ನವದೆಹಲಿ,ಆ.22– ಕೋಲ್ಕತ್ತಾದ ಆರ್ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಪ್ರತಿಭಟನೆ ಹಿಂತೆಗೆದುಕೊಂಡು ಕೆಲಸಕ್ಕೆ ಮತ್ತೆ ಹಾಜರಾಗುವಂತೆ ಇಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಕೆಲಸಕ್ಕೆ ಮರಳಿದರೆ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಸಹ ಭರವಸೆ ನೀಡಿದೆ.
ಕೋಲ್ಕತ್ತಾದ ಅತ್ಯಾಚಾರ-ಕೊಲೆ ಪ್ರಕರಣದ ಪ್ರತಿಭಟನೆಗೆ ತಮನ್ನು ಬಲಿಪಶು ಮಾಡಲಾಗುತ್ತಿದೆ ಎಂದು ನಾಗ್ಪುರದ ಏಮ್ಸ್ ನಿವಾಸಿ ವೈದ್ಯರ ಪರ ವಕೀಲರು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠಕ್ಕೆ ತಿಳಿಸಿದರು.
ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿಗಳು, ಒಮೆ ಅವರು ಕರ್ತವ್ಯಕ್ಕೆ ಮರಳಿದರೆ, ಪ್ರತಿಕೂಲ ಕ್ರಮಗಳನ್ನು ತೆಗೆದುಕೊಳ್ಳದಂತೆ ನಾವು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ವೈದ್ಯರು ಕೆಲಸ ಮಾಡದೆ ಪ್ರತಿಭಟನೆ ಮುಂದುವರಿಸಿದರೆ ಸಾರ್ವಜನಿಕರಿಗೆ ಆರೋಗ್ಯ ಮೂಲಸೌಕರ್ಯ ಕೊಡುವುದು ಹೇಗೆ ಎಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಪ್ರಶ್ನಿಸಿದೆ.
ವೈದ್ಯರು ಕೆಲಸಕ್ಕೆ ಮರಳಬೇಕಾಗುತ್ತದೆ, ವೈದ್ಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಅವರು ಅಸಮಾಧಾನಗೊಂಡಿದ್ದಾರೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ನೀವು ಕೆಲಸಕ್ಕೆ ಹಿಂತಿರುಗಬೇಕು. ಜನರು ನಿಮಗಾಗಿ ಕಾಯುತ್ತಿದ್ದಾರೆ. ವೈದ್ಯರ ಮುಷ್ಕರದಿಂದ ಆರೋಗ್ಯ ಮೂಲಸೌಕರ್ಯಕ್ಕೆ ಧಕ್ಕೆಯಾಗಲಿದೆ ಎಂದು ಸೂಚಿಸಿದರು.
ಕೋಲ್ಕತ್ತಾ ಪ್ರಕರಣದ ವಿಚಾರಣೆಯ ವೇಳೆ ಹಿರಿಯ ವಕೀಲ ತುಷಾರ್ ಮೆಹ್ತಾ, ವೈದ್ಯರು 36-36 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಲಯದಿಂದ ಭದ್ರತೆಯ ಭರವಸೆ ಸಿಕ್ಕರೆ ವೈದ್ಯರು ತೃಪ್ತರಾಗುತ್ತಾರೆ. ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಬೇಕು ಎಂದು ಹೇಳಿದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಸಿಜೆಐ ಚಂದ್ರಚೂಡ್ ಅವರು, 36ರಿಂದ 48 ಗಂಟೆಗಳ ಕಾಲ ವೈದ್ಯರ ಕರ್ತವ್ಯ ಸರಿಯಿಲ್ಲ.
ವೈದ್ಯರು ದಿನದ 36 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ನನ್ನ ಕುಟುಂಬದ ಸದಸ್ಯರೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದಾಗ ನಾನೇ ಸರ್ಕಾರಿ ಆಸ್ಪತ್ರೆಯಲ್ಲಿ ನೆಲದ ಮೇಲೆ ಮಲಗ್ದೆಿ. ವೈದ್ಯರ ಮೇಲೆ ಹೆಚ್ಚಿನ ಒತ್ತಡವಿದೆ ಎಂದು ಹೇಳುವ ಅನೇಕ ಇಮೇಲ್‌ಗಳು ನಮಗೆ ಬಂದಿವೆ. ನಾವು ಎಲ್ಲಾ ಮಧ್ಯಸ್ಥಗಾರರಿಂದ ಪ್ರಾತಿನಿಧ್ಯವನ್ನು ಪಡೆಯಲು ಪ್ರಾರಂಭಿಸಿದರೆ, ವಿಷಯವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಸಿಜೆಐ ಹೇಳಿದರು.