Friday, September 20, 2024
Homeರಾಜಕೀಯ | Politicsಸಿಎಂ-ಡಿಸಿಎಂ ಜೊತೆ ಪರಮೇಶ್ವರ್‌ ದೆಹಲಿಗೆ ಪ್ರಯಾಣ, ಕುತೂಹಲ ಮೂಡಿಸಿದೆ ವರಿಷ್ಠರಿಗೆ ಭೇಟಿ

ಸಿಎಂ-ಡಿಸಿಎಂ ಜೊತೆ ಪರಮೇಶ್ವರ್‌ ದೆಹಲಿಗೆ ಪ್ರಯಾಣ, ಕುತೂಹಲ ಮೂಡಿಸಿದೆ ವರಿಷ್ಠರಿಗೆ ಭೇಟಿ

ಬೆಂಗಳೂರು,ಆ.23- ಮುಡಾ ಪ್ರಕರಣದ ಬಳಿಕ ತೀವ್ರಗೊಂಡಿರುವ ರಾಜಕೀಯ ಚಟುವಟಿಕೆಗಳ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಕಾಂಗ್ರೆಸ್‌‍ ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಗೆ ಪ್ರಯಾಣಿಸಿದರು. ಅವರೊಂದಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದ ಬಳಿಕ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ತೆರೆಮರೆಯಲ್ಲಿ ಸಿದ್ದಾರಾಮಯ್ಯ ಅವರನ್ನು ಪದಚ್ಯುತಿಗೊಳಿಸಲು ಕಾಂಗ್ರೆಸ್‌‍ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ. ಜೆಡಿಎಸ್‌‍ ಹಾಗೂ ಬಿಜೆಪಿ ಮುಖಂಡರು ಮಧ್ಯವರ್ತಿಗಳ ಮೂಲಕ ಕೆಲ ಶಾಸಕರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ರಾಜ್ಯದಲ್ಲಿನ ಸಚಿವ ಸಂಪುಟ ಹಾಗೂ ಕಾಂಗ್ರೆಸ್‌‍ ಶಾಸಕರು ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತಿದ್ದಾರೆ. ಇಡೀ ಕಾಂಗ್ರೆಸ್‌‍ ಪಕ್ಷ ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ ಅವರನ್ನು ಅಸ್ಥಿರಗೊಳಿಸುವುದು ಸರಿಯಲ್ಲ ಎಂಬ ನಿಲುವಿಗೆ ಬಂದಿದೆ. ಇದಕ್ಕೂ ಮೊದಲು ನಡೆದಿದ್ದ ಅಧಿಕಾರ ಹಂಚಿಕೆ ಸೂತ್ರಗಳು ಹಾಗೂ ಚರ್ಚೆಗಳು ಗೌಪ್ಯವಾಗಿಯೇ ಉಳಿದಿವೆ.

ಒಂದು ವೇಳೆ ಆ.29ರಂದು ಹೈಕೋರ್ಟ್‌ ವಿಚಾರಣೆ ವೇಳೆ ಕಾನೂನು ಸಮರದಲ್ಲಿ ಹಿನ್ನಡೆಯಾಗಿ ಎಫ್‌ಐಆರ್‌ ದಾಖಲಾದರೆ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಪ್ರಶ್ನೆ ಎದುರಾಗುತ್ತದೆ. ಆ ಹಂತದಲ್ಲಿ ಉತ್ತರಾಧಿಕಾರಿ ಯಾರು ಎಂಬ ಚರ್ಚೆಗಳು ತೆರೆಮರೆಯಲ್ಲಿ ಪಿಸುಗುಡುತ್ತಿದ್ದು, ಹಲವರ ಹೆಸರುಗಳು ಬೇಕಾಬಿಟ್ಟಿ ಹರಿದಾಡುತ್ತಿವೆ.

ಇಂದು ಇದ್ದಕ್ಕಿದ್ದಂತೆ ಪರಮೇಶ್ವರ್‌ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಜೊತೆ ದೆಹಲಿಗೆ ತೆರಳಿರುವುದು ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.

RELATED ARTICLES

Latest News