ಬೆಂಗಳೂರು,ಆ.26- ಸ್ತ್ರೀ ಕುಲಕ್ಕೆ ರಕ್ಷಣೆ ಕೊಡಲಾಗದ ಸರ್ಕಾರ ಇದ್ದರೂ ಸತ್ತಂತೆ, ಇದನ್ನು ಕಾಂಗ್ರೆಸ್ ಸರ್ಕಾರ ಆತವಿಮರ್ಶೆ ಮಾಡಿಕೊಳ್ಳಲಿ, ಅರಿಸಿನ ಕುಂಕುಮದ ಬಣ್ಣವನ್ನೇ ಧ್ವಜವಾಗಿಸಿಕೊಂಡಿರುವ ಕನ್ನಡನಾಡಿನಲ್ಲಿ ಈ ಪರಿಯ ಮಹಿಳಾ ಪೀಡನೆ ನಡೆದಿರುವುದು ಇಡೀ ರಾಜ್ಯವೇ ತಲೆತಗ್ಗಿಸುವ ಸಂಗತಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ದ ವಾಗ್ದಳಿ ನಡೆಸಿದ್ದಾರೆ.
ಈ ಕುರಿತು ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲೇ ಮುಳುಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಳೆದ 7 ತಿಂಗಳಲ್ಲೇ 340 ಅತ್ಯಾಚಾರ ಪ್ರಕರಣಗಳು ದಾಖಲಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ ಅತ್ಯಾಚಾರಿಗಳ ರಾಜ್ಯ, ಹೆಣ್ಣುಮಕ್ಕಳ ಪಾಲಿಗೆ ಅಸುರಕ್ಷಿತ ತಾಣ ಎಂಬ ಕೆಟ್ಟ ಹೆಸರು ಬರುತ್ತಿದೆ. ಇದು ಮಹಾ ಶಿವಶರಣೆ ಅಕ್ಕಮಹಾದೇವಿ ನಡೆದಾಡಿದ ಕ್ಷೇತ್ರ, ಕಿತ್ತೂರು ಚೆನ್ನಮನ ನಾಡು, ಒನಕೆ ಓಬವ್ವಳ ಛಲ ಮೆರೆದ ನೆಲ, ಕೆಳದಿ ಚೆನ್ನಮ, ಬೆಳವಡಿ ಮಲ್ಲಮ, ರಾಣಿ ಅಬ್ಬಕ್ಕ ಮೊದಲಾದ ವೀರನಾರಿಯರು ಶೌರ್ಯ ಮೆರೆದ ಹೆಮೆಯ ಬೀಡು ಎಂದು ಹೇಳಿಕೊಳ್ಳಲು ಹಿಂಜರಿಯುವಷ್ಟು ನಾರಿ ಕುಲಕ್ಕೆ ರಕ್ಷಣೆ ನೀಡಲಾಗದ ಪರಿಸ್ಥಿತಿ ರಾಜ್ಯದಲ್ಲಿ ಉದ್ಭವವಾಗಿದೆ ಎಂದು ಸರ್ಕಾರವನ್ನು ವಿಜಯೇಂದ್ರ ತರಾಟೆಗೆ ತೆಗೆದುಕೊಂಡಿದ್ದಾರೆ.