Saturday, January 10, 2026
Homeರಾಜ್ಯವೇಶ್ಯಾವಾಟಿಕೆ ಜಾಲಕ್ಕೆ ಶಿಕ್ಷಣ ವಂಚಿತ ಮಕ್ಕಳು : ಆಘಾತಕಾರಿ ಘಟನೆ ಬೆಳಕಿಗೆ

ವೇಶ್ಯಾವಾಟಿಕೆ ಜಾಲಕ್ಕೆ ಶಿಕ್ಷಣ ವಂಚಿತ ಮಕ್ಕಳು : ಆಘಾತಕಾರಿ ಘಟನೆ ಬೆಳಕಿಗೆ

Children in prostitution : Shocking incident comes to light

ಮೈಸೂರು, ಜ.9- ಬಡತನ, ಕೀಳರಿಮೆ ಇನ್ನಿತರ ಕಾರಣಗಳಿಂದ ಶಾಲಾ ಹಂತದಲ್ಲೇ ಶಿಕ್ಷಣದಿಂದ ವಂಚಿತರಾಗುವ ಹೆಣ್ಣುಮಕ್ಕಳ ಪೈಕಿ ಸಾಕಷ್ಟು ಮಂದಿಯನ್ನು ಕಾಣದ ಕೈಗಳು ವೇಶ್ಯಾವಾಟಿಕೆಗೆ ದೂಡುವುದು ಅಥವಾ ಲೈಂಗಿಕ ಶೋಷಣೆ ಜಾಲಕ್ಕೆ ಸಿಲುಕಿಸುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಇಂತಹ ಸೂಕ್ಷ್ಮ ವಿಚಾರಗಳನ್ನು ಬಯಲಿಗೆಳೆದು ಮಕ್ಕಳನ್ನು ರಕ್ಷಿಸಬೇಕಾದ ಸರ್ಕಾರದ ವಿವಿಧ ಇಲಾಖೆಗಳು, ತಮ ಜವಾಬ್ದಾರಿಯನ್ನು ಮರೆತು ಕಣುಚ್ಚಿ ಕುಳಿತಿವೆ. ಇದು ಹಲವು ಮುಗ್ಧ ಬಾಲಕಿಯರ ಬದುಕು ಮುಳ್ಳಿನ ಹಾಸಿಗೆಯಂತಾಗುವುದಕ್ಕೆ ಪರೋಕ್ಷವಾಗಿ ಕಾರಣವಾಗಿದೆ.
ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಪೋಷಕರು ಬಹುತೇಕ ಬಡತನದ ರೇಖೆಗಿಂತ ಕೆಳಗಿರುವವರು ಅರ್ಥಾತ್‌ ಕಡುಬಡವರೇ ಆಗಿರುತ್ತಾರೆ. ಇಂತಹ ಹಲವು ಮಕ್ಕಳು ಪೋಷಕರ ನಿರಾಸಕ್ತಿ ನಡುವೆಯೂ ಒಂದಷ್ಟು ದಿನ ಶಾಲೆಗೆ ಬಂದು ಅರ್ಧದಲ್ಲಿಯೇ ಓದು ಮೊಟಕುಗೊಳಿಸಿ ಶಾಲೆಯಿಂದ ಹೊರಗುಳಿಯುತ್ತಿದ್ದಾರೆ.

ಇಂತಹ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವುದು ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಜವಾಬ್ದಾರಿ. ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಶಾಲೆ ಬಿಟ್ಟ ಮಕ್ಕಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂಬುದು ಖಚಿತವಾಗುತ್ತದೆ. ಈ ಮಾತಿಗೆ ಕನ್ನಡ ಹಿಡಿಯುವಂತೆ, ಎರಡು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಮದ್ದೂರಿನ ಬಳಿ 15 ವರ್ಷದ ಬಾಲಕಿಯೊಬ್ಬಳು ವೇಶ್ಯಾವಾಟಿಕೆ ಅಡ್ಡೆಯಲ್ಲಿ ರಕ್ಷಿಸಲ್ಪಟ್ಟಿದ್ದಾಳೆ. ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯವರಿಗೆ ಈ ಬಾಲಕಿಯು ಹೇಳಿಕೊಂಡಿರುವ ವಿಚಾರ ಅಚ್ಚರಿಮೂಡಿಸಿದೆ.
ಆ ಹೆಣ್ಣುಮಗಳು 9ನೇ ತರಗತಿವರೆಗೆ ಓದಿದ್ದು, ನಂತರ ಶಾಲೆಯನ್ನು ತೊರೆದಿದ್ದಾಳೆ.

ಬಡತನದಿಂದ ಬಳಲುತ್ತಿರುವ ಪೋಷಕರೂ ಮಗಳ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿಲ್ಲ. ಇಂತಹವರಿಗಾಗಿ ಹದ್ದಿನಕಣ್ಣಿಟ್ಟು ಕಾಯುವ, ವೇಶ್ಯಾವಾಟಿಕೆಯ ಪಿಂಪ್‌ಗಳ ವಕ್ರದೃಷ್ಟಿಗೆ ಈ ಬಾಲಕಿ ಸಿಲುಕಿದ್ದಾಳೆ. ಆಕೆಗೆ ಹಣದಾಸೆ ತೋರಿಸಿದ ಖದೀಮರು, ಪೋಷಕರನ್ನೂ ಒಪ್ಪಿಸಿ ಆಕೆಯನ್ನು ವೇಶ್ಯಾವಾಟಿಕೆಯ ವಿಷ ವರ್ತುಲಕ್ಕೆ ತಳ್ಳಿದ್ದಾರೆ. ಬಳಿಕ ಆಕೆಯನ್ನು ತಮಿಳುನಾಡು ಸೇರಿದಂತೆ ವಿವಿಧೆಡೆ ಕಳುಹಿಸಿ ಕ್ರೌರ್ಯ ಮೆರೆದಿದ್ದಾರೆ. ಅಂತಿಮವಾಗಿ ಒಡನಾಡಿ ಸೇವಾ ಸಂಸ್ಥೆ ಆ ಅಮಾಯಕ ಬಾಲಕಿಯನ್ನು ರಕ್ಷಿಸಿದೆ. ಜಿಲ್ಲೆಯಲ್ಲಿ ನಾಲ್ಕು ಪ್ರಕರಣ ಇದೇ ಮಾದರಿಯಲ್ಲಿ ಹಲವು ಬಾಲಕಿಯರು ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದನ್ನು ಮೊಟಕುಗೊಳಿಸಿದ್ದ ನಾಲ್ವರು ಬಾಲಕಿಯರು ವೇಶ್ಯಾವಾಟಿಕೆ ಅಡ್ಡೆಯಲ್ಲಿ ಪತ್ತೆಯಾಗಿದ್ದಾರೆ. ಅವರೀಗ ಬಾಲಮಂದಿರದ ಆಶ್ರಯದಲ್ಲಿದ್ದಾರೆ.

ನಾಲ್ವರಲ್ಲಿ ಓರ್ವ ಬಾಲಕಿ ಒಂದು ಮಗುವಿನ ತಾಯಿ! ಇಂತಹ ದುರವಸ್ಥೆಯಿಂದ ಇಡೀ ಸಮಾಜ ನಾಚಿಕೆಯಿಂದ ತಲೆತಗ್ಗಿಸಬೇಕಾಗಿದೆ. ನೆರೆಯ ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕೂಡ ತಲಾ ಒಂದು ಪ್ರಕರಣ ಪತ್ತೆಯಾಗಿವೆ.

ಈ ಬಗ್ಗೆ ಮಾತನಾಡಿದ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಅವರು, ಮದ್ದೂರಿನಲ್ಲಿ ಮೈಸೂರು ಮಕ್ಕಳ ಕಲ್ಯಾಣ ಸಮಿತಿ, ಮಂಡ್ಯದ ಮಕ್ಕಳ ಪೊಲೀಸ್‌‍ ವಿಶೇಷ ಘಟಕ ಹಾಗೂ ಮಂಡ್ಯ ಜಿಲ್ಲೆಯ ಹೆಚ್ಚುವರಿ ಪೊಲೀಸ್‌‍ ವರಿಷ್ಠಾಧಿಕಾರಿಗಳ ಸಮನ್ವಯದೊಂದಿಗೆ ಒಡನಾಡಿಯು ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಿದೆ ಎಂದು ಹೇಳಿದರು.

ಪ್ರತಿ ಜಿಲ್ಲೆಯಲ್ಲೂ ಇಂತಹ ಅಮಾನವೀಯ ಪ್ರಕರಣಗಳು ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಶಾಲೆ ತೊರೆದ ಬಾಲಕಿಯರ ಹಿತರಕ್ಷಣೆಯ ದೃಷ್ಟಿಯಿಂದ ಸರ್ಕಾರವು ವಿಶೇಷ ಜಾಗೃತಿ ಕಾರ್ಯಕ್ರಮವೊಂದನ್ನು ನಿರಂತರವಾಗಿ ಹಮಿಕೊಳ್ಳಬೇಕು ಎಂದು ಆಗ್ರಹಿಸಿದರು. ಒಡನಾಡಿಯ ಅನೇಕ ವರ್ಷಗಳ ಕ್ಷೇತ್ರ ಕಾರ್ಯಾನುಭವ ಮತ್ತು ಕಾರ್ಯಾಚರಣೆಗಳ ಮೂಲಕ ತಿಳಿಯಲ್ಪಟ್ಟ ಕಟು ವಾಸ್ತವವೇನೆಂದರೆ ಶಾಲೆಯಿಂದ ಹೊರಗುಳಿದ ಬಹುತೇಕ ಮಕ್ಕಳು ಸಾಮಾಜಿಕವಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ ಎಂದು ಅವರು ಹೇಳಿದರು.

RELATED ARTICLES

Latest News