ಬೆಂಗಳೂರು : ಮೂಡ ಪ್ರಕರಣದಲ್ಲಿ ಕಾನೂನಿನ ಸಂಕೋಲೆಗೆ ಸಿಲುಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ. ಹೈಕೋರ್ಟ್ ನಲ್ಲಿ ಇಂದು ನಡೆದ ಸುದೀರ್ಘ ವಿಚಾರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆ.29ರವರೆಗೂ ಯಾವುದೇ ಕ್ರಮಗಳನ್ನು ಕೈಗೊಳ್ಳದಂತೆ ಮಧ್ಯಂತರ ಆದೇಶ ನೀಡಲಾಗಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತು ಯಾವುದೇ ಸಂಸ್ಥೆಗಳು ಮುಖ್ಯಮಂತ್ರಿ ವಿರುದ್ಧ ದುರುದ್ದೇಶ ಪೊರಿತ ಕ್ರಮ ಕೈಗೊಳ್ಳಲು ಅವಕಾಶ ಇಲ್ಲ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಸುಚಿಸಿದ್ದಾರೆ.ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಇದೇ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮೂಡಾ ಪ್ರಕರಣದಲ್ಲಿ ತನಿಖೆ ಮತ್ತು ಅಭಿ ಯೋಜನೆಗೆ ಪೂರ್ವಾನುಮತಿ ನೀಡಿದ್ದರು.
ಸಿದ್ದರಾಮಯ್ಯ ಅದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದರು. ಸಿದ್ದರಾಮಯ್ಯ ಅವರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನುಸಿಂಗ್ವಿ, ರಾಜ್ಯಪಾಲರು ತಮ್ಮ ವಿವೇಚನಾ ಅಧಿಕಾರವನ್ನು ಬಳಕೆ ಮಾಡಿಲ್ಲ ಎಂದು ಆಕ್ಷೇಪಿಸಿದರು.
ಸಚಿವ ಸಂಪುಟ ಸಭೆ ನೀಡಿದ ಸಲಹೆಯನ್ನು ಪರಿಗಣಿಸಿಲ್ಲ. ಮೂಡಾ ನಿವೇಶನ ಹಂಚಿಕೆ ಸುಮಾರು 20 ವರ್ಷಗಳ ಸುದೀರ್ಘ ಕಾಲಮಾನವಾಗಿದ್ದು ಸಿದ್ದರಾಮಯ್ಯ ಅವರು ಅಧಿಕಾರರೂಢರಾಗಿ ಯಾವುದೇ ಕಡತಗಳಿಗೆ ಸಹಿ ಹಾಕಿಲ್ಲ. ರಾಜ್ಯಪಾಲರು ತೆಗೆದುಕೊಂಡಿರುವ ಕ್ರಮಗಳು ಸೂಕ್ತವಾಗಿಲ್ಲ ಎಂದು ವಾದಿಸಿದರು.
ರಾಜ್ಯಪಾಲರು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ನಂತರ ಪೂರ್ವಾನುಮತಿ ನೀಡಿರುವುದಾಗಿ ಹೇಳಿದ್ದಾರೆ. ಆದರೆ ದೂರು ಕೊಟ್ಟ ದಿನವೇ ಶೋಕಾಸ್ ನೋಟಿಸ್ ನೀಡಲಾಗಿದೆ. ಹಲವು ಪ್ರಕರಣಗಳು ಅಭಿಯೋಜನೆಯ ಪೂರ್ವಾನುಮತಿಗೆ ಬಾಕಿ ಇರುವಾಗ ಸಿದ್ದರಾಮಯ್ಯ ಅವರ ಪ್ರಕರಣವನ್ನು ಮಾತ್ರ ಆಯ್ಕೆ ಮಾಡಿಕೊಂಡಿರುವುದು ಪ್ರಶ್ನಾರ್ಹ ಎಂದರು.
ಅದಕ್ಕೆ ಪ್ರತಿಯಾಗಿ ರಾಜ್ಯಪಾಲರ ಪರವಾಗಿ ವಾದಿಸಿದ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಆಕ್ಷೇಪ ವ್ಯಕ್ತಪಡಿಸಿ, ಸಚಿವ ಸಂಪುಟ ಸಭೆಯ ಸಲಹೆಯನ್ನು ಪರಿಗಣಿಸುವ ಅಗತ್ಯ ಇಲ್ಲ ಎಂದು ಪ್ರಕರಣವೊಂದನ್ನು ಉಲ್ಲೇಖಿಸಿದರು. ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಶೋಕಾಸ್ ನೋಟಿಸ್ ನೀಡುವ ಮತ್ತು ತನಿಖೆಗೆ ಪೂರ್ವಾನುಮತಿ ನೀಡುವ ಅಧಿಕಾರ ಹೊಂದಿದ್ದಾರೆ. ರಾಜ್ಯಪಾಲರ ಮುಂದೆ ಅಭಿಯೋಜನೆಗೆ ಪೂರ್ವಾನುಮತಿ ಕೇಳಿರುವ ಯಾವ ಅರ್ಜಿಗಳು ಬಾಕಿ ಉಳಿದಿಲ್ಲ ಎಂದರು.
ಅಭಿಷೇಕ್ ಮನುಸಿಂಗ್ವಿ, ವಾದ ಮುಂದುವರೆಸಿ ಟಿ ಜೆ ಅಬ್ರಾಹಿಂ ದೂರು ನೀಡಿದ ದಿನವೇ ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಶೋಕಾಶ್ ನೋಟಿಸ್ ನೀಡಿದ್ದಾರೆ. ಪ್ರತಿವಾದಿಗಳಾದ ಪ್ರದೀಪ್ ಕುಮಾರ್ ಮತ್ತು ಸ್ನೇಹಮಯಿ ಷ್ಣ ಅವರ ದೂರುಗಳ ಬಗ್ಗೆ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿಲ್ಲ ಎಂದು ಆಕ್ಷೇಪಿಸಿದ್ರು.ದೂರುದಾರರ ಪರವಾಗಿ ಪ್ರಭುಲಿಂಗನಾವಡಗಿ, ಕೆ ಜಿ ರಾಘವನ್, ರಂಗನಾಥ್ ವಾದಿಸಿ ಯಾವುದೇ ತಡೆಯಾಜ್ಞೆ ನೀಡದಂತೆ ಮನವಿ ಮಾಡಿದರು.
ವಾದ ವಿವಾದ ಆಲಿಸಿದ ಹೈಕೋರ್ಟ್ ನ ನ್ಯಾಯಮೂರ್ತಿಗಳು, ಮುಂದಿನ ವಿಚಾರಣೆಯನ್ನು ಆಗಸ್ಟ್ 29ರ ಮಧ್ಯಾಹ್ನ 2:30ಕ್ಕೆ ಮುಂದೂಡುವುದಾಗಿ ತಿಳಿಸಿದರು. ಆವರೆಗೂ ಬೇರೆ ಯಾವ ಪ್ರಕ್ರಿಯೆಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯದಂತೆ ಆದೇಶಿಸ ಬೇಕು ಎಂದು ಅಭಿಷೇಕ್ ಮನು ಸಿಂಗ್ವಿ ಕೋರಿದರು. ಪೊಲೀಸ್ ಇನ್ಸ್ಪೆಕ್ಟರ್ ಬಂದು ಮುಖ್ಯಮಂತ್ರಿಯನ್ನು ಬಂಧಿಸಲು ಸಾಧ್ಯವೇ ? ಭಯ ಏಕೆ ಎಂದು ತುಷಾರ್ ಮೆಹ್ತಾ ಆಕ್ಷೇಪಿಸಿದರು.
ಸದ್ಯಕ್ಕೆ ಯಾವುದೇ ತಡೆಯಾಜ್ಞೆಗಳು ನೀಡುವುದಿಲ್ಲ. ಆದರೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡುವಂತಿಲ್ಲ ಮತ್ತು ಯಾವುದೇ ಪ್ರಕ್ರಿಯೆಗಳು ಮುಂದುವರಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.ಹೈಕೋರ್ಟ್ ನ ಆದೇಶದಿಂದ ಸದಸ್ಯಕ್ಕೆ ಮುಖ್ಯಮಂತ್ರಿಯವರು 10 ದಿನಗಳ ಕಾಲ ಬೀಸುವ ದೊಣ್ಣೆಯಿಂದ ಪಾರಾದಂತಾಗಿದೆ.