ಬೆಂಗಳೂರು, ಆ.19- ಮೈಸೂರು ಸಿಲ್ಕ್ ಸೀರೆಗಳು ಎಂದರೆ ಮಹಿಳೆಯರಿಗೆ ಅಚ್ಚು ಮೆಚ್ಚು. ಪ್ರತಿಶನಿವಾರ ಕೆಎಸ್‌ಐಸಿ ಮಾರಾಟ ಮಳಿಗೆಗಳನ್ನು ತೆರೆಯುವ ಮುನ್ನವೇ ನೂರಾರು ಮಂದಿ ಕಾದು ಕುಳಿತಿದ್ದು, ಅಂಗಡಿ ತೆರೆಯುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಸೀರೆಗಳನ್ನು ಪೈಪೋಟಿಗೆ ಬಿದ್ದು ಖರೀದಿ ಮಾಡುತ್ತಿದ್ದಾರೆ. ಗ್ರಾಹಕರ ಬೇಡಿಕೆಯನ್ನು ಈಡೇರಿಸಲಾಗದೆ ಕೆಎಸ್‌ಐಸಿ ದಿನನಿತ್ಯ ಪರದಾಡುತ್ತಿದೆ.
ವಿಶ್ವವಿಖ್ಯಾತ ಮೈಸೂರು ಸಿಲ್‌್ಕ ಸೀರೆಗೆ ಇನ್ನಿಲ್ಲದ ಬೇಡಿಕೆ ಇದೆ. ಮಾರ್ಡನ್ ಸ್ಟೈಲ್ ಉಡುಪುಗಳನ್ನು ಧರಿಸುವವರು ಕೂಡ ಕೆಎಸ್‌ಐಸಿ ಬ್ರಾಂಡ್ ನ ಸೀರೆಗಳನ್ನು ಉಡಲು ಖುಷಿ ಪಡುತ್ತಾರೆ. ಇವು ಗುಂಪಿನಲ್ಲೂ ಭಿನ್ನ ಆಕರ್ಷಣೆಯನ್ನು ತಂದುಕೊಡುತ್ತವೆ. ಸತತವಾಗಿ ಏಳನೇ ಬಾರಿ ಬಜೆಟ್ ಮಂಡಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಅಂದು ಮೈಸೂರು ಸಿಲ್‌್ಕ ಸೀರೆ ಧರಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು.
ಸ್ವಾತಂತ್ರ್ಯ ಪೂರ್ವದ 1912ರಲ್ಲಿ ಆಗಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಸಿಲ್‌್ಕ ಉದ್ಯಮವನ್ನು ಆರಂಭಿಸಿದರು. ಮೈಸೂರು ಮಹಾರಾಜರು ಸ್ಥಾಪಿಸಿದ ಕರ್ನಾಟಕ ಸೋಪ್‌್ಸ ಅಂಡ್ ಡಿಟರ್ಜಂಟ್ (ಕೆಎಸ್‌ಡಿಸಿಎಲ್) ಸೇರಿ ಅನೇಕ ಉದ್ಯಮಗಳು ಈಗಲೂ ಲಾಭದಾಯಕವಾಗಿ ನಡೆಯುತ್ತಿರುವುದಲ್ಲದೆ ಜಾಗತಿಕ ಮನ್ನಣೆ ಪಡೆದಿವೆ. ಮೈಸೂರು ಸಿಲ್‌್ಕಗೆ ದೇಶಿಯವಾಗಿ ಅಷ್ಟೆ ಅಲ್ಲ ಅಮೇರಿಕಾ, ಆಸ್ಟ್ರೇಲಿಯದಂತಹ ದೇಶಗಳಿಂದಲೂ ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಕೆಯಾಗುತ್ತಿದೆ.
ಕರ್ನಾಟಕ ರೇಷೆ ಉದ್ಯಮಗಳ ನಿಗಮ ನಿಯಮಿತ ಬೆಂಗಳೂರಿನ ಎಂ.ಜಿ.ರಸ್ತೆಯ ಜುಬಿಲಿ ಶೋರೂಂ, ಬಸವೇಶ್ವರ ನಗರ, ಜಯನಗರ, ಕೆ.ಜಿ.ರಸ್ತೆ, ಗಾಂಧಿ ಬಜಾರ್, ಡಿ.ವಿ.ಜಿ.ರಸ್ತೆ, ಮಲ್ಲೇಶ್ವರಂ, ಮೈಸೂರಿನ ಯಾತ್ರಿ ನಿವಾಸ್, ಕೆ.ಆರ್.ವೃತ್ತ, ಮೃಗಾಲಯದ ಪಕ್ಕ, ಫ್ಯಾಕ್ಟರಿ ಶೋರೂಂ, ಚೆನ್ನಪಟ್ಟಣ, ದಾವಣಗೆರೆ, ಚೆನೈ, ಹೈದರಾಬಾದ್ ಸೇರಿ 17 ಮಾರಾಟ ಮಳಿಗೆಗಳನ್ನು ಹೊಂದಿದೆ. ಕಾಲ ಕಾಲಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ತಾತ್ಕಾಲಿಕ ಪ್ರದರ್ಶನ ಹಾಗೂ ಮಾರಾಟ ಮೇಳಗಳನ್ನು ಆಯೋಜನೆ ಮಾಡುತ್ತಿದೆ. ಆನ್‌ಲೈನ್ ಖರೀದಿಗೂ ಅವಕಾಶ ಕಲ್ಪಿಸಿದೆ. ಪಾರಂಪರಿಕ ಮೈಸೂರು ಸಿಲ್‌್ಕಗೆ ಸದಾ ಕಾಲ ಬೇಡಿಕೆ ಇದ್ದೇ ಇದೆ.
1962ರಲ್ಲಿ ನಮ ಅಜ್ಜಿ ಸೀರೆ ಖರೀದಿ ಮಾಡಿದ್ದರು ಅದನ್ನೂ ಈಗಲೂ ಇಟ್ಟಿದ್ದೇವೆ. ನಾನು ಖರೀದಿ ಮಾಡುತ್ತಿದ್ದೇನೆ, ನನ್ನ ಮಗಳು ಸಾಫ್ಟವೇರ್ ಇಂಜಿನಿಯರ್ ಆಕೆಯೂ ಕೆಎಸ್‌ಐಸಿಯ ಮೈಸೂರು ಸಿಲ್‌್ಕ ಸೀರೆಗಳನ್ನು ಖರೀದಿಸಿ, ಬಳಕೆ ಮಾಡುತ್ತಾರೆ ಎಂದು ಗ್ರಾಹಕ ಮಹಿಳೆಯೊಬ್ಬರು ಹೆಮೆಯಿಂದ ಹೇಳುತ್ತಾರೆ.
ಮೈಸೂರು ಸಿಲ್‌್ಕನ ನಾವೀನ್ಯತೆ, ಬಣ್ಣಗಳ ಸಂಯೋಜನೆ, ಗುಣಮಟ್ಟದ ಶುದ್ಧ ರೇಷೆ, ಶುದ್ಧ ಚಿನ್ನಲೇಪಿತ ಜರಿ, ಆಕರ್ಷಕ ವಿನ್ಯಾಸಗಳು ಸೀರೆಯ ಗುಣದರ್ಜೆಯನ್ನು ಉನ್ನತ ಸ್ಥಾನದಲ್ಲಿರಿಸಿವೆ. ಜೊತೆಗೆ ಬೇರೆ ಎಲ್ಲಾ ಸೀರೆಗಳಿಗಿಂತಲೂ ಮೈಸೂರು ಸಿಲ್‌್ಕ ಧರಿಸಲು ಸುಲಭ ಹಾಗೂ ಸರಳವಾಗಿರುತ್ತದೆ. ಹಾಗಾಗಿ ನಮಗೆ ಈ ಸೀರೆಗಳೆಂದರೆ ಪಂಚಪ್ರಾಣ ಎಂದು ಮತ್ತೊಬ್ಬ ಮಹಿಳೆ ಹೇಳುತ್ತಾರೆ.
ಸೀರೆ ಖರೀದಿಗೆ ನಾಲ್ಕು ತಿಂಗಳಿಂದ ಬರುತ್ತಲೇ ಇದ್ದೇನೆ. ಇದು ಐದನೇ ತಿಂಗಳಿನ ಭೇಟಿ. ಯಾವಾಗ ಬಂದರೂ ಸೀರೆಗಳು ಖಾಲಿಯಾಗಿರುತ್ತವೆ. ನಮಗೆ ಇಷ್ಟವಾದ ಸೀರೆಯನ್ನು ಆಯ್ಕೆ ಮಾಡಿ ಪಕ್ಕಕ್ಕೆ ಇಟ್ಟು ಮತ್ತೊಂದು ಸೀರೆ ನೋಡುವಷ್ಟು ವ್ಯವದಾನ ಇರುವುದಿಲ್ಲ. ಮತ್ತಿನ್ಯಾರೋ ಬಂದು ನಾವು ಆಯ್ಕೆ ಮಾಡಿಟ್ಟಿದ್ದ, ಸೀರೆಯನ್ನು ತಮಗೆ ಬೇಕು ಎಂದು ಎತ್ತಿಕೊಂಡಿರುತ್ತಾರೆ. ಈ ಕಾರಣಕ್ಕೆ ಅಂಗಡಿಯಲ್ಲಿ ಹಲವು ಬಾರಿ ಜಗಳಗಳಾಗಿವೆ ಎಂದು ಸರ್ಕಾರಿ ನೌಕರರಾದ ಮಹಿಳೆಯೊಬ್ಬರು ಹೇಳಿದ್ದಾರೆ. ಸೀರೆಗಳ ಬೇಡಿಕೆಗಳ ಬಗ್ಗೆ ಮಹಿಳೆಯರು ಬಹಳ ಅಸ್ಥೆಯಿಂದ ಮಾತನಾಡುತ್ತಾರೆ.
ಪ್ರತಿ ಶನಿವಾರ ಹೊಸ ಸೀರೆಗಳು ಬಂದಿರುತ್ತವೆ. ಅಂದು ಬೆಳಗ್ಗೆ ಅಂಗಡಿ ಬಾಗಿಲು ತೆಗೆಯುವ ಮುನ್ನವೇ ನೂರಾರು ಮಂದಿ ಕಾದು ಕುಳಿತಿದ್ದು ಖರೀದಿ ಮಾಡುತ್ತಾರೆ ಎಂದರೆ ಮೈಸೂರು ಸಿಲ್‌್ಕನ ಬೇಡಿಕೆಯನ್ನು ಅಂದಾಜಿಸಬಹುದು. ಜನ ಈ ರೀತಿ ಮುಗಿ ಬಿದ್ದು ಖರೀದಿ ಮಾಡುವ ಅಪರೂಪದ ವಸ್ತುಗಳಲ್ಲಿ , ಕೆಎಸ್‌ಐಸಿ ಸಿಲ್‌್ಕ ಸೀರೆಗಳು ಮುಂಚೂಣಿಯಲ್ಲಿವೆ.
ಚಿನ್ನ, ಬೆಳ್ಳಿ ಬೆಲೆಗಳನ್ನು ಆಧರಿಸಿ ಸೀರೆಗಳ ದರ ನಿಗದಿಯಾಗಲಿದೆ. ಕಳೆದ ಮೇ 25ರಂದು ಕೆಎಸ್‌ಐಸಿ ಶೇ.11ರಿಂದ 15ರಷ್ಟು ದರವನ್ನು ಹೆಚ್ಚಿಸಿದೆ. ಅದರ ಹಿಂದಿನ ದಿನ ಏಕಕಾಲಕ್ಕೆ 1.80 ಕೋಟಿ ರೂಪಾಯಿಯಷ್ಟು ದಾಖಲೆಯ ವ್ಯವಹಾರವನ್ನು ಕೆಎಸ್‌ಐಸಿ ನಡೆಸಿತ್ತು. ಬೆಲೆ ಹೆಚ್ಚಳದ ಹೊರತಾಗಿಯೂ ಬೇಡಿಕೆ ತಗ್ಗಿಲ್ಲ. ಬದಲಾಗಿ ಗ್ರಾಹಕರ ಸಾಲು ಮತ್ತಷ್ಟು ಉದ್ದವಾಗಿದೆ. ಇತ್ತೀಚೆಗೆ ಮುಗಿದ ವರ ಮಹಾಲಕ್ಷ್ಮಿ ಹಬ್ಬಕ್ಕೆ ಕೆಎಸ್‌ಐಸಿ ಸೀರೆ ಸಿಗದೆ ಅದಷ್ಟೋ ಮಹಿಳೆಯರು ಬಿಟ್ಟಿದ್ದಾರೆ. ಹಬ್ಬ ಹರಿದಿನಗಳಲ್ಲಂತೂ ಈ ಸೀರೆಗಳ ಬೇಡಿಕೆ ಎಲ್ಲೆ ಮೀರಿಸುತ್ತದೆ. ಸರ್ಕಾರಿ ಉತ್ಪನ್ನವೊಂದು ಇಷ್ಟು ಬೇಡಿಕೆ ಉಳಿಸಿಕೊಂಡಿದ್ದರೂ ಅದನ್ನೂ ಪೂರೈಸಲು ಮೀನಾಮೇಶ ಎಣಿಸುತ್ತಿರುವುದೇಕೆ ಎಂಬುದು ನಿಗೂಢ ಪ್ರಶ್ನೆಯಾಗಿದೆ.
ಆರಂಭದಲ್ಲಿ ಮೈಸೂರು ರಾಜಮನೆತನಕ್ಕೆ ರೇಷೆ ಬಟ್ಟೆಗಳನ್ನು ತಯಾರಿಸಿ ಪೂರೈಸುವ ಹಾಗೂ ಸೇನೆಗೆ ಸಮವಸ್ತ್ರವನ್ನು ಸಜ್ಜುಗೊಳಿಸುವ ಸಲುವಾಗಿ 10 ನೇಯ್ಗೆ ಯಂತ್ರಗಳೊಂದಿಗೆ ಆರಂಭಗೊಂಡ ಮೈಸೂರು ಸಿಲ್‌್ಕ ಈಗ 150ಕ್ಕೂ ಹೆಚ್ಚು ಮಗ್ಗಗಳನ್ನು ಹೊಂದಿದೆ. ಭಾರತದಲ್ಲೇ ಮೊದಲ ಬಾರಿಗೆ ಸ್ವಿಜರ್‌ಲ್ಯಾಂಡ್‌ನಿಂದ ಅತ್ಯಾಧುನಿಕ ಮಗ್ಗಗಳು ಹಾಗೂ ಬಟ್ಟೆ ತಯಾರಿಕಾ ಯಂತ್ರಗಳನ್ನು ಆಮದು ಮಾಡಿಕೊಂಡಿದ್ದು ಮೈಸೂರು ಸಿಲ್‌್ಕ ಸಂಸ್ಥೆಯ ಹೆಗ್ಗಳಿಕೆ.
ಸಂಸ್ಥೆಯ ರೂಪಾಂತರ:
ಸ್ವಾತಂತ್ರ್ಯದ ನಂತರ ಮೈಸೂರು ರಾಜ್ಯದ ರೇಷೆ ಇಲಾಖೆ ನೇಯ್ಗೆ ಕಾರ್ಖಾನೆಯನ್ನು ತನ್ನ ಅಧೀನಕ್ಕೆ ತೆಗೆದುಕೊಂಡಿತ್ತು. 1980ರಲ್ಲಿ ಕರ್ನಾಟಕ ಕೆಎಸ್‌ಐಸಿಗೆ ಹಸ್ತಾಂತರಗೊಂಡಿದೆ. ಹಳೆ ಮೈಸೂರು ಭಾಗದಲ್ಲಿನ ಮೊದಲ ದರ್ಜೆಯ ನೈಸರ್ಗಿಕ ರೇಷೆಯಿಂದ ನೆಯುವುದರಿಂದ ಆಕರ್ಷಕ ಹೊಳಪು ಮೂಡುತ್ತದೆ. ವೇಗವಾದ ತಿರುಚಿವಿಕೆ 26-28 ಡೆನಿಯರ್ ಬಳಕೆ ಮಾಡುವುದರಿಂದ ನೈಪುಣ್ಯ ತೆಳುವು ಹಾಗೂ ಹಗುರವಾದ ಸೀರೆ ತಯಾರಾಗುತ್ತದೆ. ಶುದ್ಧ ಚಿನ್ನದ ಜರಿಗಳು ಸೀರೆಯ ಮೌಲ್ಯವನ್ನು ವೃದ್ಧಿಸಿವೆ, ದೀರ್ಘಕಾಲಿಕ ಬಾಳಿಕೆಗೆ ಕಾರಣವಾಗಿವೆ.
ಕೆಎಸ್‌ಐಸಿ ಸೀರೆಗಳು ಜಿಯೋಗ್ರಾಫಿಕಲ್ ಐಡೆಂಡಿಫಿಕೆಷನ್ ನೋಂದಣಿ (ಜಿಐ-11 ಟ್ಯಾಗ್) ಪಡೆದುಕೊಂಡಿವೆ. ಜೊತೆಗೆ ಐಎಸ್‌ಒ ಮಾಪಕ, ಟಿಯುವಿ ರೆಹಿನ್‌ಲ್ಯಾಂಡ್ ಪ್ರಮಾಣ ಪತ್ರ ಹೊಂದಿವೆ. ಉತ್ತಮ ಮಾರುಕಟ್ಟೆಗಾಗಿ 2016-17ರಲ್ಲಿ ಮುಖ್ಯಮಂತ್ರಿಯವರ ರತ್ನ ಪ್ರಶಸ್ತಿಯನ್ನು ಕೆಎಸ್‌ಐಸಿ ಪಡೆದುಕೊಂಡಿದೆ. ಜರಿ ಕ್ರೇಪ್ ಸೀರೆ, ಜರಿ ಕ್ರೇಪ್ ಮುದ್ರಿತ ಸೀರೆ, ಕ್ರೇಪ್ ಪ್ರಿಂಟೆಡ್ ಸೀರೆ, ಸಿದ್ಧ ಉಡುಪು ವಸ್ತುಗಳು, ಸ್ಕಾರ್ಫ್ ಮತ್ತು ಟೈಗಳನ್ನು ಕೆಎಸ್‌ಐಸಿ ಉತ್ಪಾದಿಸುತ್ತದೆ.
ಸಿಬ್ಬಂದಿ ಕೊರತೆ:
ಮೈಸೂರಿನ ಹೃದಯ ಭಾಗದ ಮಾನಂದವಾಡಿಯಲ್ಲಿ ನೇಯ್ಗೆ ಕಾರ್ಖಾನೆಯಿದೆ. ಟಿ ನರಸೀಪುರದಲ್ಲಿ ನೂಲು ತೆಗೆಯುವ ಘಟಕ, ಚನ್ನಪಟ್ಟಣದಲ್ಲಿ ಜೂಟು ರೇಷೆ ಗಿರಣಿ ಆವರಣದಲ್ಲಿ ಮತ್ತೊಂದು ನೇಯ್ಗೆ ಘಟಕ ಇದೆ. ರಾಜ್ಯ ಹಾಗೂ ಹೊರ ರಾಜ್ಯಗಳ ಮಾರಾಟ ಕೇಂದ್ರದಲ್ಲಿ 180 ಮಂದಿ, ಮೈಸೂರಿನ ನೇಯ್ಗೆ ಕೇಂದ್ರದಲ್ಲಿ 500, ಟಿ ನರಸೀಪುರದಲ್ಲಿ 200, ಚೆನ್ನಪಟ್ಟಣದಲ್ಲಿ 89 ಮಂದಿ ಕೆಲಸ ಮಾಡುತ್ತಿದ್ದಾರೆ. ನಿಗಮದಲ್ಲಿ ಕೆಲಸ ಮಾಡುವವರ ಪೈಕಿ ಬಹುತೇಕ ಮಂದಿ ಹೊರ ಗುತ್ತಿಗೆ ಆಧಾರದಲ್ಲಿದ್ದಾರೆ. ಸುದೀರ್ಘ ಕಾಲಾವಧಿಯಲ್ಲಿ ಸೇವೆ ಸಲ್ಲಿಸುವ ಅವರು ತಮನ್ನು ಖಾಯಂ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ದಣಿದು ಹೋಗಿದ್ದಾರೆ.
ವ್ಯಾಪಕ ಬೇಡಿಕೆ ಇದ್ದಾಗಲೂ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸದೆ ಸರ್ಕಾರಿ ಉದ್ಯಮದ ಕತ್ತು ಹಿಚುಕಲಾಗುತ್ತಿದೆ. ಕೆಎಸ್‌ಐಸಿ ಪರಣಿತಿ ಪಡೆದ ನೇಕಾರರಿಂದಷ್ಟೆ ಸೀರೆ ಉತ್ಪಾದಿಸುತ್ತದೆ. ಸಿಬ್ಬಂದಿಗಳ ಕೊರತೆಯ ಜೊತೆಗೆ ಪರಿಣಿತಿ ಪಡೆದ ನೇಕಾರರ ಕೊರತೆ ವ್ಯಾಪಕವಾಗಿದೆ. ಹೀಗಾಗಿ ನಿಗಮ ಖರೀದಿಸಿದ ಬಹಳಷ್ಟು ಯಂತ್ರಗಳು ಈಗಲೂ ಬಳಕೆಯಾಗದೆ ದೂಳು ತಿನ್ನುತ್ತಿವೆ. ಮೈಸೂರು ಘಟಕದಲ್ಲಿ 159 ಮಗ್ಗಗಳಲ್ಲಿ 152 ಮಾತ್ರ ಕೆಲಸ ನಿರ್ವಹಿಸುತ್ತಿದ್ದು, ಇನ್ನೂ ಏಳು ಮಗ್ಗಗಳು ನೇಕಾರರಿಲ್ಲದೆ ಬಳಕೆಯೇ ಆಗಿಲ್ಲ. ಕಿನರಸೀಪುರದಲ್ಲಿನ ನೂಲು ತೆಗೆಯುವ ಘಟಕದಲ್ಲಿ 60ರಲ್ಲಿ ಐದು ಯಂತ್ರಗಳು ಉಪಯೋಗಿಸುತ್ತಿಲ್ಲ. ಚನ್ನಪಟ್ಟಣದಲ್ಲಿ 30 ಮಗ್ಗಗಳನ್ನು ಅಳವಡಿಸಲಾಗಿದೆ. 16 ಮಾತ್ರ ಕಾರ್ಯಚರಣೆಯಲ್ಲಿದ್ದು, ಉಳಿದ ಮಗ್ಗಗಳು ತುಕ್ಕು ಹಿಡಿಯುತ್ತಿವೆ.
ಇಚ್ಚಾಸಕ್ತಿಯ ಕೊರತೆ:
ರಾಜಕೀಯ ಪುನರ್ವಸತಿ ಕೇಂದ್ರಗಳನ್ನಾಗಿ ಬಳಕೆ ಮಾಡಲಾಗುವ ಅನೇಕ ನಿಗಮ ಮಂಡಳಿಗಳು ನಷ್ಟದಲ್ಲಿವೆ, ಸರ್ಕಾರ ಅನುದಾನ ಕೊಟ್ಟು ಬಿಳಿ ಆನೆಯಂತೆ ಸಾಕುತ್ತಿದೆ. ಆದರೆ ಜನರಿಗೆ ಉಪಯುಕ್ತವಾಗಿರುವ, ಉತ್ಪನ್ನಕ್ಕೆ ವ್ಯಾಪಕ ಬೇಡಿಕೆ ಹೊಂದಿರುವ ಮತ್ತು ಲಾಭದಾಯಕವಾದ ಕೆಎಸ್‌ಐಸಿಯಂತಹ ಸಂಸ್ಥೆಯ ಉನ್ನತೀಕರಣಕ್ಕೆ ರಾಜಕೀಯ ಹಿತಾಸಕ್ತಿಯೇ ಇಲ್ಲವಾಗಿದೆ.
ರೇಷೆ ಇಲಾಖೆ ಎಂದರೆ ಸಂಪುಟದಲ್ಲಿ ಅನುಪಯುಕ್ತ ಖಾತೆ ಎಂಬಂತಾಗಿದೆ. ಸಚಿವರಿಗೆ ಜವಾಬ್ದಾರಿ ವಹಿಸುವಾಗ ಪ್ರಮುಖ ಖಾತೆ ಕೊಟ್ಟು ಜೊತೆಯಲ್ಲಿ ಇದನ್ನು ಉಪಖಾತೆ ಎಂಬಂತೆ ನೀಡಲಾಗುತ್ತದೆ. ಹಾಗಾಗಿ ಯಾವ ಸಚಿವರು ಕೆಎಸ್‌ಐಸಿ ಪುನರುತ್ತಾನ ಅಥವಾ ಅಭಿವೃದ್ಧಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಿಗಮದ ಹೆಸರಿನಲ್ಲಿ ಖರೀದಿಯಾಗುವ ವಸ್ತುಗಳು ಹಾಗೂ ವಾಹನಗಳನ್ನು ಸಚಿವಾಲಯದ ಅಧಿಕಾರಿ ಸಿಬ್ಬಂದಿಗಳು ಬಳಕೆ ಮಾಡಿಕೊಂಡು ಮಜಾ ಮಾಡಲಷ್ಟೆ ಈ ನಿಗಮ ಸೀಮಿತವಾಗಿದೆ.
ನಿಗಮವೇ ದುಡಿಯುವ ಲಾಭಂಶವನ್ನು ಬಳಕೆ ಮಾಡಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವುದು, ಮತ್ತಷ್ಟು ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಮೂಲಕ ಕೆಎಸ್‌ಐಸಿ ಸೀರೆಗಳಿಗೆ ಇರುವ ಬೇಡಿಕೆಯನ್ನು ಪೂರೈಸಲು ವ್ಯಾಪಕ ಅವಕಾಶಗಳಿವೆ. ನಿಗಮಕ್ಕೆ ಐದು ಮಂದಿ ಐಎಎಸ್ ಅಧಿಕಾರಿಗಳು ಭಾಧ್ಯಸ್ಥರಾಗಿದ್ದಾರೆ. ಸರ್ಕಾರದ ಮಟ್ಟದಲ್ಲಿ ಸಂಸ್ಥೆಯ ಉನ್ನತೀಕರಣಕ್ಕೆ ಈವರೆಗೂ ಗಂಭೀರವಾದ ಚರ್ಚೆ ನಡೆಯದೇ ಇರುವುದು ವಿಪರ್ಯಾಸವೇ ಸರಿ.