಹಾಕಲು ದೂರುದಾರರು ಮುಂದಾಗಿದ್ದಾರೆ.
ದೂರುದಾರ ಪ್ರದೀಪ್ ಅವರು ಈಗಾಗಲೇ ಹೈಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಲು ಸಜ್ಜಾಗಿದ್ದು, ರಾಜ್ಯಪಾಲರ ಅನುಮತಿಯನ್ನು ಪ್ರಶ್ನಿಸಿ ಸಿದ್ದರಾಮಯ್ಯನವರು ಮೇಲನವಿ ಸಲ್ಲಿಸಿದರೆ ತಮ ವಾದವನ್ನು ಪರಿಗಣಿಸದೇ ನಿರ್ಧಾರ ಮಾಡದಂತೆ ಮನವಿ ಮಾಡಲಿದ್ದಾರೆ.
ಯಾವುದೇ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿಗೆ ತಡೆಯಾಜ್ಞೆ ತರಲು ಮೇಲನವಿ ಸಲ್ಲಿಸಿದಾಗ ಅದಕ್ಕೆ ಪ್ರತಿಯಾಗಿ ದೂರುದಾರರು ತಮ ಮನವಿಯನ್ನು ಸಹ ಪರಿಗಣಿಸಿ ನಂತರವೇ ನ್ಯಾಯಾಲಯ ತೀರ್ಪು ನೀಡಬೇಕೆಂದು ಸಲ್ಲಿಸುವ ಮೇಲನವಿ ಅರ್ಜಿಯೇ ಕೇವಿಯಟ್ ಆಗಿದೆ.
ಇದೀಗ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರವರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಪರ ವಕೀಲರು ಹೈಕೋರ್ಟ್‌ನಲ್ಲಿ ಮೇಲನವಿ ಸಲ್ಲಿಸಲು ಮುಂದಾಗಿದ್ದಾರೆ.
ಈ ಬೆಳವಣಿಗೆಗಳ ನಡುವೆಯೇ ದೂರುದಾರ ಪ್ರದೀಪ್ ಕೂಡ ಕೇವಿಯಟ್ ಮೂಲಕ ಕಾನೂನು ಹೋರಾಟ ನಡೆಸಲು ಸಜ್ಜಾಗಿದ್ದಾರೆ.