ಬೆಂಗಳೂರು, ಆ.19-ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾದರೆ ಕಾನೂನು ಸಮರವನ್ನು ಮುಂದುವರೆಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.22 ರಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ. ಅದೇ ದಿನ ಸಚಿವ ಸಂಪುಟ ಸಭೆ ನಡೆಯಲಿದೆ. ಸಚಿವರು ಈಗಾಗಲೇ ಸಿದ್ದರಾಮಯ್ಯ ಅವರ ಜೊತೆ ಒಟ್ಟಾಗಿ ನಿಂತಿದ್ದಾರೆ. ಅದೇ ರೀತಿ ಕಾಂಗ್ರೆಸ್ನ ಶಾಸಕರು ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿ ಕಾನೂನಿನ ಸಮರವನ್ನು ಮುಂದುವರೆಸುವಂತೆ ಸಲಹೆ ನೀಡಲಿದ್ದಾರೆ ಎಂದರು.
ಬಿಜೆಪಿ-ಜೆಡಿಎಸ್ ರಾಜಕೀಯ ಕುತಂತ್ರಕ್ಕಾಗಿ ಕೇಂದ್ರ ಸರ್ಕಾರದ ಷಡ್ಯಂತ್ರಕ್ಕೆ ರಾಜ್ಯಪಾಲರು ಮಾಡಿರುವ ಅನ್ಯಾಯದ ಆದೇಶಕ್ಕೆ ಮುಖ್ಯಮಂತ್ರಿಯವರು ರಾಜೀನಾಮೆ ಏಕೆ ನೀಡಬೇಕು? ಎಂದು ಎಚ್.ಕೆ.ಪಾಟೀಲ್ ಪ್ರಶ್ನಿಸಿದರು.ಪ್ರತಿ ತಾಲ್ಲೂಕು ಹಾಗೂ ಕ್ಷೇತ್ರದಲ್ಲಿ ಜನ ಪ್ರತಿಭಟನೆ ನಡೆಸಿ, ಸಿದ್ದರಾಮಯ್ಯ ಅವರ ಜೊತೆಗಿರುವುದಾಗಿ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಗಟ್ಟಿಯಾದ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ರಾಜ್ಯಸರ್ಕಾರವನ್ನು ಅಸ್ತಿರಗೊಳಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ, ರಾಜ್ಯಪಾಲರ ಮೇಲೆ ಒತ್ತಡ ಹೇರಲಾಗುತ್ತಿದೆ, ರಾಜ್ಯದ ಜನ ಇದಕ್ಕೆ ಸೊಪ್ಪು ಹಾಕುವುದಿಲ್ಲ, ಮೈಸೂರಿನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯನ್ನು ಗಮನಿಸಿದ ಬಳಿಕವಾದರೂ ರಾಜ್ಯಪಾಲರು ತಮ ನಿಲುವನ್ನು ಬದಲಾಯಿಸಿಕೊಳ್ಳಬೇಕಿತ್ತು ಎಂದರು.ಶಶಿಕಲಾ ಜೊಲ್ಲೆ, ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಜನಾರ್ಧನರೆಡ್ಡಿ ಅವರ ವಿರುದ್ಧ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಪ್ರಕರಣಗಳು ರಾಜ್ಯಪಾಲರಿಗೆ ಕಂಡಿಲ್ಲವೇ? ಎಂದು ಪ್ರಶ್ನಿಸಿದರು.
ಬಡವರ ಪರವಾಗಿ ಪಂಚಖಾತ್ರಿ ಯೋಜನೆಗಳನ್ನು ಜಾರಿಗೊಳಿಸಿ ಒಂದು ಕೋಟಿ ಜನರನ್ನು ಬಿಪಿಎಲ್ ವ್ಯಾಪ್ತಿಯಿಂದ ಮೇಲೆತ್ತಲಾಗುತ್ತಿದೆ. ನಮ ತೆರಿಗೆ, ನಮ ಹಕ್ಕು ಎಂದು ದಿಟ್ಟವಾಗಿ ಪ್ರಶ್ನಿಸಲಾಗಿದೆ. ಇದನ್ನು ಬಿಜೆಪಿ-ಜೆಡಿಎಸ್ನವರಿಗೆ ಸಹಿಸಲಾಗುತ್ತಿಲ್ಲ. ರಾಜ್ಯದ ಜನ ಮತ ಹಾಕಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿರುವುದು ಅನ್ಯಾಯವೇ ಎಂದು ಪ್ರಶ್ನಿಸಿದರು.