Saturday, November 23, 2024
Homeಬೆಂಗಳೂರುಫಲಪುಷ್ಪ ಪ್ರದರ್ಶನಕ್ಕೆ ನಾಳೆ ತೆರೆ, 7ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಣೆ

ಫಲಪುಷ್ಪ ಪ್ರದರ್ಶನಕ್ಕೆ ನಾಳೆ ತೆರೆ, 7ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಣೆ

ಬೆಂಗಳೂರು, ಆ.18- ವಿಶ್ವವಿಖ್ಯಾತ ಲಾಲ್ಬಾಗ್ನ ಸ್ವಾತಂತ್ರ್ಯೋತ್ಸವದ 216ನೇ ಫಲಪುಷ್ಪ ಪ್ರದರ್ಶನಕ್ಕೆ ನಾಳೆ ತೆರೆ ಬೀಳಲಿದೆ. ಆಗಸ್ಟ್ 8ರಿಂದ ಆರಂಭಗೊಂಡಿರುವ ಈ ಪ್ರದರ್ಶನ ನಾಳೆ ಮುಗಿಯಲಿದೆ.

ಕಳೆದ ಹತ್ತು ದಿನಗಳಿಂದ ಲಕ್ಷಾಂತರ ವೀಕ್ಷಕರು ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ಕೊಟ್ಟಿದ್ದಾರೆ. ಮಕ್ಕಳಿಂದ ವೃದ್ಧರವರೆಗೂ ಭೇಟಿ ನೀಡಿ ಹೂವಿನ ಸೌಂದರ್ಯವನ್ನು ಕಣ್ಣು ತುಂಬಿಕೊಂಡಿದ್ದಾರೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಸಹ ಭೇಟಿ ನೀಡಿದ್ದಾರೆ. ಅಲ್ಲದೆ, ದೇಶ, ವಿದೇಶಗಳ ಪ್ರವಾಸಿಗರು ಭೇಟಿ ನೀಡಿ ವೀಕ್ಷಿಸಿದ್ದಾರೆ.

ರಜಾ ದಿನಗಳಲ್ಲಿ ಲಾಲ್ಬಾಗ್ಗೆ ವೀಕ್ಷಕರ ಮಹಾಪೂರವೇ ಹರಿದು ಬಂದಿದೆ. ಇಂದು ಭಾನುವಾರವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸಿದ್ದರು. ಪ್ರತಿ ವರ್ಷ ಒಂದೊಂದು ವಿಶೇಷತೆಗಳೊಂದಿಗೆ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ಲಾಲ್ಬಾಗಿನ ಗಾಜಿನ ಮನೆಯಲ್ಲಿ ಹಮಿಕೊಳ್ಳುತ್ತದೆ. ಈ ಬಾರಿ ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ವಿಷಯಾಧರಿತ ಫಲಪುಷ್ಪ ಪ್ರದರ್ಶನ ಹಮಿಕೊಳ್ಳಲಾಗಿತ್ತು.

ಹೂವಿನಿಂದ ನಿರ್ಮಿಸಲಾಗಿದ್ದ ಹಳೆಯ ಸಂಸತ್ ಭವನದ ಮಾದರಿ, ಅಂಬೇಡ್ಕರ್ ವಿಷಯಾಧರಿತ ಮಾದರಿಗಳು ನೋಡುಗರ ಮನೆ ಸೂರೆಗೊಂಡವು. ಅಲ್ಲದೆ, ಸಿಂಬಿಡಿಯಂ, ಆರ್ಕಿಡ್, ಬ್ರೋಮಿಲಿಯಾಸ್ ಮತ್ತು ಆಂಥೋರಿಯಂ ಹೂವುಗಳ ಪಿರಮಿಡ್, ಹಳೆ ಸಂಸತ್ ಭವನದ ಮೇಲೆ ರಾಷ್ಟ್ರ ಲಾಂಛನ, ಕಬ್ಬನ್ ಪಾರ್ಕ್ ಪಿರಮಿಡ್, ವಿವಿಧ ಸಂಸ್ಥೆಗಳಿಂದ ಹೂ ಕುಂಡಗಳ ಪ್ರದರ್ಶನ, ಭಗವಾನ್ ಬುದ್ಧ, ಹಳದಿ ಸೇವಂತಿಗೆ ಪಿರಮಿಡ್, ಬಿಗೋನಿಯಾ ಹೂವುಗಳ ಪಿರಮಿಡ್ ವಿಶೇಷ ಆಕರ್ಷಣೆಯಾಗಿದ್ದವು.

ಇದರ ಜೊತೆಗೆ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೋವಿನ ಜೋಡಣೆ, ಥಾಯ್ ಆರ್ಟ್ಸ್ , ಒಣಹೂವಿನ ಜೋಡಣೆ ಮತ್ತು ಪೂರಕ ಕಲೆಗಳ ಪ್ರದರ್ಶವನ್ನು ಏರ್ಪಡಿಸಲಾಗಿತ್ತು.

ಆ.8ರಿಂದ ನಿನ್ನೆಯವರೆಗೆ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 7 ಲಕ್ಷ ಜನರು ಭೇಟಿ ನೀಡಿದ್ದು, 2.40 ಕೋಟಿ ರೂ. ಪ್ರವೇಶ ಶುಲ್ಕ ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ (ಪಾರ್ಕ್ ಮತ್ತು ಗಾರ್ಡನ್‌್ಸ) ಡಾ. ಎಂ.ಜಗದೀಶ್ ಈ ಸಂಜೆಗೆ ತಿಳಿಸಿದರು.

ನಿತ್ಯವೂ ಲಕ್ಷಾಂತರ ಮಂದಿ ವೀಕ್ಷಣೆ ಮಾಡುತ್ತಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಕೆಲವು ಉಪಯುಕ್ತ ಸಲಹೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಯಾದ ಈ ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಲು ಇನ್ನೂ ಹಲವು ಗಣ್ಯರು ಆಗಮಿಸುವುದಾಗಿ ಹೇಳಿದ್ಧಾರೆ ಎಂದರು.

ದೇಶ, ವಿದೇಶಗಳ ಅದರಲ್ಲೂ ಅಮೇರಿಕಾ, ಬ್ರಿಟನ್, ನೆದರ್ಲ್ಯಾಂಡ್‌್ಸ, ಇಟಲಿಯ ನೂರಾರು ಪ್ರವಾಸಿಗರು ಲಾಲ್ಬಾಗ್ ವೀಕ್ಷಣೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ ಎಂದು ಅವರು ಹೇಳಿದರು.

RELATED ARTICLES

Latest News