Friday, November 22, 2024
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಸಿನಿಮಾ ಮೀರಿಸುವಂತಿದೆ ಖತರ್ನಾಕ್‌ ದಂಪತಿಯ "ಡೂಪ್ಲಿಕೇಟ್" ಮರ್ಡರ್ ಸ್ಟೋರಿ..!

ಸಿನಿಮಾ ಮೀರಿಸುವಂತಿದೆ ಖತರ್ನಾಕ್‌ ದಂಪತಿಯ “ಡೂಪ್ಲಿಕೇಟ್” ಮರ್ಡರ್ ಸ್ಟೋರಿ..!

Fake Murder Story

ಹಾಸನ,ಆ.24- ಜೀವವಿಮಾ ಸಂಸ್ಥೆಯಿಂದ ಒಂದು ಕೋಟಿ ರೂ. ಪರಿಹಾರದ ಹಣ ಪೀಕಲು ಗಂಡನ ತದ್ರೂಪಿಯಂತೇ ಇದ್ದ ಅಮಾಯಕನನ್ನು ಕೊಂದು ಅಪಘಾತದಲ್ಲಿ ಮೃತಪಟ್ಟಿರುವಂತೆ ತನಿಖೆಯ ಹಾದಿ ತಪ್ಪಿಸಿದ್ದ ಖತರ್ನಾಕ್‌ ಆರೋಪಿ ದಂಪತಿಯನ್ನು ಗಂಡಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದ ಮುನಿಸ್ವಾಮಿಗೌಡ ಹಾಗೂ ಶಿಲ್ಪರಾಣಿ ಬಂಧಿತ ದಂಪತಿ.ಅಮಾಯಕನ ಹತ್ಯೆ ಘಟನೆ ನಡೆದ ಹತ್ತು ದಿನಗಳ ನಂತರ ಪ್ರಕರಣ ಬಯಲಾಗಿದ್ದು, ಕೊಲೆಯಾಗಿರುವ ವ್ಯಕ್ತಿ ಭಿಕ್ಷುಕ ಎನ್ನಲಾಗಿದ್ದು, ಆತನ ಗುರುತು ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆ ವಿವರ :
ಆ.12 ರಂದು ಅರಸೀಕೆರೆ ತಾಲ್ಲೂಕಿನ ಗೊಲ್ಲರಹೊಸಳ್ಳಿ ಗೇಟ್‌ ಬಳಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಅದೇ ಸ್ಥಳದಲ್ಲಿ ಪಂಕ್ಚರ್‌ ಆಗಿದ್ದ ಕಾರು ಹಾಗೂ ಒಂದು ಲಾರಿ ಸಿಕ್ಕಿದ್ದವು. ಮೇಲ್ನೋಟಕ್ಕೆ ಪಂಕ್ಚರ್‌ ಆಗಿದ್ದ ಕಾರಿನ ಟೈರ್‌ ಬದಲಿಸುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿದು ಮೃತಪಟ್ಟಿರುವಂತೆ ಕಾಣಿಸುತ್ತಿತ್ತು.

ಅಪರಿಚಿತ ಮೃತದೇಹವನ್ನು ಹಾಸನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದ ಗಂಡಸಿ ಠಾಣೆ ಪೊಲೀಸರು ಗುರುತು ಪತ್ತೆಗೆ ಮುಂದಾಗಿದ್ದರು. ಆ.13 ರಂದು ಜಿಲ್ಲಾಸ್ಪತ್ರೆಗೆ ಬಂದಿದ್ದ ಹೊಸಕೋಟೆಯ ಆರೋಪಿತೆ ಶಿಲ್ಪರಾಣಿ ಈ ಮೃತದೇಹ ನನ್ನ ಪತಿ ಮುನಿಸ್ವಾಮಿಗೌಡರದ್ದು ಎಂದು ಗುರುತಿಸಿದ್ದಳು.

ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕೊಂಡೊಯ್ದಿದ್ದ ಆಕೆ ಅಂದೇ ಹೊಸಕೋಟೆ ತಾಲ್ಲೂಕಿನ, ಚಿಕ್ಕಕೋಲಿಗ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಿದ್ದಳು. ಗಂಡಸಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮೃತ ವ್ಯಕ್ತಿಯ ಕುತ್ತಿಗೆಯಲ್ಲಿ ಗಾಯದ ಗುರುತು ಇದ್ದಿದ್ದರಿಂದ ಪ್ರಕರಣದ ಬಗ್ಗೆ ಅನುಮಾನಗೊಂಡು ತನಿಖೆ ಆರಂಭಿಸಿದ್ದರು.

ಪ್ರಕರಣದ ಬಗ್ಗೆ ಎಸ್ಪಿ ಮಹಮದ್‌ ಸುಜೀತಾಗೆ ಮಾಹಿತಿ ನೀಡಿದ್ದ ಗಂಡಸಿ ಠಾಣೆ ಪೊಲೀಸರು ಹಾಗೂ ಅರಸೀಕೆರೆ ವೃತ್ತ ನಿರೀಕ್ಷರಿಗೆ ತನಿಖೆ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು.

ಸತ್ತವನು ಮುನಿಸ್ವಾಮಿಗೌಡ ಅಲ್ಲ! :
ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಟೈರ್‌ ಮಾರಾಟ ಮಳಿಗೆ ಹೊಂದಿರುವ ಮುನಿಸ್ವಾಮಿಗೌಡ ಸಾಲದಲ್ಲಿ ಮುಳುಗಿ ಹೋಗಿದ್ದ. ಇದರಿಂದ ಪಾರಾಗಲು ದಾರಿ ಕಾಣದೇ ಒದ್ದಾಡುತ್ತಿದ್ದ ಆತ ತನ್ನ ಮರಣಾನಂತರ ದೊರೆಯುವ ಜೀವವಿಮೆ ಹಣವನ್ನು ಬದುಕಿದ್ದಾಗಲೇ ಲಪಟಾಯಿಸಲು ಪತ್ನಿ ಜತೆಗೂಡಿ ತಂತ್ರ ರೂಪಿಸಿದ್ದ.

ಅದರಂತೆ ಭಿಕ್ಷುಕನೊಬ್ಬನನ್ನು ಮಾತನಾಡಿಸಿ ವಿಶ್ವಾಸಕ್ಕೆ ಪಡೆದಿದ್ದ ಮುನಿಸ್ವಾಮಿಗೌಡ ತನ್ನೊಂದಿಗೆ ಕಾರಿನಲ್ಲಿ ಭಿಕ್ಷುಕನನ್ನು ಕೂರಿಸಿಕೊಂಡು ಪ್ರಯಾಣ ಆರಂಭಿಸಿದ್ದ. ಮಾರ್ಗಮಧ್ಯ ಗೊಲ್ಲರ ಹೊಸಳ್ಳಿ ಗೇಟ್‌ ಬಳಿ ಕಾರಿನ ಚಕ್ರ ಪಂಕ್ಚರ್‌ ಆಗಿದ್ದು ಚಕ್ರ ಬದಲಿಸುವಂತೆ ಭಿಕ್ಷುಕನಿಗೆ ಹೇಳಿದ್ದ.

ಅದರಂತೆ ಆತ ಪಂಕ್ಚರ್‌ ಆದ ಚಕ್ರ ಬಿಚ್ಚಲು ಕುಳಿತಿದ್ದಾಗ ಆತನ ಕುತ್ತಿಗೆಗೆ ಚೈನ್‌ ಹಾಕಿ ಎಳೆದು ರಸ್ತೆಗೆ ಬೀಳಿಸಿದ್ದ. ಆಗ ಆತನ ಸಂಚಿನಂತೆ ಹಿಂಬಾಲಿಸಿಕೊಂಡು ಬಂದಿದ್ದ ಲಾರಿ ಚಾಲಕ ಲಾರಿಯನ್ನು ಭಿಕ್ಷುಕನ ಮೇಲೆ ಹರಿಸಿ ಕೊಲೆಗೈದಿದ್ದ. ನಂತರ ಲಾರಿ, ಕಾರುಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ ಲಾರಿ ಚಾಲಕ ಹಾಗೂ ಮುನಿಸ್ವಾಮಿಗೌಡ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದರು.

ಮುನಿಸ್ವಾಮಿಗೌಡನ ಸಂಬಂಧಿಕರಾದ ಶಿಡ್ಲಘಟ್ಟ ಸಿಪಿಐ ಶ್ರೀನಿವಾಸ್‌‍ ಕೂಡ ಆತ ಸತ್ತಿದ್ದಾನೆ ಎಂದು ಎಲ್ಲರಂತೆ ನಂಬಿ ಸಮಾಧಿಗೆ ಹೂವಿನ ಹಾರ ಹಾಕಿ ಬಂದಿದ್ದರು. ಆದರೆ ಅಜ್ಞಾತ ಸ್ಥಳದಲ್ಲಿದ್ದ ಮುನಿಸ್ವಾಮಿಗೌಡನಿಗೆ ಹೊರಗೆ ಏನು ನಡೆಯುತ್ತಿದೆ ಎಂದು ಗೊತ್ತಾಗದೆ ಕಂಗಾಲಾಗಿದ್ದ. ಪಾಪಪ್ರಜ್ಞೆಯಿಂದ ಅಸ್ವಸ್ಥಗೊಂಡು ಒತ್ತಡ ತಡೆಯಲಾರದೇ ಸಂಬಂಧಿಕ ಸಿಪಿಐ ಶ್ರೀನಿವಾಸ್‌‍ ಎದುರು ಹಾಜರಾಗಿದ್ದಾನೆ.

ಮೃತಪಟ್ಟಿದ್ದ ಸಂಬಂಧಿ ಮುನಿಸ್ವಾಮಿಗೌಡ ಜೀವಂತವಾಗಿರುವುದನ್ನು ಕಂಡು ಸಿಪಿಐ ಅಚ್ಚರಿಗೊಂಡಿದ್ದಾರೆ. ಅವರಿಗೂ ಸುಳ್ಳು ಹೇಳಿದ ಆರೋಪಿ ತಾನು ಅಪಘಾತದಲ್ಲಿ ಕಾರು ಗುದ್ದಿಸ್ದೆಿ. ಆತ ಮೃತಪಟ್ಟಿದ್ದಾನೆ ಎಂದು ಹೇಳಿದ್ದ. ಆತನ ಮಾತಿನಿಂದ ಅನುಮಾನಗೊಂಡ ಅವರು ಆತನನ್ನು ಗಂಡಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.

ಅತ್ತ ಪತಿಯ ಸಾವಿನ ದುಃಖದಲ್ಲಿರುವಂತೆ ನಟಿಸುತ್ತಿದ್ದ ಶಿಲ್ಪಾ ಅದುವರೆಗೂ ತನಿಖೆಗೆ ಸಹಕಾರ ನೀಡಿರಲಿಲ್ಲ. ಮುನಿಸ್ವಾಮಿಗೌಡ ತಮ ವಶಕ್ಕೆ ಸಿಕ್ಕಿರುವ ವಿಷಯ ತಿಳಿಸದೇ ಪೊಲೀಸರು ವಿಚಾರಣೆ ನಡೆಸಿದಾಗ ಆಕೆ ನಾಟಕ ಮುಂದುವರಿಸಿದ್ದಳು. ತಕ್ಷಣ ಪೊಲೀಸರು ಆಕೆಯ ಪತಿಯನ್ನು ಮುಂದೆ ನಿಲ್ಲಿಸಿದಾಗ ಕಕ್ಕಾಬಿಕ್ಕಿಯಾದ ಆಕೆ ಸತ್ಯ ಬಾಯ್ದಿಟ್ಟಿದ್ದಾಳೆ.

ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದು ಈ ಖತರ್ನಾಕ್‌ ದಂಪತಿಯ ಸಂಚಿಗೆ ಬಲಿಯಾದ ಅಮಾಯಕನ ಗುರುತು ಇನ್ನೂ ಪತ್ತೆಯಾಗಬೇಕಾಗಿದೆ. ಲಾರಿ, ಕಾರು ವಶಕ್ಕೆ ಪಡೆದಿರುವ ಪೊಲೀಸರು ಲಾರಿ ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

RELATED ARTICLES

Latest News